ಕೆಪಿಸಿಸಿ ಹುದ್ದೆಗೆ ಅರ್ಜಿ ಹಾಕಿಲ್ಲ, ಬೇರೆಯವರು ಅಡ್ಡಗಾಲು ಹಾಕುವ ಪ್ರಶ್ನೆಯೇ ಇಲ್ಲ: ಡಿಕೆಶಿ

Update: 2020-01-29 12:11 GMT

ಕಲಬುರ್ಗಿ, ಜ. 29: ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಹುದ್ದೆಗೆ ಅರ್ಜಿ ಹಾಕಿಲ್ಲ. ಯಾರ ಜತೆಗೂ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ ನನಗೆ ಯಾರೂ ಅಡ್ಡಗಾಲು ಹಾಕುವ ಪ್ರಶ್ನೆ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ನಗರದ ಗೋಪಾಲದಲ್ಲಿ ದುರ್ಗಾದೇವಿ ಜಾತ್ರೆಯಲ್ಲಿ ಭಾಗವಹಿಸಲು ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ದಿನೇಶ್ ಗುಂಡೂರಾವ್ ಹಾಗೂ ವಿರೋಧ ಪಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ಉಪ ಚುನಾವಣೆ ಫಲಿತಾಂಶದಿಂದ ಬೇಸರಗೊಂಡು ಇಬ್ಬರು ರಾಜೀನಾಮೆ ನೀಡಿದ್ದು, ಪಕ್ಷದ ವರಿಷ್ಠರು ಅದನ್ನು ಇನ್ನೂ ಅಂಗೀಕಾರ ಮಾಡಿಲ್ಲ. ಹೀಗಾಗಿ ಪಕ್ಷದಲ್ಲಿ ಯಾವುದೇ ಸ್ಥಾನ ಖಾಲಿ ಇಲ್ಲ ಎಂದು ಶಿವಕುಮಾರ್ ಇದೇ ವೇಳೆ ಸ್ಪಷ್ಟನೆ ನೀಡಿದರು.

ನಾನು ಹೊಸದಿಲ್ಲಿಗೆ ಆಗಾಗ್ಗೆ ಹೋಗುತ್ತಿರುತ್ತೇನೆ. ಇದರಲ್ಲಿ ವಿಶೇಷ ಏನಿಲ್ಲ. ನಾನು ಯಾವುದೇ ಹುದ್ದೆಗೆ ಅರ್ಜಿ ಹಾಕಿಲ್ಲ. ಯಾರ ಜತೆಗೂ ಸ್ಪರ್ಧೆ ಮಾಡುತ್ತಿಲ್ಲ. ಹೀಗಾಗಿ ನನಗೆ ಯಾರೂ ಅಡ್ಡಗಾಲು ಹಾಕುವ ಪ್ರಶ್ನೆ ಬರುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ಮಾಡುವವನು ನಾನಲ್ಲ. ನಾನು ಆಯ್ಕೆ ಮಾಡುವುದಾಗಿದ್ದರೆ ಯಾವಾಗ ಆಯ್ಕೆ ಮಾಡಲಾಗುವುದು ಎಂದು ಹೇಳುತ್ತಿದ್ದೆ. ಆ ಕೆಲಸವನ್ನು ಪಕ್ಷ ಮಾಡುತ್ತದೆ ಎಂದು ತಿಳಿಸಿದರು..

‘ನಾನು ದೇವಸ್ಥಾನಗಳಿಗೆ ಭೇಟಿ ನೀಡುವುದು ಹೊಸತೇನಲ್ಲ. ನಮ್ಮ ಮನಃಶಾಂತಿ, ನೆಮ್ಮದಿಗೆ, ನಾಡಿನ ಜನರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳಲು ಹೋಗುತ್ತೇವೆ. ಕಳೆದ ವರ್ಷವೇ ದುರ್ಗಾದೇವಿ ಜಾತ್ರೆಗೆ ಹೋಗಬೇಕಿತ್ತು. ಕೆಲಸದ ಒತ್ತಡದಿಂದ ಹೋಗಲು ಸಾಧ್ಯವಾಗಿರಲಿಲ್ಲ. ಈ ವರ್ಷ ಬಿಡುವಿದ್ದ ಕಾರಣ ಬಂದಿದ್ದೇನೆ. ನಿಮ್ಮಂತ ಹಿತೈಷಿಗಳು ಹರಕೆ ಹೊತ್ತಿದ್ದಾರೆ. ಎಲ್ಲ ಹರಕೆ ತೀರಿಸಲು ಸಾಧ್ಯವಾಗದಿದ್ದರೂ ಸಾಧ್ಯವಾದಷ್ಟು ತೀರಿಸಲು ಪ್ರಯತ್ನಿಸುತ್ತೇನೆ’ ಎಂದರು.

‘ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೂ ನನಗೂ ಸಂಬಂಧ ಇಲ್ಲ. ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆ ಪಕ್ಷದ ವಿಚಾರ ನಮಗೇಕೆ ಬೇಕು. ಅವರು ಏನು ಬೇಕಾದರೂ ಮಾಡಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ’

-ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News