ಕೊರೋನಾ:​ ಚೀನಾದಲ್ಲಿ 80 ದಾಟಿದ ಸಾವಿನ ಸಂಖ್ಯೆ

Update: 2020-01-27 06:08 GMT

ಬೀಜಿಂಗ್, ಜ.27: ಚೀನಾದಲ್ಲಿ ಕೊರೋನಾ ವೈರಸ್ ದಾಳಿಗೆ ತುತ್ತಾಗಿ ಮೃತಪಟ್ಟವರ ಸಂಖ್ಯೆ 80 ದಾಟಿದೆ. ಸಾಂಕ್ರಾಮಿಕ ಹರಡುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ಹೊಸ ಸೌರ ವರ್ಷದ ರಜೆಯನ್ನು ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.

ಹೊಸ ವರ್ಷಾರಂಭದ ರಜೆ ಸಂದರ್ಭದಲ್ಲಿ ಲಕ್ಷಾಂತರ ಮಂದಿ ಚೀನೀಯರು ತಮ್ಮ ನಗರಗಳನ್ನು ಬಿಟ್ಟು ಹುಟ್ಟೂರಿಗೆ ಬರುತ್ತಾರೆ. ಸುಮಾರು 300 ಕೋಟಿ ಪ್ರಯಾಣಗಳು ಈ ಅವಧಿಯಲ್ಲಿ ಆಯೋಜಿಸಲ್ಪಡುತ್ತವೆ. ಈ ಹಿನ್ನೆಲೆಯಲ್ಲಿ ರಜೆಯನ್ನು ಜನವರಿ 30ರ ನಂತರವೂ ವಿಸ್ತರಿಸಲಾಗುತ್ತಿದೆ ಎಂದು ಅಧಿಕೃತ ಮಾಧ್ಯಮ ಕ್ಸಿನ್‌ಹುವಾ ಪ್ರಕಟಿಸಿದೆ. ಚೀನಾದ ಪ್ರಧಾನಿ ಲೀ ಕೆಕ್ವಿಯಾಂಗ್ ಜತೆಗೆ ಉನ್ನತ ಅಧಿಕಾರಿಗಳು ನಡೆಸಿದ ಸಭೆಯ ಬಳಿಕ ಈ ಪ್ರಕಟನೆ ಹೊರಬಿದ್ದಿದೆ.

ವೈರಸ್ ಸೋಂಕು ಹರಡುವುದನ್ನು ತಡೆಯಲು ಕ್ಸಿ ಜಿಂಗ್‌ಪಿಂಗ್ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದ್ದರೂ, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ದೇಶದಲ್ಲಿ 2000ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, ಕನಿಷ್ಠ 80 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ಚೀನಾ ಸರ್ಕಾರದ ಟಿವಿ ಪ್ರಕಟಿಸಿದೆ.

ವಿಶ್ವಾದ್ಯಂತ ವರದಿಯಾದ ಪ್ರಕರಣಗಳ ಪೈಕಿ ಶೇಕಡ 98ರಷ್ಟು ಪ್ರಕರಣಗಳು ಚೀನಾದಿಂದ ವರದಿಯಾಗಿದ್ದು, ಹಲವು ದೇಶಗಳಲ್ಲಿ ಕೂಡಾ ಈ ಸಮಸ್ಯೆ ತಲೆದೋರಿದೆ. ಚೀನಾದ ಹೊರಗೆ ಬೆಳಕಿಗೆ ಬಂದಿರುವ 29 ಪ್ರಕರಣಗಳ ಪೈಕಿ 26 ಮಂದಿ, ಸಾಂಕ್ರಾಮಿಕ ಹರಡುತ್ತಿರುವ ಕೇಂದ್ರಬಿಂದು ಎನಿಸಿದ ವುಹಾನ್ ಪಟ್ಟಣದ ಮೂಲಕ ಪ್ರಯಾಣಿಸಿದವರು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.

ಅಮೆರಿಕದಲ್ಲಿ 24 ಗಂಟೆಗಳಲ್ಲಿ ಮೂರು ಪ್ರಕರಣಗಳು ದೃಢಪಟ್ಟಿದ್ದು, ಕ್ಯಾಲಿಫೋರ್ನಿಯಾದಲ್ಲಿ ಎರಡು ಹಾಗೂ ಮರಿಕೋಪಾ ಕಂಟ್ರಿಯಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಈ ಎಲ್ಲರೂ ವುಹಾನ್‌ಗೆ ತೆರಳಿದ್ದರು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರು.

ಚೀನಾದಲ್ಲಿ ಅಂದಾಜಿಸಿದ 2,700 ಪ್ರಕರಣಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿದ್ದು, ಶೇಕಡ 45ರಷ್ಟು ಪ್ರಕರಣಗಳು ದೃಢಪಟ್ಟಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವೈರಸ್ ಹರಡದಂತೆ ತಡೆಯುವ ಸಲುವಾಗಿ ವುಹಾನ್ ಮತ್ತು ಸುತ್ತಮುತ್ತಲ ಪಟ್ಟಣಗಳಲ್ಲಿ ಜನಸಂಚಾರ ನಿರ್ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News