ಸಿಡಿ ಉತ್ಸವ ಆಚರಣೆ: ರೇಣುಕಾಚಾರ್ಯ ವಜಾಗೊಳಿಸಲು ವಿವಿಧ ಸಂಘಟನೆಗಳು ಪಟ್ಟು

Update: 2020-01-29 16:48 GMT

ಬೆಂಗಳೂರು, ಜ.29: ಮೌಢ್ಯ ನಿಷೇಧ ಕಾಯ್ದೆ ಉಲ್ಲಂಘಿಸಿ ಇಲ್ಲಿನ ದಾವಣಗೆರೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಸಿಡಿ ಉತ್ಸವ ಆಚರಣೆ ಮಾಡಿರುವ ಶಾಸಕ ಎಂ.ಪಿ.ರೇಣುಕಾಚಾರ್ಯರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಬೇಕೆಂದು ವಿವಿಧ ಸಂಘಟನೆಗಳು ಒತ್ತಾಯ ಮಾಡಿವೆ.

ರಾಜ್ಯ ಸರಕಾರ ಇತ್ತೀಚಿಗೆ ನಿಷೇಧ ಹೇರಿರುವ ಮೌಢ್ಯ ನಿಷೇಧ ಕಾಯ್ದೆಯ ಹೊರತಾಗಿಯೂ ಸಿಡಿ ಉತ್ಸವ ಆಚರಣೆ ಮಾಡಿರುವ ರೇಣುಕಾಚಾರ್ಯ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ (ಕರ್ನಾಟಕ) ಆಗ್ರಹಿಸಿದೆ.

ಮೌಢ್ಯ ವಿರೋಧಿ ಕಾಯ್ದೆಯು ದೇಶದ ಪ್ರಜೆಗಳೆಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತದೆ. ತಮ್ಮದೇ ಸರಕಾರ ರೂಪಿಸಿರುವ ಸಮಾಜಮುಖಿ ಕಾನೂನನ್ನು ಸಮರ್ಪಕವಾಗಿ ಜಾರಿ ಮಾಡಿಸುವ ವಿಶೇಷ ಜವಾಬ್ದಾರಿಯು ಜನಪ್ರತಿನಿದಿಗಳ ಹೆಗಲ ಮೇಲಿರುತ್ತದೆ. ಆದ್ದರಿಂದ ರೇಣುಕಾಚಾರ್ಯ ವಿರುದ್ಧ ಸರಕಾರ ಸೂಕ್ತ ಕಾನೂನುಕ್ರಮಕ್ಕೆ ಮುಂದಾಗಬೇಕೆಂದು ಸಮಿತಿ ರಾಜ್ಯ ಜಂಟಿ ಕಾರ್ಯದರ್ಶಿ ಆರ್.ರಾಮಕೃಷ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಓರ್ವ ಜನಪ್ರತಿನಿಧಿಯಾಗಿ ಅವೈಜ್ಞಾನಿಕ ಆಚರಣೆಯನ್ನು ಮಾಡಿರುವ ರೇಣುಕಾಚಾರ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಪ್ರಕಟನೆಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News