ಕೋಲಾರ: ಸಿಎಎ-ಎನ್‌ಆರ್‌ಸಿ ವಿರೋಧಿಸಿ ಮಹಿಳೆಯರ ಪ್ರತಿಭಟನೆ; ಮೊಳಗಿದ 'ಆಝಾದಿ' ಕೂಗು

Update: 2020-01-27 18:40 GMT

ಕೋಲಾರ, ಜ.27: ಪೌರತ್ವ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ,ಹಾಗೂ ಎನ್.ಪಿ.ಆರ್ ಸಂವಿಧಾನ ವಿರೋಧಿ ನೀತಿಯಾಗಿದೆ. ನಾವು ಮಹಿಳೆಯರು ಈ ಕಾಯ್ದೆ ವಾಪಸ್ ಪಡೆಯುವ ತನಕ ನಿರಂತರ ಹೋರಾಟ ಮಾಡಲೇಬೇಕು ಎಂದು ಮಹಿಳಾ ಹೋರಾಟಗಾರ್ತಿ ಡಾ.ಶಾಜಿದ್ ಅಸ್ರಾ ಬೇಗಂ ಕರೆ ನೀಡಿದರು. 

ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮಹಿಳೆಯರು ಹಮ್ಮಿಕೊಂಡಿದ್ದ  ಸಿಎಎ, ಎನ್ಆರ್ಸಿ, ಎನ್.ಪಿ.ಆರ್ ವಿರೋಧಿ ಸಮಾವೇಶದಲ್ಲಿ ಅವರು ಮಾತನಾಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ನೋಟ್ ಬ್ಯಾನ್, ಜಿ.ಎಸ್.ಟಿ. ತ್ರಿವಳಿ ತಲಾಕ್, ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು, ಬಾಬರಿ ಮಸೀದಿ ಮುಂತಾದವುಗಳಲ್ಲಿ ತಪ್ಪು ನಿರ್ಣಯ ತೆಗೆದುಕೊಂಡಿತು. ಅದೆಲ್ಲವನ್ನೂ ಸಹಿಸಿಕೊಂಡಿದ್ದೇವೆ. ಆದರೆ ಈಗ ಸುಮ್ಮನೇ ಕೂರಲ್ಲ. ದೇಶದ ಐಕ್ಯತೆಯನ್ನು ಉಳಿಸಿಕೊಳ್ಳಲು ಕೊನೆಯ ಉಸಿರು ಇರುವ ತನಕ ಹೋರಾಟ ಮಾಡಲು ಸಿದ್ದವಿದ್ದೇವೆ ಎಂದರು. 

ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ವಿ. ಗೀತಾ ಮಾತನಾಡಿ, ಈ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೋರಾಡಲು ಧೈರ್ಯವಿರದೆ ಬ್ರಿಟೀಷರಿಗೆ ತಪ್ಪೊಪ್ಪಿಗೆಯ ಪತ್ರ ಬರೆದ ಸಾವರ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಹತ್ಯೆ ಮಾಡಿದವರು ಬಿಜೆಪಿ ಆರೆಸ್ಸೆಸ್ ನವರು. ಆದರೆ ನಮಗೆ ಸುಭಾಷ್ ಚಂದ್ರ ಬೋಸ್, ಟಿಪ್ಪು ಸುಲ್ತಾನ್, ಗಾಂಧೀಜಿ, ಅಂಬೇಡ್ಕರ್ ಆದರ್ಶ ಎಂದರು. 

ಮೌಲಾನ ಇಸ್ಮಾಯಿಲ್ ಮಿಸ್ಭಾ ಮಾತನಾಡಿ, ಭಾರತ ದೇಶ ಹಿಂದೆಯೂ ಇತ್ತು, ಈಗಲೂ ಇದೆ. ಮುಂದೆನೂ ಇರುತ್ತೆ. ಮುಸ್ಲಿಮರನ್ನು ದೇಶ ಬಿಟ್ಟು ಹೊರಗೆ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮ ಹಿರಿಯರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು, ಈಗ ನಾವು ಕಳ್ಳರ ವಿರುದ್ಧ ಹೋರಾಟ ಮಾಡಬೇಕು ಎಂದರು. 

ವಿದ್ಯಾರ್ಥಿನಿ ಅಮೂಲ್ಯ ಆಝಾದಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ವಯ್ಸುನ್ನೀಸ, ಉಮ್ಮರ್ ಹನಿ, ಮಿಸ್ಬಾ, ಮೌಲಾನಾ ಕಲೀಮುಲ್ಲಾ,  ಮೌಲಾನಾ ಕಲೀಲ್ ಉಲ್ಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News