ಕಮಾಂಡ್ ಆಂಡ್ ಕಂಟ್ರೋಲ್ ಸೆಂಟರ್ ಲೋಕಾರ್ಪಣೆಗೊಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

Update: 2020-01-29 18:00 GMT

ಬೆಳಗಾವಿ, ಜ.29: ಸ್ಮಾರ್ಟ್ ಸಿಟಿ ಯೋಜನೆಯಡಿ 76.80 ಕೋಟಿ ರೂ.ಯೋಜನಾ ಮೊತ್ತದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ನಗರದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್(ಸಮಗ್ರ ಆಜ್ಞಾ ಮತ್ತು ನಿರ್ವಹಣಾ ಕೇಂದ್ರ)ವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಲೋಕಾರ್ಪಣೆಗೊಳಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಥಾಪಿಸಲಾಗಿರುವ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್‌ನ ಕಾರ್ಯವೈಖರಿಯ ಬಗ್ಗೆ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಕುರೇರ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿಯನ್ನು ನೀಡಿದರು. ಅದೇ ರೀತಿ ಮಹಾನಗರ ಪಾಲಿಕೆಯ ಕಾಮಗಾರಿಗಳ ಕುರಿತು ಪಾಲಿಕೆ ಆಯುಕ್ತ ಜಗದೀಶ್ ವಿವರಿಸಿದರು.

ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವತಿಯಿಂದ ಅಶೋಕ ನಗರದಲ್ಲಿರುವ ಈಜುಕೊಳ ಹಾಗೂ ವ್ಯಾಯಾಮಶಾಲೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಝಾದ್ ಭವನ(ಕಚೇರಿ ಸಂಕೀರ್ಣ) ಮತ್ತು ಆಂಗ್ಲ ಮಾಧ್ಯಮ ಶಾಲೆಯನ್ನು ಮುಖ್ಯಮಂತ್ರಿ ಉದ್ಘಾಟಿಸಿದರು.

ಸಿಟಿಜನ್ ಆ್ಯಪ್ ಬಿಡುಗಡೆ: ಬೆಳಗಾವಿ ನಾಗರಿಕ ಸೇವಾ ಅಪ್ಲಿಕೇಷನ್ ಅನ್ನು ಮುಖ್ಯಮಂತ್ರಿ ಸಾರ್ವಜನಿಕ ಬಳಕೆಗೆ ಬಿಡುಗಡೆಗೊಳಿಸಿದರು. ಇದರಲ್ಲಿ ಸಾರ್ವಜನಿಕ ತಮ್ಮ ಅಹವಾಲುಗಳನ್ನು ಕೂಡ ಈ ಆ್ಯಪ್ ಮೂಲಕ ಕಮಾಂಡ್ ಸೆಂಟರ್‌ಗೆ ಹಾಗೂ ಸಂಬಂಧಿಸಿದ ಇಲಾಖೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ರೈಲ್ವೆ ಇಲಾಖೆಯ ರಾಜ್ಯ ಸಚಿ ಸುರೇಶ್ ಅಂಗಡಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ತಿನ ಸರಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮತ್ತಿತರರು ಪ್ರಕಟಣೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News