ಕೊರೋನ ವೈರಸ್ ತಡೆಗೆ ಆಯುರ್ವೇದ, ಹೋಮಿಯೋಪಥಿ, ಯುನಾನಿ ಪರಿಣಾಮಕಾರಿ

Update: 2020-01-29 16:26 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜ.29: ಬುಧವಾರ ಸಲಹಾ ಪತ್ರವೊಂದನ್ನು ಹೊರಡಿಸಿರುವ ಆಯುಷ್ ಸಚಿವಾಲಯವು, ಹೋಮಿಯೊಪಥಿ ಮತ್ತು ಯುನಾನಿ ಔಷಧಿಗಳು ಕೊರೋನ ಸೋಂಕುಗಳನ್ನು ಪರಿಣಾಮಕಾರಿಯಾಗಿ ತಡೆಯಬಲ್ಲವು ಎಂದು ಶಿಫಾರಸು ಮಾಡಿದೆ.

ಕೊರೋನ ಸೋಂಕು ನಿರೋಧಕವಾಗಿ ಹೋಮಿಯೊಪಥಿ ಔಷಧಿ ಆರ್ಸೆನಿಕಂ ಆಲ್ಬಂ 30 ಅನ್ನು ಖಾಲಿ ಹೊಟ್ಟೆಯಲ್ಲಿ ಮೂರು ದಿನ ಸೇವಿಸಬಹುದಾಗಿದೆ ಎಂದು ಶಿಫಾರಸು ಮಾಡಿರುವ ಸಚಿವಾಲಯವು,ಸಮುದಾಯದಲ್ಲಿ ಕೊರೋನ ಸೋಂಕು ಇನ್ನೂ ಉಳಿದಿದ್ದರೆ ಒಂದು ತಿಂಗಳ ಬಳಿಕ ಈ ಕ್ರಮವನ್ನು ಪುನರಾವರ್ತಿಸಬೇಕು. ಇನಫ್ಲುಯೆಂಝಾದಂತಹ ಅಸ್ವಸ್ಥತೆಗಳಿಗೂ ಇದನ್ನೇ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದೆ.

ಕೊರೋನ ಸೋಂಕಿನ ಲಕ್ಷಣಗಳನ್ನು ನಿಭಾಯಿಸಲು ಕೆಲವು ಆಯುರ್ವೇದ ಔಷಧಿಗಳು,ಯುನಾನಿ ಕಷಾಯಗಳು ಮತ್ತು ಮನೆಮದ್ದುಗಳನ್ನೂ ಅದು ಪತ್ರದಲ್ಲಿ ಸೂಚಿಸಿದೆ.

ಗಾಳಿಯಿಂದ ಪಸರಿಸುವ ಸೋಂಕುಗಳನ್ನು ತಡೆಯಲು ಕೆಲವು ಮುನ್ನೆಚ್ಚರಿಕೆಗಳನ್ನು ಉಲ್ಲೇಖಿಸಿರುವ ಸಚಿವಾಲಯವು,ವೈಯಕ್ತಿಕ ಸ್ವಚ್ಛತೆ,ಸಾಬೂನು ಮತ್ತು ನೀರಿನಿಂದ ಕನಿಷ್ಠ 20 ಸೆಕೆಂಡ್‌ಗಳ ಕಾಲ ಕೈಗಳನ್ನು ತೊಳೆದುಕೊಳ್ಳುವದು,ಕೈಗಳನ್ನು ತೊಳೆದುಕೊಳ್ಳದೆ ಕಣ್ಣುಗಳು,ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸದಿರುವುದು ಮತ್ತು ಅನಾರೋಗ್ಯಪೀಡಿತರಿಂದ ಅಂತರವನ್ನು ಕಾಯ್ದುಕೊಳ್ಳುವುದು ಇತ್ಯಾದಿ ಕ್ರಮಗಳನ್ನು ಸೂಚಿಸಿದೆ.

ರೋಗಾಣುಗಳ ಪ್ರಸರಣವನ್ನು ತಡೆಯಲು ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರದಿಂದ ಮುಖವನ್ನು ಮುಚ್ಚಿಕೊಳ್ಳುವಂತೆ ಹಾಗೂ ಪ್ರಯಾಣದ ಸಂದರ್ಭದಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಕೆಲಸದ ವೇಳೆ ಎನ್95 ಮಾಸ್ಕ್‌ನ್ನು ಧರಿಸುವಂತೆ ಸೂಚಿಸಿದೆ.

ಕೊರೋನ ವೈರಲ್ ಸೋಂಕು ತಗಲಿದೆ ಎಂಬ ಶಂಕೆಯಿದ್ದರೆ ಮಾಸ್ಕ್ ಧರಿಸಿ ಮತ್ತು ತಕ್ಷಣವೇ ಸಮೀಪದ ಆಸ್ಪತ್ರೆಯನ್ನು ಸಂಪರ್ಕಿಸಿ ಎಂದೂ ಸಚಿವಾಲಯವು ನಾಗರಿಕರಿಗೆ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News