ಕೊರೋನ ವೈರಸ್ : ವೂಹಾನ್ ನಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯರ ರಕ್ಷಣೆಗೆ ಕ್ರಮ

Update: 2020-01-28 03:55 GMT

ಹೊಸದಿಲ್ಲಿ: ಕೊರೋನ ವೈರಸ್ ದಾಳಿಗೆ ತತ್ತರಿಸಿರುವ ಚೀನಾದ ವೂಹಾನ್ ನಗರದಲ್ಲಿ ಸಿಕ್ಕಿ ಹಾಕಿಕೊಂಡಿರುವ 250 ಮಂದಿ ಭಾರತೀಯರ ರಕ್ಷಣೆಗೆ ಭಾರತ ಚೀನಾ ದೇಶಕ್ಕೆ ಮನವಿ ಮಾಡಲಿದೆ.

ವೂಹಾನ್ ಸ್ಥಿತಿಗತಿ ಪರಿಶೀಲನಾ ಸಭೆ ನಡೆಸಿದ ಸಂಪುಟ ಕಾರ್ಯದರ್ಶಿ ಆ ನಗರದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

"ವೂಹಾನ್ ನಗರದಿಂದ ಭಾರತೀಯರನ್ನು ಕರೆ ತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದರ ಅನ್ವಯ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಚೀನಾ ಅಧಿಕಾರಿಗಳಿಗೆ ಮನವಿ ಮಾಡಲಿದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಇವರನ್ನು ಸುರಕ್ಷಿತವಾಗಿ ಕರೆ ತರುವ ಮತ್ತು ರೋಗಿಗಳನ್ನು ಪ್ರತ್ಯೇಕವಾಗಿ ಇಡಲು ಅಗತ್ಯ ಕ್ರಮ ಕೈಗೊಳ್ಳಲಿವೆ" ಎಂದು ವಿವರಿಸಿದರು.

ವೂಹಾನ್‌ನಿಂದ ಭಾರತೀಯರನ್ನು ಕರೆ ತರಲು ಏರ್ ಇಂಡಿಯಾ ವಿಶೇಷ ಬೋಯಿಂಗ್ 747 ವಿಮಾನವನ್ನು ವ್ಯವಸ್ಥೆಗೊಳಿಸಿದೆ. ಸಂಜೆ 5 ಗಂಟೆಗೆ ವಿಮಾನ ವೂಹಾನ್‌ನಿಂದ ಹೊರಡಲು ಸಜ್ಜಾಗಿದ್ದು, ವಿಶೇಷ ವಿಮಾನ ಕಾರ್ಯಾಚರಿಸಲು ಅಲ್ಲಿನ ವಿಮಾನ ನಿಲ್ದಾಣ ಅಧಿಕಾರಿಗಳಿಂದ ಅಗತ್ಯ ಅನುಮತಿ ಪಡೆಯಲು ನಿರ್ಧರಿಸಿದೆ.

"ನಾವು ಸರ್ವಸನ್ನದ್ಧರಾಗಿದ್ದೇವೆ. ನಮ್ಮ ಸಿಬ್ಬಂದಿ, ವೈದ್ಯಕೀಯ ತಂಡ ಮತ್ತು ಪೂರೈಕೆ ವ್ಯವಸ್ಥೆ ವಿಮಾನಕ್ಕೆ ಸಜ್ಜಾಗಿದೆ. ಆದರೆ ವೂಹಾನ್‌ನಲ್ಲಿ ಸೇವೆಗಳಲ್ಲಿ ವ್ಯತ್ಯಯವಾಗಿದೆ. ಜನ ವಿಮಾನ ನಿಲ್ದಾಣಕ್ಕೆ ತಲುಪಲು ಅಗತ್ಯ ವ್ಯವಸ್ಥೆಗಳಿಲ್ಲ. ಭಾರತೀಯ ರಾಯಭಾರ ಕಚೇರಿ ನೆರವಿನಿಂದ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಅನುಮತಿ ದೊರೆತ ತಕ್ಷಣ ವಿಮಾನ ಭಾರತಕ್ಕೆ ಆಗಮಿಸಲಿದೆ" ಎಂದು ಮೂಲಗಳು ಹೇಳಿವೆ.

ಹಲವು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರು ಕೊರೋನ ವೈರಸ್‌ ಪೀಡಿತ ವೂಹಾನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News