ದಲಿತನ ಶವ ಸುಡಲು ಅವಕಾಶ ನೀಡದಿರುವುದು ಯಾವ ರೀತಿಯ ಹಿಂದುತ್ವ?: ಮಹೇಂದ್ರ ಕುಮಾರ್ ವಾಗ್ದಾಳಿ

Update: 2020-01-29 17:08 GMT

ಮಂಡ್ಯ, ಜ.29: ದೇಶದಲ್ಲಿ ಕ್ಷೋಭೆ ಸೃಷ್ಟಿಸುವುದು ಸಿಎಎ ಹಿಂದಿನ ಷಡ್ಯಂತ್ರವಾಗಿದೆ. ಇದನ್ನು ಪ್ರತಿಯೊಬ್ಬ ಭಾರತೀಯನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಬಜರಂಗ ದಳದ ಮಾಜಿ ಮುಖಂಡ ಮಹೇಂದ್ರ ಕುಮಾರ್ ಕರೆ ನೀಡಿದ್ದಾರೆ.

ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ 'ಪೌರತ್ವ ಕಾಯ್ದೆ ಯಾರಿಗಾಗಿ ?' ಕುರಿತು ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿದ್ದ ಭಾರತದ ಕಲ್ಪನೆಯಾದ ಬ್ಯಾಹ್ಮಣ್ಯ ಆಧಿಪತ್ಯವನ್ನು ಮತ್ತೆ ಪ್ರತಿಷ್ಠಾಪಿಸುವುದೇ ಎನ್‍ಪಿಆರ್, ಎನ್‍ಸಿಆರ್, ಸಿಎಎ ಜಾರಿಯ ಉದ್ದೇಶ ಎಂದು ಅವರು ಹೇಳಿದರು.

ಒಕ್ಕಲಿಗ, ಕುರುಬ, ವಾಲ್ಮೀಕಿ, ದಲಿತ, ಮುಸ್ಲಿಂ ಎನ್ನದೆ ಎಲ್ಲರೂ ಭಾರತೀಯರೆಂದು ಬೀದಿಗಿಳಿದು ಪ್ರತಿರೋಧ ಮಾಡುವುದೊಂದೇ ಇಂದು ಎದುರಾಗಿರುವ ಗಂಡಾಂತರಕ್ಕೆ ಪರಿಹಾರ ಎಂದು ಅವರು ಕರೆಕೊಟ್ಟರು.

ಸಿಎಎ ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿ, ಸಂಘಪರಿವಾದವರು ಪಾಕಿಸ್ತಾನ, ಮುಸ್ಲಿಂ ಪಾಯಿಂಟ್ ಹೊರತುಪಡಿಸಿ ಎಂದೂ ದೇಶಭಕ್ತಿ, ರಾಷ್ಟ್ರಭಕ್ತಿ ಬಗ್ಗೆ ಮಾತಾಡಿಲ್ಲ. ಅವರ ಗುರಿ ದೇಶದಲ್ಲಿ ಮುಸ್ಲಿಮರನ್ನು ಕ್ಷೋಭೆಗೆ ಒಳಪಡಿಸುವುದಾಗಿದೆ ಎಂದು ಅವರು ಹೇಳಿದರು.

ಈ ದೇಶದ ಹಿಂದುತ್ವ ಸಂಘಪರಿವಾರ, ಬಿಜೆಪಿ ಪ್ರತಿಪಾದಿಸುವ ಹಿಂದುತ್ವ ಅಲ್ಲ, ಅದು ಈ ದೇಶದ ಮಣ್ಣಿನ ಒಳಗೆ ಬೆರೆತಿರುವ ಹಿಂದುತ್ವವಾಗಿದೆ. ಆದ್ದರಿಂದ ಸರ್ವ ಧರ್ಮದವರೂ ಸೋದರತ್ವದಿಂದ ಬದುಕುತ್ತಾ ಬಂದಿದ್ದಾರೆ ಎಂದು ಅವರು ವಿವರಿಸಿದರು. ಒಬ್ಬ ದಲಿತನ ಶವಸಂಸ್ಕಾರಕ್ಕೆ ಅವಕಾಶ ನೀಡದಿರುವುದು, ದಲಿತನನ್ನು ದೇವಸ್ಥಾನಕ್ಕೆ ಸೇರಿಸದಿರುವುದು, ಮೇಲ್ವರ್ಗದ ಜನರ ಮದುವೆಗೆ ಹೋದ ದಲಿತನ ಮೇಲೆ ಹಲ್ಲೆ ಮಾಡುವುದು ಯಾವ ರೀತಿಯ ಹಿಂದುತ್ವ ಎಂದು ಅವರು ಕಿಡಿಕಾರಿದರು.

ಕೇವಲ ಬೆರಳೆಣಿಕೆಯಷ್ಟೆ ಇರುವ ಮಂದಿಯ ಷಡ್ಯಂತ್ರದ ಬಲೆಗೆ ಬಹುಸಂಖ್ಯಾತರಾದ ಅಲ್ಪಸಂಖ್ಯಾತರು, ದಲಿತರು, ಶೂದ್ರರು, ಹಿಂದುಳಿದವರು ಬೀಳದೆ ಅಖಂಡ ಭಾರತದ ಉಳಿವಿಗೆ ಒಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಸಮಾಜದಲ್ಲಿ ಶೋಷಣೆ ಮಾಡುತ್ತಿದ್ದವರ ಮೇಲೆ ಟಿಪ್ಪು ಸುಲ್ತಾನ್ ದಾಳಿ ಮಾಡಿದನೇ ಹೊರತು, ಜಾತಿ, ಧರ್ಮದ ಆಧಾರದಲ್ಲಿ ದಾಳಿ ಮಾಡಲಿಲ್ಲ. ಆತ ಜಾತಿವಾದಿಯಾದ್ದರೆ ದೇವನಹಳ್ಳಿ, ತಂಜಾವೂರು ಮೊದಲಾದ ಕಡೆ ದೇವಸ್ಥಾನ ಕಟ್ಟುತ್ತಿರಲಿಲ್ಲ. ಆತ ಜಮೀನ್ದಾರರ ಬಳಿ ಇದ್ದ ಭೂಮಿ ಕಿತ್ತು ದಲಿತರು, ಬಡವರಿಗೆ ಹಿಂಚಿದ ಬಗ್ಗೆ ಇತಿಹಾಸದಲ್ಲಿ ದಾಖಲೆ ಇದೆ ಎಂದು ಮಹೇಂದ್ರ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News