ವಿಶ್ವಭಾರತಿ ವಿವಿ ಕುಲಪತಿ ವಿರುದ್ಧ ಎಫ್‌ಐಆರ್ ದಾಖಲು

Update: 2020-01-26 17:53 GMT

ಕೋಲ್ಕತಾ, ಜ.26: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ‘ಸರಿಯಾದ ಮದ್ದು ಅರೆಯಬೇಕು’ ಎಂಬ ಹೇಳಿಕೆ ನೀಡಿರುವ ಆರೋಪದಡಿ ಪಶ್ಚಿಮ ಬಂಗಾಳದ ವಿಶ್ವಭಾರತಿ ವಿವಿಯ ಕುಲಪತಿ ಬಿದ್ಯುತ್ ಚಕ್ರವರ್ತಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರುವುದಾಗಿ ವರದಿಯಾಗಿದೆ.

ಕುಲಪತಿಯ ಹೇಳಿಕೆಯ ವೀಡಿಯೊ ದೃಶ್ಯಾವಳಿ ವೈರಲ್ ಆದ ಬಳಿಕ ಅವರ ವಿರುದ್ಧ ವಿವಿಯ ವಿದ್ಯಾರ್ಥಿಗಳ ಸಂಘಟನೆಯೊಂದು ದೂರು ನೀಡಿತ್ತು. ಜನವರಿ 7ರಂದು ಈ ವೀಡಿಯೊ ದೃಶ್ಯದ ತುಣುಕು ಚಿತ್ರೀಕರಿಸಲಾಗಿದೆ ಎನ್ನಲಾಗಿದೆ. ಪೌರತ್ವ ಕಾಯ್ದೆಯನ್ನು ಬೆಂಬಲಿಸಿ ವಿವಿಯ ಕ್ಯಾಂಪಸ್‌ನಲ್ಲಿ ಜನವರಿ 6ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸ್ವಪನ್ ದಾಸ್‌ಗುಪ್ತಾರಿಗೆ ಮಾತನಾಡಲು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯವರು ಅಡ್ಡಿಪಡಿಸಿದ್ದರು. ಮರುದಿನ , ಈ ಪ್ರತಿಭಟನೆಯ ಫೋಟೋವನ್ನು ತೋರಿಸಿ ಮಾತನಾಡಿದ್ದ ಕುಲಪತಿ ಬಿದ್ಯುತ್ ಚಕ್ರವರ್ತಿ, ಇಂತವರಿಗೆ ಸರಿಯಾದ ಮದ್ದು ಅರೆಯಬೇಕಿತ್ತಲ್ಲವೇ ಎಂದು ಹೇಳಿರುವುದು ವೀಡಿಯೊದಲ್ಲಿ ದಾಖಲಾಗಿದೆ.

ಇದಕ್ಕೆ ಅಲ್ಲಿ ಸೇರಿದ್ದ ವಿದ್ಯಾರ್ಥಿಗಳು, ನಿಮ್ಮ ಅನುಮತಿಯಿಲ್ಲದೆ ನಾವೇನೂ ಮಾಡುವಂತಿಲ್ಲ ಅಲ್ಲವೇ ಎಂದು ಉತ್ತರಿಸಿರುವುದು ವೀಡಿಯೊ ದೃಶ್ಯದಲ್ಲಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಉಪಕುಲಪತಿ ನಿರಾಕರಿಸಿದ್ದಾರೆ. ವೀಡಿಯೊದಲ್ಲಿರುವ ಧ್ವನಿ ಕುಲಪತಿಯವರದ್ದಲ್ಲ . ಇದು ತಿರುಚಿದ ವೀಡಿಯೊ ಹೇಳಿಕೆ . ವಿವಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಮಾಡಿರುವ ಕೃತ್ಯವಾಗಿದೆ ಎಂದು ವಿವಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಅನೀರ್ಬನ್ ಸರ್ಕಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News