ಬುದ್ಧಿಶಕ್ತಿಯ ಹಲವು ನೆಲೆಗಳು...

Update: 2020-01-26 18:30 GMT

 ಕನ್ನಡ ಭಾಷೆ, ಶಿಕ್ಷಣಕ್ಕೆ ಸಂಬಂಧಿಸಿ ಹತ್ತು ಹಲವು ಮಹತ್ವ ಪೂರ್ಣ ಕೃತಿಗಳನ್ನು ಬರೆದಿರುವ ಡಾ. ಮಹಾಬಲೇಶ್ವರ ರಾವ್ ಅವರ ಇನ್ನೊಂದು ಸಂಶೋಧನಾ ಕೃತಿ ‘ಬುದ್ಧಿ ಶಕ್ತಿ ಒಂದಲ್ಲ, ಹಲವು’. ಹಲವಾರು ಮನೋವಿಜ್ಞಾನಿಗಳು ಮನುಷ್ಯನ ಬುದ್ಧಿಶಕ್ತಿಯ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಅವರಲ್ಲಿ ಹೋವರ್ಡ್ ಗಾರ್ಡ್ನರ್ ಬುದ್ಧಿಶಕ್ತಿಯು ಒಂದೇ ಅಲ್ಲ, ಬಹುವಿಧ ಬುದ್ಧಿಶಕ್ತಿಗಳಿವೆ ಎಂದು ಪ್ರತಿಪಾದಿಸಿ ಮನೋವಿಜ್ಞಾನ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಚಿಂತನೆಯನ್ನು ಹುಟ್ಟಿ ಹಾಕಿದ್ದಾರೆ. ಈ ಬಗ್ಗೆ ಹಲವು ಗ್ರಂಥಗಳನ್ನು ಬರೆದು ಸುಮಾರು ಒಂಬತ್ತು ರೀತಿಯ ಬುದ್ಧಿಶಕ್ತಿಗಳಿವೆಯೆಂದು ಮನೋವಿಜ್ಞಾನ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದ್ದಾನೆ. ಅದರ ಸಾರವನ್ನು ಈ ಕಿರುಕೃತಿಯಲ್ಲಿ ರಾವ್ ಅವರು ನೀಡಿದ್ದಾರೆ. ಬುದ್ಧಿ ಶಕ್ತಿಯ ಬಗೆಗಿನ ಸಾಂಪ್ರದಾಯಿಕ ದೃಷ್ಟಿ, ಬುದ್ಧಿ ಸೂಚ್ಯಂಕ ಆಧಾರಿತ ಪರೀಕ್ಷೆಗಳು, ಬಹುವಿಧ ಬುದ್ಧಿ ಶಕ್ತಿಗಳ ಸಿದ್ಧಾಂತ, ಅದರ ಶೈಕ್ಷಣಿಕ ಪ್ರಾಯೋಗಿಕತೆ ಹಾಗೂ ಸಿದ್ಧಾಂತದ ಬಗ್ಗೆ ಉದ್ಭವಿಸಿರುವ ಟೀಕೆ ಟಿಪ್ಪಣಿಗಳನ್ನು ಸಾರ ರೂಪದಲ್ಲಿ ಈ ಕೃತಿ ಹಿಡಿದಿಡುತ್ತದೆ.

ಬುದ್ಧಿ ಶಕ್ತಿ ಎಂದರೇನು?, ಅದರ ನಾನಾ ಸಿದ್ಧಾಂತಗಳು, ಬಹುವಿಧ ಬುದ್ಧಿ ಶಕ್ತಿಗಳ ಜನಕ, ಬುದ್ಧಿಶಕ್ತಿಯ ಕುರಿತಂತೆ ಮೂರು ಅರ್ಥಗಳು, ಬುದ್ಧಿ ಶಕ್ತಿ ಪರೀಕ್ಷೆಗಳು, ಶೈಕ್ಷಣಿಕ ನಿಹಿತಾರ್ಥಗಳು, ವೌಲ್ಯ ಮಾಪನದ ನವೀನ ದೃಷ್ಟಿ, ಲೋಕ ಸಂಚಾರ, ಭವಿಷ್ಯ ಮತ್ತು ಟೀಕೆಗಳು....ಹೀಗೆ ಬೇರೆ ತಲೆಬರಹಗಳಲ್ಲಿ ಬೌದ್ಧಿಕ ಕ್ರಿಯೆಗಳನ್ನು ವಿಶ್ಲೇಷಿಸಿದ್ದಾರೆ. ‘‘ಶಿಕ್ಷಣವೆಂದರೆ ಪ್ರಶ್ನೆಗಳಿಗೆ ಸರಿ ಉತ್ತರ ಪಡೆಯುವ ಕ್ರಿಯೆಯಲ್ಲ. ಭಾರತದಲ್ಲಿ ಅನೇಕ ಶಿಕ್ಷಕರು ಹೀಗೆ ಭಾವಿಸುತ್ತಾರೆ. ಅಮೆರಿಕದಲ್ಲಿ ವಿದ್ಯಾರ್ಥಿಗಳು ತಪ್ಪು ಉತ್ತರಗಳನ್ನು ನೀಡಿದಾಗ ಶಿಕ್ಷಕರು ಆ ಬಗ್ಗೆಯೇ ತುಂಬಾ ಶೋಧನೆ ಮಾಡುತ್ತಾರೆ. ವಿದ್ಯಾರ್ಥಿಗಳು ಯಾಕೆ ಹೀಗೆ ಉತ್ತರ ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿಕೊಳ್ಳುತ್ತಾೆ. ವಿದ್ಯಾರ್ಥಿಗಳು ಕೊಡುವ ತಪ್ಪು ಉತ್ತರಗಳ ಹಿಂದೆ ಅವರದ್ದೇ ಆದ ಒಂದು ತರ್ಕವಿರುತ್ತದೆ. ಕೆಲವೊಮ್ಮೆ ಯಾವುದೇ ಸುಳಿವಿಲ್ಲದೆ ಸರಿ ಉತ್ತರ ಕೊಟ್ಟು ಬಿಡುತ್ತಾರೆ. ಆದುದರಿಂದ ಶಿಕ್ಷಕರು ಮಕ್ಕಳು ಕೊಡುವ ತಪ್ಪು ಉತ್ತರಗಳನ್ನು ಪರಾಮರ್ಶಿಸಬೇಕು. ತಪ್ಪು ಎಂದು ತಿರಸ್ಕರಿಸಬಾರದು’’ ಎನ್ನುವ ಗಾರ್ಡ್ನರ್ ಅಭಿಪ್ರಾಯ ಭಾರತದ ಶಿಕ್ಷಣ ಪದ್ಧತಿಗೆ ಅತ್ಯಗತ್ಯವಾಗಿ ಅನ್ವಯವಾಗಬೇಕು ಎಂಬ ಆಶಯವನ್ನು ಈ ಕೃತಿ ಹೊಂದಿದೆ.

ನವ ಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 80 ಮುಖಬೆಲೆ 80 ರೂ. ಆಸಕ್ತರು 080-22161900 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News