ಅಕ್ರಮ ಸಂಬಂಧದ ಆರೋಪ: ಇಬ್ಬರ ಮೂಗು ಕತ್ತರಿಸಿದ ಗ್ರಾಮಸ್ಥರು!

Update: 2020-01-29 03:55 GMT

ಫೈಝಾಬಾದ್, ಜ.29: ಅಕ್ರಮ ಸಂಬಂಧ ಹೊಂದಿದ್ದ ಆರೋಪದಲ್ಲಿ ಗ್ರಾಮಸ್ಥರು ಪುರುಷ ಹಾಗೂ ಮಹಿಳೆಯೊಬ್ಬರ ಮೂಗು ಕತ್ತರಿಸಿದ ಘಟನೆ ಬೆಳಕಿಗೆ ಬಂದಿದೆ.
ಪತ್ರಾಂಗ ಪೊಲೀಸ್ ಠಾಣೆ ವ್ಯಾಪ್ತಿಯ ಕಂದ್‌ಪಿಪ್ರಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದಲ್ಲಿ ಶಾಂತಿ ಕದಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ.

ಗ್ರಾಮದ 28 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಅನ್ಯಕೋಮಿನ 35 ವರ್ಷದ ಮಹಿಳೆಯ ಮನೆಗೆ ಭೇಟಿ ನೀಡಿದಾಗ ಆಕೆಯ ಮಾವ ಹಾಗೂ ಇತರರು ಇಬ್ಬರನ್ನೂ ವಶಕ್ಕೆ ಪಡೆದರು. ಜೋಡಿಯನ್ನು ಚೆನ್ನಾಗಿ ಥಳಿಸಿ ಬಳಿಕ ಇಬ್ಬರ ಮೂಗು ಕತ್ತರಿಸಿದರು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ನಡೆದಾಗ ಮಹಿಳೆಯ ಪತಿ ಇರಲಿಲ್ಲ ಎನ್ನಲಾಗಿದೆ. ಮಹಿಳೆಯ ಪತಿ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ.

ಮಹಿಳೆಯ ಮಾವ ಹಾಗೂ ಕೃತ್ಯದಲ್ಲಿ ಶಾಮೀಲಾದ ಇತರರನ್ನು ಬಂಧಿಸಲಾಗಿದೆ ಎಂದು ಫೈಝಾಬಾದ್ ಎಸ್‌ಎಸ್ಪಿ ಆಶೀಶ್ ತಿವಾರಿ ಹೇಳಿದ್ದಾರೆ. ಗಾಯಗೊಂಡ ಇಬ್ಬರನ್ನೂ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News