ದೇಶವನ್ನು ಎಂದಿಗೂ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ: ಎಸ್‍ಡಿಪಿಐ ನಾಯಕ ಅಬ್ದುಲ್ ಮಜೀದ್

Update: 2020-01-29 17:16 GMT

ಮಂಡ್ಯ, ಜ.29: ಬಿಜೆಪಿ, ಸಂಘಪರಿವಾರ ಈ ದೇಶವನ್ನು ಎಂದಿಗೂ ಹಿಂದೂ ರಾಷ್ಟ್ರ ಮಾಡಲು ಸಾಧ್ಯವಾಗುವುದಿಲ್ಲ ಎಂದು ಎಸ್‍ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಹೇಳಿದ್ದಾರೆ.

ಸಂವಿಧಾನ ಸಂರಕ್ಷಣಾ ವೇದಿಕೆ ವತಿಯಿಂದ ಪೌರತ್ವ ಕಾಯ್ದೆ ಯಾರಿಗಾಗಿ ಕುರಿತು ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ನೂರಾರು ವರ್ಷ ಆಳಿದ ಮೊಗಲರು, ಬ್ರಿಟೀಷರಿಂದ ಮುಸ್ಲಿಂ, ಕ್ರಿಶ್ಚಿಯನ್ ದೇಶ ಮಾಡಲು ಸಾಧ್ಯವಾಗಲಿಲ್ಲ. ಇನ್ನು ಕೇವಲ ಏಳು ವರ್ಷದಿಂದ ಆಳ್ವಿಕೆ ಮಾಡುವವರಿಂದ ಸಾಧ್ಯವೇ ಆಗುವುದಿಲ್ಲ ಎಂದು ಅವರು ಪ್ರತಿಪಾದಿಸಿದರು.

ಸ್ವಾತಂತ್ರ್ಯ ಪೂವ, ನಂತರದಿಂದಲೂ ಎಲ್ಲರೂ ಸೋದರತ್ವದಿಂದ ಸೌಹಾರ್ದವಾಗಿ ಬದುಕುತ್ತಿರುವ ದೇಶದಲ್ಲಿ ಎನ್‍ಪಿಆರ್, ಎನ್‍ಸಿಆರ್, ಸಿಎಎ ಮೂಲಕ ಒಡಕು ಮೂಡಿಸಲು ಯತ್ನ ನಡೆಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಅವರು ಕರೆ ನೀಡಿದರು.

ದೇಶದ ಸುಮಾರು 10.40 ಕೋಟಿ ಆದಿವಾಸಿವಾಸಿಗಳು, 6.40 ಕೋಟಿ ಸ್ಲಂ ನಿವಾಸಿಗಳು, ನೆರೆಯಿಂದ ಎಲ್ಲವನ್ನೂ ಕಳೆದುಕೊಂಡವರು ದಾಖಲೆ ಎಲ್ಲಿಂದ ತರುತ್ತಾರೆ. ಇವರೆಲ್ಲರೂ ಬೀದಿಪಾಲಾಗಲಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಯಾರೂ ದಾಖಲಾತಿ ಕೊಡದೆ ಅಸಹಕಾರ ಚಳವಳಿ ಮಾಡುವ ಮೂಲಕ ಸಿಎಎ, ಎನ್‍ಸಿಆರ್, ಎನ್‍ಪಿಆರ್ ಜಾರಿಯಾಗದಂತೆ ಮಾಡುವ ಮೂಲಕ ಪವಿತ್ರವಾದ ಸಂವಿಧಾನದ ಆಶಯಗಳನ್ನು ಉಳಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News