ಸಿಎಎ ವಿರುದ್ಧ ಲಂಡನ್‌ನಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ: ಸಾವಿರಾರು ವಿದ್ಯಾರ್ಥಿಗಳು, ಅನಿವಾಸಿ ಭಾರತೀಯರು ಭಾಗಿ

Update: 2020-01-26 17:32 GMT

  ಲಂಡನ್,ಜ.26: ಮೋದಿ ಸರಕಾರವು ಜಾರಿಗೊಳಿಸಿರುವ ನೂತನ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಸಾವಿರಾರು ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಅನಿವಾಸಿ ಭಾರತೀಯ ಸಮುದಾಯದ ಸಂಘಟನೆಗಳ ಪ್ರತಿನಿಧಿಗಳು ಮತ್ತು ಮಾನವಹಕ್ಕು ಸಂಘಟನೆಗಳ ಕಾರ್ಯಕರ್ತರು ಲಂಡನ್‌ನ ಡೌನಿಂಗ್ ರಸ್ತೆಯಲ್ಲಿ ರವಿವಾರ ಬೃಹತ್ ಪ್ರತಿಭಟನೆ ನಡೆಸಿದರು.

ಬ್ರಿಟನ್‌ನ ವಿವಿಧ ವಿದ್ಯಾರ್ಥಿ ಒಕ್ಕೂಟಗಳು ಹಾಗೂ ಭಾರತೀಯ ಸಂಘಟನೆಳು ಜಂಟಿಯಾಗಿ ಆಯೋಜಿಸಿದ್ದ ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿ ಒಂದು ಮೈಲು ದೂರದವರೆಗೆ ಕಾಲ್ನಡಿಗೆ ಜಾಥಾ ನಡೆಸಿ, ಭಾರತದ ಹೈಕಮಿಶನರ್ ಕಚೇರಿ ಮುಂದೆ ಜಮಾಯಿಸಿದರು.

‘ಸಂವಿಧಾನ ರಕ್ಷಿಸಿ’, ‘ ಭಾರತದ ವಿಭಜನೆ ನಿಲ್ಲಿಸಿ’, ‘ಭಾರತದಲ್ಲಿ ಜನಾಂಗೀಯ ವಾದದ ವಿರುದ್ಧ ಒಗ್ಗೂಡಿ’ ಹಾಗೂ ‘ಧರ್ಮದ ಆಧಾರದಲ್ಲಿ ಯಾವುದೇ ಪೌರತ್ವವನ್ನು ನೀಡದಿರಿ’ ಎಂಬ ಘೋಷಣೆಗಳಿರುವ ಭಿತ್ತಿಫತ್ರಗಳನ್ನು ಹಿಡಿದಿದ್ದರು.

 ಬ್ರಿಟನ್‌ನ ವಿವಿಧೆಡೆಯಿಂದ ವಿವಿಧ ಧರ್ಮಗಳ ನೂರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯು ಭಾರತದ ಸಂವಿಧಾನ ಪ್ರತಿಪಾದಿಸುವ ಜಾತ್ಯತೀತತೆಯನ್ನು ಉಲ್ಲಂಘಿಸುವುದರಿಂದ ಅದನ್ನು ಹಿಂತೆಗೆದುಕೊಳ್ಳ ಬೇಕೆಂದು ಅವರು ಆಗ್ರಹಿಸಿದರು.

 ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಪಿಆರ್)ಯನ್ನು ಕೂಡಾ ರದ್ದುಪಡಿಸಬೇಕೆಂದು ಪ್ರತಿಭಟನಕಾರರು ಕರೆ ನೀಡಿದರು. ಸಿಎಎ ಜೊತೆಗೂಡಿ ಈ ಎರಡು ಪ್ರಕ್ರಿಯೆಗಳು ದೊಡ್ಡ ಪ್ರಮಾಣದ ಭಾರತದ ಮುಸ್ಲಿಂ ಜನಸಂಖ್ಯೆಯ ಪೌರತ್ವದ ಹಕ್ಕನ್ನು ಕಸಿದುಕೊಳ್ಳುವ ದುರುದ್ದೇಶವನ್ನು ಹೊಂದಿವೆಯೆಂದು ಅವರು ಆತಂಕ ವ್ಯಕ್ತಪಡಿಸಿದರು.

   ಪ್ರತಿಭಟನಾ ಸಭೆಯಲ್ಲಿ ಬ್ರಿಟನ್‌ನ ಪ್ರಮುಖ ಪ್ರತಿಪಕ್ಷವಾದ ಲೇಬರ್‌ ಪಾರ್ಟಿಯ ಸಂಸದ ಸ್ಯಾಮ್ ಟ್ಯಾರಿ ಮಾತನಾಡಿ, ‘‘ಯಾವುದೇ ದೇಶದಲ್ಲಿ ನಡೆಯುವ ಮಾನವಹಕ್ಕು ಉಲ್ಲಂಘನೆಯು ಅಂತಾರಾಷ್ಟ್ರೀಯ ವಿಷಯವಾಗಿರುವುದು’’ ಎಂದು ಹೇಳಿದರು.

‘  ‘ನಾವು ಯಾವುದೇ ಭಾರತ ವಿರೋಧಿ ಪ್ರತಿಭಟನೆ ನಡೆಸಲು ಇಲ್ಲಿ ಸೇರಿಲ್ಲ. ನಾವು ಭಾರತ ಪರವಾದ ಪ್ರದರ್ಶನವನ್ನು ಇಲ್ಲಿ ನಡೆಸುತ್ತಿದ್ದೇವೆ. ದೇಶದ ಭವಿಷ್ಯತ್ತಿಗೆ ಒಳಿತು ಮಾಡದ ಕಾನೂನುಗಳ ವಿರುದ್ಧ ನಾವು ಧ್ವನಿಯೆತ್ತುವುದು ಅತ್ಯಂತ ಮುಖ್ಯವಾದುದಾಗಿದೆ’’ ಎಂದು ಪೂರ್ವ ಲಂಡನ್ ಕ್ಷೇತ್ರದ ಸಂಸದರಾದ ಸ್ಯಾಮ್ ಟ್ಯಾರಿ ಹೇಳಿದರು.

 ಸಿಎಎ ವಿರೋಧಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಲೇಬರ್ ಪಕ್ಷದ ಸಂಸದರಾದ ಸ್ಟೀಫನ್ ಟಮ್ಸ್, ಕ್ಲೈವ್ ಲೂಯಿಸ್ ಹಾಗೂ ನೂತನವಾಗಿ ಸಂಸತ್ ಆಯ್ಕೆಯಾದ ಭಾರತೀಯ ಮೂಲದ ಸಂಸದೆ ನಾಡಿಯಾ ವೈಟೊಮ್ ಅವರು ಬರೆದಿರುವ ಪತ್ರಗಳನ್ನು ಸಭೆಯಲ್ಲಿ ಓದಿ ಹೇಳಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News