ಸಂವಿಧಾನ ಪರ ಹೋರಾಟದ ತಾಯಿ ಹೃದಯ ‘ಶಾಹೀನ್ ಬಾಗ್’

Update: 2020-01-28 05:18 GMT

ಮಾಕ್ಸಿಂ ಗಾರ್ಕಿಯ ‘ತಾಯಿ’ ವಿಶ್ವ ಪ್ರಸಿದ್ಧ ಕಾದಂಬರಿ. ರಶ್ಯದಲ್ಲಿ ಶೋಷಕರ ದಬ್ಬಾಳಿಕೆಯ ವಿರುದ್ಧ ಕ್ರಾಂತಿ ಭುಗಿಲೆದ್ದಾಗ ಅನಕ್ಷರಸ್ಥ ಆದರೆ ಜಾಗೃತ ತಾಯಿಯೊಬ್ಬಳು ತನ್ನ ಕುಟುಂಬವನ್ನೇ ಒತ್ತೆಯಿಟ್ಟು ಅದರಲ್ಲಿ ಭಾಗಿಯಾಗುವ ಕಥಾವಸ್ತುವನ್ನು ಇದು ಹೊಂದಿದೆ. ರಶ್ಯ ಕ್ರಾಂತಿಯಲ್ಲಿ ಮಹಿಳೆಯರ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ. ಯಾವುದೇ ಕ್ರಾಂತಿ ತನ್ನೊಳಗೊಂದು ತಾಯಿ ಹೃದಯವನ್ನು ಬಚ್ಚಿಟ್ಟುಕೊಂಡಿರುತ್ತದೆ. ಅಂತಹ ಕ್ರಾಂತಿ ಮಾತ್ರ ಜನಸಮುದಾಯದ ಬದುಕನ್ನು ತನ್ನ ಮಡಿಲಲ್ಲಿಟ್ಟು ಪೊರೆಯಬಲ್ಲದು. ಅದಕ್ಕೆ ರೂಪಕವಾಗುತ್ತಾಳೆ ಮಾಕ್ಸಿಂ ಗಾರ್ಕಿಯ ‘ತಾಯಿ’. ಭಾರತದ ಸ್ವಾತಂತ್ರ ಇತಿಹಾಸದಲ್ಲೂ ಮಹಿಳೆಯರ ಪಾತ್ರ ಬಹುದೊಡ್ಡದು. ಬ್ರಿಟಿಷರ ವಿರುದ್ಧ ಕತ್ತಿ ಹಿರಿದು ನಿಂತ ಕಿತ್ತೂರು ಚೆನ್ನಮ್ಮ, ಲಕ್ಷ್ಮೀ ಬಾಯಿ, ಹಝರತ್ ಮಹಲ್‌ರಂತಹ ರಾಣಿಯರು ಮಾತ್ರವಲ್ಲ, ಗಾಂಧೀಜಿಯ ಅಹಿಂಸಾ ಸತ್ಯಾಗ್ರಹದಲ್ಲಿ ಗಾಂಧಿ ಜೊತೆಗೆ ಹೆಜ್ಜೆಗೆ ಹೆಜ್ಜೆಯಿಟ್ಟ ಕಸ್ತೂರ್ಬಾ ಕೂಡ ಇತಿಹಾಸದಲ್ಲಿ ಮಹತ್ವವನ್ನು ಪಡೆಯುತ್ತಾರೆ. ಜಲಿಯನ್‌ವಾಲಾಬಾಗ್‌ನಲ್ಲಿ ಮೃತಪಟ್ಟವರು ಪುರುಷರಷ್ಟೇ ಅಲ್ಲ, ಅಪಾರ ಸಂಖ್ಯೆಯಲ್ಲಿ ಮಹಿಳೆಯರೂ ಸೇರಿದ್ದಾರೆ. ಭಾರತ ಸಂಕಷ್ಟಕ್ಕೆ ಸಿಕ್ಕಿದಾಗಲೆಲ್ಲ ಎಡವಿದ ಮಗುವನ್ನು ಓಡಿ ಎತ್ತಿ ಕೊಳ್ಳುವಂತೆ ಧಾವಿಸಿದವರು ಮಹಿಳೆಯರೇ ಆಗಿದ್ದಾರೆ.

ಸಿಎಎ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ಈ ಕಾಯ್ದೆ ಧಕ್ಕೆ ತರುತ್ತಿರುವುದನ್ನು ವಿಶ್ವ ಆತಂಕದಿಂದ ಗಮನಿಸುತ್ತಿದೆ. ದೇಶದೊಳಗೆ ಎರಡನೆಯ ಸ್ವಾತಂತ್ರ ಹೋರಾಟದ ರೀತಿಯ ಚಳವಳಿ ವಿಸ್ತರಿಸಿಕೊಳ್ಳುತ್ತಿದೆ. ಆರಂಭದಲ್ಲಿ ಪೊಲೀಸರ ಕೋವಿ, ಲಾಠಿಗಳಿಂದ ಚಳವಳಿಯನ್ನು ನಿರ್ದಯವಾಗಿ ಸರಕಾರ ದಮನಿಸಿತು. ಸುಮಾರು 40ಕ್ಕೂ ಅಧಿಕ ಮಂದಿ ಹೋರಾಟದಲ್ಲಿ ಹುತಾತ್ಮರಾದರು. ನೂರಾರು ಮಂದಿ ಗಾಯಗೊಂಡಿದ್ದಾರೆ. ಹಲವರು ಜೈಲು ಸೇರಿದ್ದಾರೆ. ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯಗಳನ್ನು ತೊರೆದು ಬೀದಿಗಿಳಿದಿದ್ದಾರೆ. ಹೋರಾಟಗಾರರ ವಿರುದ್ಧ ಬ್ರಿಟಿಷರು ಹಾಕಿದ ಮೊಕದ್ದಮೆಗಳಿಗಿಂತಲೂ ಕ್ರೂರವಾದ ಮೊಕದ್ದಮೆಗಳನ್ನು ಸರಕಾರ ದಾಖಲಿಸುತ್ತಿದೆ. ಇಂತಹ ಸಂದರ್ಭದಲ್ಲೇ ದಿಲ್ಲಿಯ ಶಾಹೀನ್ ಬಾಗ್‌ನಲ್ಲಿ ಮಹಿಳೆಯರ ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆಯೊಂದು ಆರಂಭವಾಯಿತು. 20 ದಿನಗಳಿಂದ ನಡೆಯುತ್ತಿರುವ ಸಿಎಎ ವಿರುದ್ಧ ನಡೆಯುತ್ತಿರುವ ಈಪ್ರತಿಭಟನೆ ಇದೀಗ ಅಂತರ್‌ರಾಷ್ಟ್ರೀಯ ಮಟ್ಟದ ಪತ್ರಿಕೆಗಳ ಮುಖಪುಟದ ಸುದ್ದಿಯಾಗುತ್ತಿದೆ.

ತಮ್ಮ ಮಕ್ಕಳು, ಕುಟುಂಬಗಳನ್ನು ಬದಿಗಿಟ್ಟು ರಾತ್ರಿ ಹಗಲೆನ್ನದೇ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಹುತೇಕ ಮುಸ್ಲಿಮ್ ಮಹಿಳೆಯರೇ ಮುನ್ನಡೆಸುತ್ತಿರುವ ಈ ಪ್ರತಿಭಟನೆಗೆ ಜಾತಿ, ಲಿಂಗ, ಧರ್ಮ ಭೇದಗಳನ್ನು ಮರೆತು ದೇಶ ಕೈ ಜೋಡಿಸುತ್ತಿದೆ. ಹಾಗೆಂದು ಇದು ಅಕ್ಷರ ಕಲಿತ ಯುವತಿಯರ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಎಂದು ಭಾವಿಸಬೇಕಾಗಿಲ್ಲ. ಇದರ ನೇತೃತ್ವವನ್ನು ವಹಿಸಿದ ಮೂವರು ಮಹಿಳೆಯರೂ ಹಿರಿಯ ನಾಗರಿಕರು. ಜೊತೆಗೆ ಗೃಹಿಣಿಯರು, ತಾಯಂದಿರು ನೂರಾರು ಸಂಖ್ಯೆಯಲ್ಲಿ ಸರದಿಯಂತೆ ಇಲ್ಲಿ ನೆರೆದಿದ್ದಾರೆ. ಶಾಹೀನ್‌ಬಾಗ್ ಇನ್ನೊಂದು ವಿಶೇಷ ಕಾರಣದಿಂದ ರವಿವಾರ ಗುರುತಿಸಲ್ಪಟ್ಟಿದೆ. ಈ ದೇಶದ ಇತಿಹಾಸದಲ್ಲೇ ಮೊದಲಬಾರಿಗೆ ಅಂಬೇಡ್ಕರ್ ಬರೆದ ಸಂವಿಧಾನ ಜಾರಿಗೊಂಡ ‘ಗಣರಾಜ್ಯೋತ್ಸವ ದಿನ’ವನ್ನು ಇಲ್ಲಿ ಸಹಸ್ರಾರು ಜನರು ಒಂದಾಗಿ ಆಚರಿಸಿದರು. ಈವರೆಗೆ ಸರಕಾರಿ ಕಾರ್ಯಕ್ರಮವಾಗಿ ಮಾತ್ರ ಆಚರಿಸಲ್ಪಡುತ್ತಿದ್ದ ಗಣರಾಜ್ಯೋತ್ಸವ ಮೊದಲ ಬಾರಿಗೆ ಶಾಹೀನ್ ಬಾಗ್‌ನಲ್ಲಿ ‘ಜನ ರಾಜ್ಯೋತ್ಸವ’ವಾಗಿ ಪರಿವರ್ತನೆಗೊಂಡಿತು. ಸರಕಾರಿ ಕಚೇರಿಗಳಲ್ಲಿ ರಾಜಕಾರಣಿಗಳಿಂದ ಧ್ವಜಾರೋಹಣ ನಡೆಯುತ್ತಿರುವ ಹೊತ್ತಿನಲ್ಲೇ, ಶಾಹೀನ್‌ಬಾಗ್‌ನಲ್ಲಿ ರೋಹಿತ್‌ವೇಮುಲಾನ ತಾಯಿ ಧ್ವಜಾರೋಹಣಗೈದು ‘ಸಂವಿಧಾನ ಜಾರಿಗೊಂಡ ದಿನ’ವನ್ನು ಅರ್ಥಪೂರ್ಣವಾಗಿಸಿದರು. ಸಾವಿರಾರು ಮಹಿಳೆಯರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಪ್ರಜಾಪ್ರಭುತ್ವ ವೇಷದಲ್ಲಿರುವ ಸರ್ವಾಧಿಕಾರಿಗಳ ಕೈಯಲ್ಲಿ ಸಂವಿಧಾನ ನರಳುತ್ತಿರುವಾಗ ಅದರ ರಕ್ಷಣೆಗಾಗಿ ಈ ತಾಯಂದಿರು ಹಗಲು-ಇರುಳು ಎನ್ನದೇ, ಚಳಿ, ಬಿಸಿಲೆನ್ನದೆ ನಡೆಸುತ್ತಿರುವ ಹೋರಾಟ, ಸ್ವಾತಂತ್ರ ಕಾಲದ ದಿನಗಳನ್ನು ನೆನಪಿಸುವಂತಿದೆ. ಇಂದು ಅಂತರ್‌ರಾಷ್ಟ್ರೀಯ ಮಾಧ್ಯಮಗಳು ಶಾಹೀನ್‌ಬಾಗ್ ಕಾರಣಕ್ಕಾಗಿ ದೇಶವನ್ನು ಹೊಗಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಏಕೆ, ಶಾಹೀನ್ ಬಾಗ್ ಈ ದೇಶದ ಗೃಹ ಸಚಿವ ಅಮಿತ್ ಶಾ ಅವರನ್ನೇ ಅಲುಗಾಡಿಸಿದಂತಿದೆ. ದಿಲ್ಲಿ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯನ್ನೇ ಅವರು ‘ಶಾಹೀನ್‌ಬಾಗ್’ಗೆ ಸೀಮಿತಗೊಳಿಸಿದ್ದಾರೆ. ‘ನೀವು ಒತ್ತುವ ಇವಿಎಂ ಬಟನ್ ಶಾಹೀನ್ ಬಾಗ್‌ನ್ನು ನಾಶಗೊಳಿಸಲಿ’ ಎಂಬಂತಹ ಹತಾಶೆಯ ಹೇಳಿಕೆಯನ್ನು ಅವರು ನೀಡಿದ್ದಾರೆ. ಶಾಹೀನ್‌ಬಾಗ್‌ನಲ್ಲಿ ಸಂವಿಧಾನವನ್ನು ಉಳಿಸುವುದಕ್ಕೋಸ್ಕರ ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸುತ್ತಿರುವ ಭಾರತೀಯ ಮಹಿಳೆಯರ ನಾಶಕ್ಕಾಗಿ ಒಂದು ಚುನಾವಣೆಯನ್ನು ಸೀಮಿತಗೊಳಿಸಲು ಹೊರಟಿರುವ ಅಮಿತ್ ಶಾ ಮನಸ್ಥಿತಿಯೇ ಸಿಎಎಯ ಒಳಗಿರುವ ಕ್ರೌರ್ಯವನ್ನು ವ್ಯಕ್ತಗೊಳಿಸಿದೆ. ಆದರೆ ತಾಯ್ತನದ ಕಾಳಜಿ, ವಾತ್ಸಲ್ಯ, ಅಕ್ಕರೆಯನ್ನು ಅಮಿತ್ ಶಾ ಅವರ ಯಾವ ಬಟನ್ ಕೂಡ ನಾಶ ಮಾಡಲಾರದು ಎನ್ನುವುದನ್ನು ಅವರಿಗೆ ದಿಲ್ಲಿಯ ಫಲಿತಾಂಶವೇ ತಿಳಿಸಿಕೊಡಲಿದೆ. ಇದೇ ಸಂದರ್ಭದಲ್ಲಿ ಶಾಹೀನ್ ಬಾಗ್ ಮಾದರಿ ಚಳವಳಿ ದೇಶಾದ್ಯಂತ ವಿಸ್ತರಿಸುತ್ತಿದೆೆ. ಸಿಎಎ ಪ್ರತಿಭಟನೆ ನಿಧಾನಕ್ಕೆ ಪುರುಷರಿಂದ ಮಹಿಳೆಯರ ಕೈಗೆ ಹಸ್ತಾಂತರಗೊಳ್ಳುತ್ತಿದೆ. ಇದಕ್ಕೆ ಹೆದರಿದ ಸರಕಾರ, ಶಾಹೀನ್ ಬಾಗ್ ಚಳವಳಿಯನ್ನು ಬಗ್ಗುಬಡಿಯಲು ಬೇರೆ ಬೇರೆ ತಂತ್ರಗಳನ್ನು ಅನುಸರಿಸುತ್ತಿದೆ. ಶರ್ಜಿಲ್ ಇಮಾಮ್ ಎಂಬ ವಿದ್ಯಾರ್ಥಿನಾಯಕನ ಅಪ್ರಬುದ್ಧ, ಅವಿವೇಕಿತನದ ಭಾಷಣದ ವೀಡಿಯೊವೊಂದನ್ನು ಇಟ್ಟುಕೊಂಡು, ಶಾಹೀನ್ ಬಾಗ್ ಹೋರಾಟದಲ್ಲಿ ದೇಶವನ್ನು ವಿಭಜಿಸುವವರು ಸೇರಿಕೊಂಡಿದ್ದಾರೆ ಎಂಬ ವದಂತಿಗಳನ್ನು ಹರಡಲು ಯತ್ನಿಸುತ್ತಿದೆ.

ಜೆಎನ್‌ಯುವಿನ ಮಾಜಿ ವಿದ್ಯಾರ್ಥಿ ಶರ್ಜಿಲ್ ಇಮಾಮ್‌ಗೂ ಶಾಹೀನ್‌ಬಾಗ್ ಚಳವಳಿಗೂ ಯಾವುದೇ ಸಂಬಂಧವಿಲ್ಲ. ಈ ಹಿಂದೆ ಇದರ ಜೊತೆಗಿದ್ದನಾದರೂ, ಭಿನ್ನಾಭಿಪ್ರಾಯದ ಬಳಿಕ ಶಾಹೀನ್‌ಬಾಗ್‌ಚಳವಳಿಯಿಂದ ಹಿಂದಕ್ಕೆ ಸರಿದಿದ್ದೇನೆ ಎಂದು ಈತ ಘೋಷಿಸಿದ್ದ. ಇದೀಗ ಈತ ಭಾಷಣ ಮಾಡಿದ ಒಂದು ವೀಡಿಯೊ ವಿವಾದವಾಗುತ್ತಿದೆ. ಅದರಲ್ಲಿ ‘ಕನಿಷ್ಟ್ಟ ಎರಡು ತಿಂಗಳ ಕಾಲವಾದರೂ ಅಸ್ಸಾಮನ್ನು ದೇಶದಿಂದ ಬೇರ್ಪಡಿಸಬೇಕು’ ಎಂಬ ಈತನ ಹೇಳಿಕೆಯ ವಿರುದ್ಧ ನಾಲ್ಕು ರಾಜ್ಯಗಳು ದೇಶದ್ರೋಹದ ಮೊಕದ್ದಮೆ ಹೂಡಿವೆೆ. ಈತನ ನಿವಾಸಗಳ ಮೇಲೆ ದಾಳಿಯಾಗಿವೆೆ. ಕುಟುಂಬಸ್ಥರನ್ನು ಪೊಲೀಸರು ಬೆದರಿಸುತ್ತಿದ್ದಾರೆ. ಆದರೆ ಶರ್ಜಿಲ್ ‘‘ತನ್ನ ಉದ್ದೇಶ ಅಸ್ಸಾಂಮನ್ನು ದೇಶದಿಂದ ಬೇರ್ಪಡಿಸುವುದಲ್ಲ, ಲಕ್ಷಾಂತರ ಜನರು ಸೇರಿ ಹೆದ್ದಾರಿ ತಡೆಯ ಮೂಲಕ ಸಂಪರ್ಕವನ್ನು ಕಡಿತಗೊಳಿಸುವುದಾಗಿತ್ತು’’ ಎಂದು ಸ್ಪಷ್ಟೀಕರಣ ನೀಡಿದ್ದಾನೆ. ಆತನ ವೀಡಿಯೊದಲ್ಲಿದ ಆಡಿದ ಇನ್ನೂ ಕೆಲವು ಉದ್ರೇಕಕಾರಿ ಭಾಷಣಗಳು ಎಲ್ಲ ರೀತಿಯಲ್ಲೂ ಶಾಹೀನ್ ಬಾಗ್ ಮಹಿಳೆಯರ ಹೋರಾಟಕ್ಕೆ ಧಕ್ಕೆ ತರುವಂತಹದೇ ಆಗಿತ್ತು. ಇದೀಗ ಇಡೀ ಶಾಹೀನ್ ಬಾಗ್ ಮಹಿಳೆಯರ ಹೋರಾಟವನ್ನು ಶರ್ಜಿಲ್ ಮೂಲಕ ವ್ಯಾಖ್ಯಾನಿಸಲು ಸರಕಾರ ಯತ್ನಿಸುತ್ತಿದೆ. ಆದರೆ ಇಲ್ಲಿ ಮಹಿಳೆಯರು ಶರ್ಜಿಲ್‌ನನ್ನು ಸಂಪೂರ್ಣ ತಿರಸ್ಕರಿಸಿದ್ದಾರೆ. ಆತನಿಗೂ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ. ಶರ್ಗಿಲ್ ವಿವಾದ ಶಾಹೀನ್‌ಬಾಗ್‌ನ ಹೋರಾಟಗಾರರಿಗೆ ಒಂದು ಪಾಠವಾಗಬೇಕಾಗಿದೆ. ಪ್ರಚೋದನಕಾರಿ ಮಾತುಗಾರರನ್ನು ಇಂತಹ ಹೋರಾಟದಿಂದ ಆದಷ್ಟು ದೂರವಿಡುವ ಅಗತ್ಯವಿದೆ. ಸರಕಾರದ ಜನರೇ ಇಂತಹ ಹೋರಾಟದೊಳಗೆ ನುಸುಳಿ ಪ್ರತಿಭಟನೆಯ ಉದ್ದೇಶವನ್ನು ದಿಕ್ಕು ತಪ್ಪಿಸುವ ಅಪಾಯಗಳೂ ಇವೆ. ಸಿಎಎ ವಿರುದ್ಧ ಹೋರಾಟ ಇಡೀ ದೇಶವನ್ನು ಒಂದಾಗಿಸುವ ಕೆಲಸವನ್ನು ಮಾಡಬೇಕೇ ಹೊರತು, ವಿಭಜಿಸುವ ಕೆಲಸವನ್ನು ಅಲ್ಲ. ಅರಾಜಕತೆ ಸೃಷ್ಟಿಸುವುದು ಸಿಎಎ ವಿರುದ್ಧದ ಹೋರಾಟದ ಉದ್ದೇಶವಲ್ಲ.ಬದಲಿಗೆ ಭವಿಷ್ಯದಲ್ಲಿ ಸೃಷ್ಟಿಯಾಗಬಹುದಾದ ಅರಾಜಕತೆಯಿಂದ ದೇಶವನ್ನು ಕಾಪಾಡಿ ಸಂವಿಧಾನವನ್ನು ಉಳಿಸುವುದು ಹೋರಾಟದ ಗುರಿಯಾಗಿದೆ. ಸರಕಾರದ ಎಲ್ಲ ಸಂಚುಗಳನ್ನು ವಿಫಲಗೊಳಿಸಿ, ಆ ಗುರಿಯನ್ನು ತಲುಪುವಲ್ಲಿ ಶಾಹೀನ್ ಬಾಗ್ ಮಹಿಳೆಯರು ಸಮರ್ಥವಾಗಿರುವುದು ದೇಶದ ಪಾಲಿನ ಅಳಿದುಳಿದ ಭರವಸೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News