ಅಂಬೇಡ್ಕರ್ ಪರಿಶ್ರಮದಿಂದ ವಿಶ್ವಕ್ಕೆ ಮಾದರಿಯಾಗಿ ರೂಪುಗೊಂಡ ದೇಶದ ಸಂವಿಧಾನ: ಕೆ.ಎಸ್. ಈಶ್ವರಪ್ಪ

Update: 2020-01-26 18:09 GMT

ಶಿವಮೊಗ್ಗ, ಜ. 26: ಡಾ. ಬಿ. ಆರ್. ಅಂಬೇಡ್ಕರ್ ಅವರ ಅವಿರತ ಪ್ರಯತ್ನದ ಫಲವಾಗಿ ವಿಶ್ವಕ್ಕೆ ಮಾದರಿಯಾಗಿರುವ ನಮ್ಮ ಸಂವಿಧಾನ ರೂಪುಗೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪತಿಳಿಸಿ್ದಾರೆ.

ನಗರದ ಡಿ.ಎ.ಆರ್. ಮೈದಾನದಲ್ಲಿ ರವಿವಾರ ಜಿಲ್ಲಾಡಳಿತ ಹಮ್ಮಿ ಕೊಂಡಿದ್ದ ಗಣರಾಜೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಸಾರ್ವಜನಿಕರನ್ನು್ದೇಶಿಸಿ ಅವರು ಸಂದೇಶ ನೀಡಿದರು.

ಅವಿಚ್ಛಿನ್ನ ದೇಶಪ್ರೇಮ ಮತ್ತು ಅದ್ಭುತ ಅನುಭವೀ ಪಾಂಡಿತ್ಯದಿಂದಾಗಿ ನಮಗೆ ಈ ಸಂವಿಧಾನ ದೊರೆತಿದೆ. ವಿಶ್ವದಲ್ಲಿಯೇ ಅತ್ಯಂತ ಸುದೀರ್ಘವಾದ, ಅತ್ಯಂತ ಸುಸಂಬದ್ಧವಾದ ಲಿಖಿತ ಸಂವಿಧಾನ ನಮ್ಮದು ಎಂದರು.

 ಸಂವಿಧಾನ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡು ಅವರು ಬದುಕು ಕಟ್ಟಿಕೊಳ್ಳುವಂತೆ ರೂಪಿಸಿರುವ ಸುಸಂಬದ್ಧ-ವ್ಯವಸ್ಥೆಯ ಹಂದರ. ಸಾಮಾನ್ಯ ಪ್ರಜೆಯೂ ಬಾಳು ರೂಪಿಸಲೆಂದು ಹಚ್ಚಿಟ್ಟಿರುವ ಬೆಳ್ಳಿಯ ಹಣತೆ ಎಂದು ತಿಳಿಸಿದರು.

ವಿಶ್ವದ ಭೂಪಟದಲ್ಲಿ ಹಲವು ಭಾಷೆ, ಧರ್ಮ, ಪ್ರಾಂತ್ಯಗಳಿಂದ ಕೂಡಿರುವ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಏಕೈಕ ರಾಷ್ಟ್ರ ನಮ್ಮ ಭಾರತ. ಐಕ್ಯತೆ, ಸಮಗ್ರತೆ ಕಾಪಾಡಿಕೊಳ್ಳುವ ಮೂಲಕ ಸದೃಢ ರಾಷ್ಟ್ರವಾಗಿ ಭಾರತ ಬೆಳೆದು ನಿಂತಿದೆ ಎಂದರು.

ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ರೂಪಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ಅನುಷ್ಟಾನಗೊಳಿಸಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ ಪ್ರತಿಯೊಬ್ಬರಿಗೂ ಸೂರಿನ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಆಶ್ರಯ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಎಲ್ಲರೂ, ಸ್ವಂತ ಮನೆಯನ್ನು ಹೊಂದುವ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ, ಯೋಜನೆ ರೂಪಿಸಿ ಕಾರ್ಯ ಪ್ರವೃತ್ತರಾಗಿರುವುದಾಗಿ ಈಶ್ವರಪ್ಪ ನುಡಿದರು.

ಇದೇ ಮೊದಲ ಬಾರಿಗೆ ಕಾರ್ಖಾನೆ ಕಾರ್ಮಿಕರಿಗೆ ಮನೆಗಳನ್ನು ನೀಡಲು ಯೋಜನೆ ರೂಪಿಸಲಾಗಿದೆ. ಎರಡು ಸಾವಿರ ಮಂದಿ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಲು ಸಿದ್ಲೀಪುರದಲ್ಲಿ 20ಎಕರೆ ಜಾಗ ಗುರುತಿಸಲಾಗಿದ್ದು, ಫಲಾನುಭವಿಗಳ ಪಟ್ಟಿಗೆ ಆದಷ್ಟು ಬೇಗನೆ ಮಂಜೂರಾತಿ ನೀಡಲಾಗುವುದು. ಭದ್ರಾವತಿಯಲ್ಲಿ 4 ಸಾವಿರ ಜನರಿಗೆ ಜಿ+3 ಮಾದರಿಯಲ್ಲಿ ಮನೆಗಳ ನಿರ್ಮಾಣಕ್ಕಾಗಿ ಒಟ್ಟು 36 ಎಕರೆ ಜಾಗ ಗುರುತಿಸಲಾಗಿದೆ.

ಕೆ.ಎಸ್. ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News