ಸಿದ್ದಾಪುರ: ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ ಪ್ರಕರಣ; ಆರೋಪಿ ಯುವಕನ ಬಂಧನ

Update: 2020-01-29 14:04 GMT

ಮಡಿಕೇರಿ, ಜ.29: ಕಾಲೇಜ್ ಗೆಂದು ತೆರಳಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಬ್ಬಳು ಮನೆಗೆ ಬಾರದ ಹಿನ್ನೆಲೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಯಹುದಿಕೇರಿಯ ಯುವಕ ದೀಪಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮಗಳನ್ನು ಅಪಹರಿಸಿರುವ ಶಂಕೆ ವ್ಯಕ್ತಪಡಿಸಿ ವಿದ್ಯಾರ್ಥಿನಿಯ ತಾಯಿ ಸೋಮವಾರ ರಾತ್ರಿ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಯುವಕನ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿತ್ತು. ದೂರು ನೀಡಿ 24 ಗಂಟೆ ಕಳೆದರೂ ಪ್ರಕರಣವನ್ನು ಪೊಲೀಸರು ಬೇಧಿಸಿಲ್ಲವೆಂದು ಆರೋಪಿಸಿ ವಿದ್ಯಾರ್ಥಿನಿಯ ಪಾಲಕರು ಹಾಗೂ ಗ್ರಾಮಸ್ಥರು ಸಿದ್ದಾಪುರ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿದ್ದರು.

17 ವರ್ಷದ ವಿದ್ಯಾರ್ಥಿನಿ ಜೊತೆ ದೀಪಕ್ ವಿವಾಹವಾಗಿರುವ ಫೋಟೋ ಮತ್ತು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದರಿಂದ ಅಸಮಾಧಾನಗೊಂಡ ಪ್ರತಿಭಟನಾಕಾರರು ಮಂಗಳವಾರ ರಾತ್ರಿ ಪ್ರತಿಭಟನೆ ನಡೆಸಿ ಪೊಲೀಸರು ಮನವೊಲಿಸಿದ ಕಾರಣ ತೆರಳಿದ್ದರು. ಆದರೆ ಬುಧವಾರ ಬೆಳಗ್ಗೆ ಮತ್ತೆ ಪ್ರತಿಭಟನೆ ಆರಂಭಿಸಿದ ಕಾರಣ ಸ್ಥಳಕ್ಕೆ ಬಂದ ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.

ಮಂಗಳವಾರ ರಾತ್ರಿ 2 ಗಂಟೆಗೆ ಆರೋಪಿ ದೀಪಕ್‍ನನ್ನು ಬಂಧಿಸಲಾಗಿದ್ದು, ಅಪ್ರಾಪ್ತ ವಿದ್ಯಾರ್ಥಿನಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಬಳಿಕ ಪೋಷಕರಿಗೆ ಒಪ್ಪಿಸಲಾಗುವುದು ಎಂದರು. ಪ್ರಕರಣದಲ್ಲಿ ಶಾಮೀಲಾಗಿರುವವರ ಮೇಲೂ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯ ತಾಯಿ ಒತ್ತಾಯಿಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ ಮುಹಮ್ಮದ್ ಮಾತನಾಡಿ ಇತ್ತೀಚೆಗಷ್ಟೇ ಓರ್ವ ಯುವತಿಯನ್ನು ಇದೇ ತಂಡ ಅನ್ಯ ಕೋಮಿನ ಯುವಕನೊಂದಿಗೆ ಮದುವೆ ಮಾಡಿಸಿದ್ದಾರೆ. ಇದೀಗ ಮತ್ತೊಂದು ಪ್ರಕರಣ ನಡೆದಿದ್ದು ಇದರ ಹಿಂದೆ ಹಲವರು ಭಾಗಿಯಾಗಿರುವ ಶಂಕೆ ಇದೆ ಎಂದು ಆರೋಪಿಸಿದರು. ವಿವಾಹ ಮಾಡಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪೊಲೀಸರು ದೀಪಕ್ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News