ನನ್ನ ಮಗುವಿಗೆ ಶಾಲೆಯಲ್ಲಿ ಪ್ರವೇಶ ನೀಡುತ್ತಿಲ್ಲ: ಹುತಾತ್ಮ ಯೋಧನ ಪತ್ನಿಯ ಅಳಲು

Update: 2020-01-29 15:38 GMT
ಸಾಂದರ್ಭಿಕ ಚಿತ್ರ

ಔರಂಗಾಬಾದ್,ಜ.29: ಮೂರು ವರ್ಷಗಳ ಹಿಂದೆ ಜಮ್ಮು ಜಿಲ್ಲೆಯ ನಗ್ರೋತಾ ವಿಭಾಗದಲ್ಲಿ ಕಾರ್ಯಾಚರಣೆ ಸಂದರ್ಭ ಹುತಾತ್ಮರಾಗಿದ್ದ ಯೋಧನ ಮಗಳಿಗೆ ಪ್ರವೇಶವನ್ನು ನೀಡಲು ಮಹಾರಾಷ್ಟ್ರದ ನಾಂದೇಡ್‌ನ ಜ್ಞಾನಮಾತಾ ವಿದ್ಯಾಲಯವು ನಿರಾಕರಿಸಿದೆ. ಹುತಾತ್ಮ ಯೋಧನ ಪತ್ನಿ ಶೀತಲ್ ಕದಂ ಅವರು ಸೈನಿಕ ಕಲ್ಯಾಣ ಕಚೇರಿಯಿಂದ ತಂದಿದ್ದ ಶಿಫಾರಸು ಪತ್ರವನ್ನೂ ಶಾಲಾಡಳಿತವು ತಿರಸ್ಕರಿಸಿದೆ.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಶಿಕ್ಷಣಾಧಿಕಾರಿ ಪ್ರಶಾಂತ ದಿಗ್ರಾಸ್ಕರ್ ಅವರು,ಈ ಬಗ್ಗೆ ಪರಿಶೀಲಿಸಲಾಗುವುದು ಮತ್ತು ಅಗತ್ಯವಾದರೆ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗುವುದು ಎಂದು ಬುಧವಾರ ಔರಂಗಾಬಾದ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ನನ್ನ ಮಗಳನ್ನು ಒಂದನೇ ತರಗತಿಗೆ ಸೇರಿಸಲು ಕಳೆದ 15 ದಿನಗಳಿಂದಲೂ ಶಾಲೆಗೆ ಅಲೆದಾಡುತ್ತಿದ್ದೇನೆ. ನಾನು ಶುಲ್ಕವನ್ನು ತುಂಬಲು ಸಿದ್ಧಳಿದ್ದೇನೆ,ಸೈನಿಕ ಕಲ್ಯಾಣ ಕಚೇರಿಯು ನೀಡಿರುವ ಪತ್ರವೂ ನನ್ನ ಬಳಿಯಿದೆ. ಆದರೂ ಶಾಲೆಯು ಪ್ರವೇಶವನ್ನು ನಿರಾಕರಿಸಿದೆ,ಜೊತೆಗೆ ಶಾಲೆಯ ಸಿಬ್ಬಂದಿ ನನಗೆ ಅವಮಾನವನ್ನೂ ಮಾಡಿದ್ದಾರೆ ’ ಎಂದು ಶೀತಲ್ ಕದಂ ನೋವನ್ನು ತೋಡಿಕೊಂಡರು.

 ‘ಶಾಲೆಯ ಅಧಿಕಾರಿಗಳು ನಮ್ಮ ಪತ್ರವನ್ನು ಕಡೆಗಣಿಸಿದ್ದರೆ ಅವರನ್ನು ಕರೆಸಿ ವಿಚಾರಿಸುತ್ತೇವೆ ’ಎಂದು ಸೈನಿಕ ಕಲ್ಯಾಣ ಮಂಡಳಿಯ ಅಧಿಕಾರಿಗಳು ತಿಳಿಸಿದರು. ಸರಕಾರದ ಆದೇಶದಂತೆ ಶಾಲೆಗಳು ಹುತಾತ್ಮ ಯೋಧರ ಮಕ್ಕಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ತನ್ಮಧ್ಯೆ,ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ನಾಂದೇಡ್ ಜಿಲ್ಲಾ ಉಸ್ತುವಾರಿ ಸಚಿವ ಅಶೋಕ ಚವಾಣ್ ಅವರು,ತಾನು ಈ ವಿಷಯವನ್ನು ಪರಿಶೀಲಿಸುತ್ತಿದ್ದೇನೆ. ಈಗ ನಾಗಾರ್ಜುನ ಪಬ್ಲಿಕ್ ಸ್ಕೂಲ್ ತೇಜಸ್ವಿನಿ ಕದಮ್‌ಗೆ ಪ್ರವೇಶ ನೀಡಲು ಮುಂದೆ ಬಂದಿದೆ. ಜ್ಞಾನಮಾತಾ ಶಾಲೆಯ ಪ್ರವೇಶ ನಿಯಮಗಳು ಮತ್ತು ಅದರ ಧೋರಣೆಯ ಪರಿಶೀಲನೆ ನಡೆಯುತ್ತಿದ್ದು,ತಪ್ಪು ಕಂಡುಬಂದರೆ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News