ಪೌರತ್ವ ಕಾಯ್ದೆ ಕಾಂಗ್ರೆಸ್ ಕಾಲಘಟ್ಟದ್ದು ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ: ಚಿಂತಕ ಶಿವಸುಂದರ್

Update: 2020-01-29 17:03 GMT

ಮಂಡ್ಯ, ಜ.29: ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಮರಿಗೆ ನೇರವಾಗಿ ಚೂರಿ ಹಾಕಿದರೆ, ಹಿಂದೂಗಳ ಬೆನ್ನಿಗೆ ಇರಿಯುತ್ತದೆ ಎಂದು ಮಾನವ ಹಕ್ಕುಗಳ ಹೋರಾಟಗಾರ, ಚಿಂತಕ ಶಿವಸುಂದರ್ ಎಚ್ಚರಿಕೆ ನೀಡಿದ್ದಾರೆ.

ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ಪೌರತ್ವ ಕಾಯ್ದೆ ಯಾರಿಗಾಗಿ ಕುರಿತು ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಸಿಎಎ, ಎನ್‍ಸಿಆರ್, ಎನ್‍ಪಿಆರ್ ನಿಂದ ಕೇವಲ ಮುಸ್ಲಿಮರು ಮಾತ್ರವಲ್ಲ ಈ ದೇಶದ ಹಿಂದೂ ಪರಿಧಿಯಲ್ಲಿ ಬರುವ ದಲಿತರು, ಬಡವರು, ಶೂದ್ರರು, ಮಹಿಳೆಯ ಎಲ್ಲರಿಗೂ ಮಾರಕವಾಗಲಿದೆ ಎಂದು ಅವರು ಹೇಳಿದರು.

ಈಗಾಗಲೇ ವಿದೇಶಗಳಿಂದ ಬಂದಿರುವ ಲಕ್ಷಾಂತರ ಮಂದಿಗೆ ಸಂವಿಧಾನದನ್ವಯ ನಾಗರಿಕತ್ವ ಕಲ್ಪಿಸಲಾಗಿದೆ. ಹಾಗಾಗಿ ಸಿಎಎ ಅಗತ್ಯವೇ ಇಲ್ಲ ಎಂದರು. 70 ವರ್ಷಗಳಿಂದ ತನ್ನ ಅಜೆಂಡಾ ಆದ ಮನುಸ್ಮೃತಿ ಜಾರಿಗೊಳಿಸಲು ಬಿಜೆಪಿಗೆ ಅವಕಾಶ ಇರಲಿಲ್ಲ. ಅಧಿಕಾರ ಸಿಕ್ಕಿರುವುದರಿಂದ ಅದನ್ನು ಒಂದೊಂದೇ ಕಾಯ್ದೆ ರೂಪದಲ್ಲಿ ಅನುಷ್ಠಾನಗೊಳಿಸಿ ಬ್ರಾಹ್ಮಣಶಾಹಿ ಆಡಳಿತ ಜಾರಿಗೆ ಹೊರಟಿದೆ ಎಂದು ಅವರು ಆರೋಪಿಸಿದರು.

ಪೌರತ್ವ ಕಾಯ್ದೆ ಕಾಂಗ್ರೆಸ್ ಕಾಲಘಟ್ಟದ್ದು ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ. 2004ರ ವಾಜಪೇಯಿ ಸರಕಾರದಲ್ಲೇ ಗೆಜೆಟ್ ನೋಟಿಫಿಕೇಷನ್ ಆಯಿತು. ಬಿಜೆಪಿ ಸುಳ್ಳನ್ನು ಕಾಂಗ್ರೆಸ್ ಜನರಿಗೆ ಮನವರಿಗೆ ಮಾಡಿಕೊಡಬೇಕು ಎಂದು ಅವರು ತಾಕೀತು ಮಾಡಿದರು. ಇದು ಕೇವಲ ಮುಸ್ಲಿಮರ ಸಮಸ್ಯೆಯೆಂದು ದಲಿತರು, ಶೂದ್ರರು ಕುಳಿತರೆ ಹಿಂದಿನ ಗುಲಾಮಗಿರಿ ಆಳ್ವಿಕೆಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ಎಲ್ಲರೂ ಬೀದಿಗಿಳಿದು ಹೋರಾಟ ಮಾಡುವ ಮೂಲಕ ಸಂವಿಧಾನದ ಆಶಯ ಉಳಿಸಬೇಕಾಗಿದೆ ಎಂದು ಅವರು ಹೇಳಿದರು.

ಎನ್‍ಪಿಆರ್ ಇಲ್ಲದೆ ಎನ್‍ಸಿಆರ್, ಸಿಎಎ ಜಾರಿ ಸಾಧ್ಯವೇ ಇಲ್ಲ. ಹಾಗಾಗಿ ಎಲ್ಲರೂ ಎಪ್ರಿಲ್‍ನಿಂದ ಆರಂಭವಾಗುವ ಎನ್‍ಪಿಆರ್ ಗೆ ಅಸಹಕಾರ ತೋರಬೇಕು. ಈ ಬಗ್ಗೆ ಮನೆಮನೆಗೂ ಹೋಗಿ ಜಾಗೃತಿ ಮೂಡಿಸಬೇಕು ಎಂದು ಅವರು ಕರೆ ನೀಡಿದರು.

ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಕ್ಕೆ ಧಕ್ಕೆ ತರುವ ಸಿಎಎ, ಎನ್‍ಸಿಆರ್, ಎನ್‍ಪಿಆರ್ ವಿರೋಧಿಸಬೇಕು ಎಂದು ಮನವಿ ಮಾಡಿದರು.

ಬಜರಂಗ ದಳದ ಮಾಜಿ ಮುಖಂಡ ಮಹೇಂದ್ರಕುಮಾರ್, ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ರೈತಸಂಘದ ಜಿಲ್ಲಾಧ್ಯಕ್ಷ ಎಸ್.ಸುರೇಶ್, ದಸಂಸ ರಾಜ್ಯ ಸಂಘಟನಾ ಸಂಚಾಲಕ ಮುಖಂಡ ಎಂ.ಬಿ.ಶ್ರೀನಿವಾಸ್, ಸಿಐಟಿಯು ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಬಿವಿಎಫ್‍ನ ವಜ್ರಮುನಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಸಿ.ಎಂ.ದ್ಯಾವಪ್ಪ, ಸಿಪಿಎಂ ಎಂ.ಪುಟ್ಟಮಾದು, ಕೃಷಿಕೂಲಿಕಾರರ ಸಂಘದ ಟಿ.ಯಶ್ವಂತ್, ಅಖಿಲ ಭಾರತ ವಕೀಲರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‍ ಕುಮಾರ್, ದಲಿತ ಮುಖಂಡರಾದ ರಾಮಯ್ಯ, ಸೋಮಶೇಖರ್ ಕೆರಗೋಡು, ಸಂವಿಧಾನ ಸಂರಕ್ಷಣಾ ಸಮಿತಿಯ ಎಂ.ಬಿ.ನಾಗಣ್ಣಗೌಡ, ಲಕ್ಷ್ಮಣ್ ಚೀರನಹಳ್ಳಿ, ಮುಹಮ್ಮದ್ ತಾಹೀರ್, ಮುಜಾಹಿದ್, ಸಲೀಂ, ಅಹಮದ್, ಇತರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News