ದೇಶದ್ರೋಹಿಗಳನ್ನು ಹಾದಿ ಬೀದಿಯಲ್ಲಿ ತೀರ್ಮಾನ ಮಾಡುತ್ತಾರೋ?: ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ವಾರ್

Update: 2020-01-29 15:12 GMT

ಬೆಂಗಳೂರು, ಜ.29: ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಚಿವರಾದ ಅಶೋಕ್ ಹಾಗೂ ಸಿ.ಟಿ.ರವಿ, ದೇಶದ್ರೋಹಿಗಳಿಗೆ ಗುಂಡು ಹೊಡೆಯಬೇಕು ಎಂದು ಹೇಳುತ್ತಿದ್ದಾರೆ. ದೇಶದ್ರೋಹಿಗಳು ಯಾರು ಎಂದು ಕೋರ್ಟ್‌ಗಳು ತೀರ್ಮಾನ ಮಾಡುತ್ತವೆಯೋ? ಅಥವಾ ಬಿಜೆಪಿ ರಾಷ್ಟ್ರೀಯ ನಾಯಕರು ಹಾದಿ ಬೀದಿಯಲ್ಲಿ ತೀರ್ಮಾನ ಮಾಡುತ್ತಾರೋ? ಎಂದು ಕಾಂಗ್ರೆಸ್ ಟ್ವೀಟರ್‌ನಲ್ಲಿ ಪ್ರಶ್ನಿಸಿದೆ.

ಈ ರೀತಿ ಬಿಜೆಪಿ ನಾಯಕರು ಕರೆ ಕೊಡುವುದರಿಂದ ಕಾನೂನು ಸುವ್ಯವಸ್ಥೆ ಸುಭದ್ರಗೊಳ್ಳುತ್ತದೆಯೋ ಅಥವಾ ಹಾಳಾಗುತ್ತದೆಯೋ? ಬಿಜೆಪಿ ಕಾರ್ಯಕರ್ತರಿಗೆ ಕಾನೂನು ಕೈಗೆತ್ತಿಕೊಳ್ಳುವಂತೆ ಪ್ರಚೋದನೆ ಮಾಡಿ ದೊಂಬಿ ಸೃಷ್ಟಿಸಲು ಪ್ರಯತ್ನಿಸುತ್ತಿರುವುದೇಕೆ? ನರೇಂದ್ರ ಮೋದಿ, ಅಮಿತ್ ಶಾ ಅವರೇ, ಇವರುಗಳ ಮೇಲೆ ಯಾವ ಕ್ರಮ ಮತ್ತು ಎಂದು ಜರುಗಿಸುವಿರಿ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ದೇಶದಲ್ಲಿರುವ ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ 5 ವರ್ಷಗಳಲ್ಲಿ 220 ಕೋಟಿ ರೂ.ಗೂ ಅಧಿಕ ಮೌಲ್ಯದ, 1,544 ವಂಚನೆ ಪ್ರಕರಣಗಳು ನಡೆದಿದ್ದು 2018-19 ಸಾಲಿನಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆಯೇ ಅತ್ಯಧಿಕ. ಬಿಜೆಪಿ ಅವಧಿಯಲ್ಲಿ ಬ್ಯಾಂಕುಗಳಿಗೆ ವಂಚಿಸುವ ಪ್ರಕರಣಗಳು ಹೆಚ್ಚಾಗಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ಹದಗೆಟ್ಟ ಆಡಳಿತ ಪ್ರತೀಕ ಎಂದು ಕಾಂಗ್ರೆಸ್ ಟೀಕಿಸಿದೆ.

ದೇಶದ ಆರ್ಥಿಕ ಸ್ಥಿತಿ ಸುಧಾರಣೆಯಾಗದಷ್ಟು ಹಳಿ ತಪ್ಪಿದೆ. ನರೇಂದ್ರ ಮೋದಿ ಸರಕಾರದ 5 ವರ್ಷ ಅವಧಿಯಲ್ಲಿ ದೇಶದ ಸಾಲದ ಹೊರೆ ಶೇ.71ರಷ್ಟು ಏರಿಕೆಯಾಗಿದೆ. ಪ್ರತಿಯೊಬ್ಬ ಭಾರತೀಯನ ಮೇಲಿನ ತಲಾವಾರು ಸಾಲವೂ 27,200 ರೂ.ರಷ್ಟು ಹೆಚ್ಚಿದೆ. ಫೆ.1ರಂದು ಮಂಡಿಸಲಿರುವ ಬಜೆಟ್‌ನಲ್ಲಿ ಹಣಕಾಸು ಸಚಿವರು ಈ ಬಗ್ಗೆ ಗಮನ ಹರಿಸುವರೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಳೆದ 5 ವರ್ಷಗಳಲ್ಲಿ ದೇಶದ ಮೇಲಿನ ಒಟ್ಟಾರೆ ಸಾಲದ ಹೊರೆ 37.9 ಲಕ್ಷ ಕೋಟಿ ರೂ.ಏರಿಕೆಯಾಗಿದೆ. 2014ರ ಮಾರ್ಚ್‌ನಲ್ಲಿ ಒಟ್ಟು ಸಾಲ 53.11 ಲಕ್ಷ ಕೋಟಿ ರೂ.ಆಗಿದ್ದರೆ, 2019ರ ಸೆಪ್ಟೆಂಬರ್‌ನಲ್ಲಿ ಅದು 91.01 ಲಕ್ಷ ಕೋಟಿ ರೂ.ಗೆ ತಲುಪಿದೆ. ದೇಶದ ಸಾಲದ ಹೊರೆಯನ್ನು ಹಲವು ಪಟ್ಟು ಹೆಚ್ಚಿಸಿದ್ದೇ ನರೇಂದ್ರ ಮೋದಿ ಸರಕಾರದ ಸಾಧನೆಯೇ ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News