ಸಂಪುಟ ವಿಸ್ತರಣೆ, ಮತ್ತೊಂದು ಡಿಸಿಎಂ ಹುದ್ದೆ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ

Update: 2020-01-29 13:14 GMT

ಬೆಳಗಾವಿ, ಜ. 29: ಎರಡು ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಿಶ್ಚಿತವಾಗಿಯೂ ಆಗಲಿದ್ದು, ಬೆಳಗಾವಿಯ ಪ್ರಭಾವಿ ನಾಯಕ ಉಮೇಶ್ ಕತ್ತಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ನಗರದಲ್ಲಿ ಸ್ಮಾರ್ಟ್‌ಸಿಟಿ ಕಂಟ್ರೋಲ್ ಕಮಾಂಡ್ ಸೆಂಟರ್ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ನಾಳೆ(ಜ.30) ಹೊಸದಿಲ್ಲಿಗೆ ತೆರಳಲಿದ್ದು, ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿ ಮಾಡಿ ಸಂಪುಟ ವಿಸ್ತರಣೆ ಸಂಬಂಧ ಚರ್ಚಿಸಲಿದ್ದೇನೆ ಎಂದರು.

ಇನ್ನು ಎರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಅಂತಿಮಗೊಳ್ಳಲಿದೆ. ಬೆಳಗಾವಿಯಲ್ಲಿ ಆಯ್ಕೆಯಾದ ಎಲ್ಲ ಶಾಸಕರೂ ಸಚಿವರಾಗಲಿದ್ದಾರೆ. ಅಲ್ಲದೆ, ಉಪಚುನಾವಣೆಯಲ್ಲಿದ್ದ ಗೆದ್ದವರ ಪೈಕಿ ಒಂದಿಬ್ಬರನ್ನು ಮಾತ್ರ ಕೈಬಿಡುವ ಸಾಧ್ಯತೆ ಇದೆ ಎಂದು ನುಡಿದರು.

ಪಕ್ಷದ ಹಿರಿಯ ಶಾಸಕ ಉಮೇಶ್ ಕತ್ತಿ ಸಚಿವರಾಗಲಿದ್ದಾರೆ. ಪ್ರಸ್ತುತ ಸಚಿವ ಸಂಪುಟದಲ್ಲಿರುವ ಯಾವುದೇ ಸಚಿವರನ್ನು ಸಂಪುಟದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಶೀಘ್ರವೇ ಸಚಿವ ಸಂಪುಟ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಹೊಸ ಡಿಸಿಎಂ ಹುದ್ದೆ ಇಲ್ಲ: ಹೊಸದಾಗಿ ಇನ್ಯಾರನ್ನೂ ಉಪ ಮುಖ್ಯಮಂತ್ರಿ ಮಾಡುವುದಿಲ್ಲ. ಪ್ರಸ್ತುತ ಇರುವ ಮೂವರು ಉಪಮುಖ್ಯಮಂತ್ರಿಗಳು ತಮ್ಮ ಹುದ್ದೆಗಳಲ್ಲಿ ಮುಂದುವರಿಯಲಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇದೇ ವೇಳೆ ಸ್ಪಷ್ಟಪಡಿಸಿದರು.

ಹೊಸದಿಲ್ಲಿಗೆ ತೆರಳಿದ ಸಂದರ್ಭದಲ್ಲಿ ಮಹದಾಯಿ ಜಲ ವಿವಾದ ಸೇರಿದಂತೆ ಅಂತರರಾಜ್ಯ ವಿವಾದಗಳ ಸಂಬಂಧ ಪ್ರಧಾನಿ ಮೋದಿ ಸೇರಿದಂತೆ ಸಂಬಂಧಪಟ್ಟ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಸುವರ್ಣ ವಿಧಾನಸೌಧಕ್ಕೆ ಕಚೇರಿಗಳ ಸ್ಥಳಾಂತರ ಹಾಗೂ ಎರಡು ತಿಂಗಳಿಗೊಮ್ಮೆ ಇಲ್ಲಿ ಸಚಿವ ಸಂಪುಟ ಸಭೆ ನಡೆಸಲು ಕ್ರಮ ಕೈಗೊಳ್ಳುವೆ ಎಂದು ಯಡಿಯೂರಪ್ಪ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು. ಈ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಕೇಂದ್ರ ಸಚಿವ ಸುರೇಶ ಅಂಗಡಿ ಸೇರಿ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News