ಸಿಎಎ ವಿರೋಧಿಸಿ ಬಂದ್ ಕರೆ: ಚಿಕ್ಕಮಗಳೂರಿನಲ್ಲಿ ಭಾಗಶಃ ಯಶಸ್ವಿ

Update: 2020-01-29 17:31 GMT

ಚಿಕ್ಕಮಗಳೂರು, ಜ.29: ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ಬಹುಜನ ಕ್ರಾಂತಿ ಮೋರ್ಚ ಕರೆ ನೀಡಿದ್ದ ಭಾರತ್ ಬಂದ್ ಭಾಗಶಃ ಯಶಸ್ವಿಯಾಗಿದ್ದು, ಬಂದ್‍ಗೆ ಜಿಲ್ಲೆಯ ಬಹುತೇಕ ಎಲ್ಲ ಮುಸ್ಲಿಂ ಸಂಘಟನೆಗಳು ಹಾಗೂ ಕೆಲ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿದ್ದವು. ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಬಹುತೇಕ ಅಂಗಡಿಗಳು ಹಾಗೂ ಕೆಲ ಶಾಲಾ ಕಾಲೇಜುಗಳು ಬುಧವಾರ ಬಂದ್ ಆಗಿದ್ದವು.

ಬಂದ್ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ನಗರದಾದ್ಯಂತ ಬಹುತೇಕ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ನಗರದ ಮಾರ್ಕೆಟ್ ರಸ್ತೆ, ಐಜಿ ರಸ್ತೆ, ಎಂಜಿ ರಸ್ತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದವರ ಅಂಗಡಿ ಮುಂಗಟ್ಟುಗಳಿದ್ದು, ಈ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಿಗಳು ಬೆಳಗಿನಿಂದ ಸಂಜೆ ವರೆಗೂ ಬಾಗಿಲು ಮುಚ್ಚುವ ಮೂಲಕ ಬಂದ್ ಕರೆಗೆ ಬೆಂಬಲ ನೀಡಿದ್ದರು.

ಉಳಿದಂತೆ ನಗರದ ಉಪ್ಪಳ್ಳಿ, ಮಲ್ಲಂದೂರು ಸರ್ಕಲ್‍ಗಳಲ್ಲಿರುವ ಹೊಟೇಲ್‍ಗಳು, ಕ್ಯಾಂಟಿನ್‍ಗಳು, ಬಾರ್‍ಲೈನ್ ರಸ್ತೆಗಳಲ್ಲಿರುವ ಹಲವು ಅಂಗಡಿಗಳು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬಂದ್ ಮಾಡಲಾಗಿದ್ದ ಅಂಗಡಿ ಮುಂಗಟ್ಟುಗಳ ಶಟರ್ ಗಳು, ಬಾಗಿಲುಗಳ ಮೇಲೆ 'ನಾನು ಭಾರತೀಯ ನಾಗರಿಕ, ನಾನು ಎನ್‍ಆರ್‍ಸಿ, ಸಿಎಎ, ಎನ್‍ಪಿಆರ್ ಕಾಯ್ದೆಗಳನ್ನು ವಿರೋಧಿಸುತ್ತೇನೆ' ಎಂದು ಬರೆಯಲಾಗಿದ್ದ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿತ್ತು. 

ಇನ್ನು ಬಂದ್ ಬೆಂಬಲಿಸಿ ನಗರದಲ್ಲಿರುವ ನಾಲ್ಕು ಶಾಲೆಗಳಿಗೆ ಬುಧವಾರ ರಜೆ ನೀಡಲಾಗಿದ್ದು, ನಗರದ ಯುನೈಟೆಡ್ ಶಾಲೆ, ಸನ್‍ರೈಸ್ ಶಾಲೆ, ಕೇಂಬ್ರಿಡ್ಜ್ ಹಾಗೂ ವಿದ್ಯಾಭಾರತಿ ಶಾಲೆಗಳಿಗೆ ರಜೆ ನೀಡಲಾಗಿದ್ದು, ಶಾಲೆಯ ಗೇಟ್‍ಗಳಿಗೆ ಬೀಗ ಹಾಕಿದ್ದ ದೃಶ್ಯಗಳು ಕಂಡುಬಂದವು. ಬಂದ್ ಬೆಂಬಲಿಸಿ ಕೆಲ ಗೂಡ್ಸ್ ವಾಹನಗಳು ಬುಧವಾರ ನಗರದಲ್ಲಿ ರಸ್ತೆಗಿಳಿಯಲಿಲ್ಲ. ಎನ್‍ಆರ್‍ಸಿ, ಸಿಎಎ, ಎನ್‍ಪಿಆರ್ ಕಾಯ್ದೆಗಳನ್ನು ವಿರೋಧಿ ಸ್ಟಿಕ್ಕರ್ ಗಳನ್ನು ಅಂಟಿಸಲಾಗಿದ್ದ ಕೆಲ ಗೂಡ್ಸ್ ವಾಹನಗಳು, ಆಟೊ ರಿಕ್ಷಾಗಳು ರಸ್ತೆಗಳ ಬದಿಯಲ್ಲಿ, ಮನೆಗಳ ಮುಂಭಾಗದಲ್ಲಿ ನಿಂತಿದ್ದ ದೃಶ್ಯಗಳು ನಗರದಾದ್ಯಂತ ಕಂಡು ಬಂದವು. 

ಕೆಲವೆಡೆ ಪೌರತ್ವ ಕಾಯ್ದೆಗಳು ದೇಶ ಒಡೆಯುವ ಸಂಚಿನ ಭಾಗವಾಗಿದ್ದು, ದೇಶದ ಐಕ್ಯತೆಗಾಗಿ ಬಂದ್ ಬೆಂಬಲಿಸಿ ಎಂಬ ಬರಹಗಳಿದ್ದ ಬ್ಯಾನರ್ ಗಳು ಕಂಡು ಬಂದವಾದರೂ ಬಂದ್ ಹಿನ್ನೆಲೆಯಲ್ಲಿ ನಗರದ ವ್ಯಾಪ್ತಿಯಲ್ಲಿ ಪ್ರತಿಭಟನೆ, ಧರಣಿ ನಡೆಸಿದ ಬಗ್ಗೆ ವರದಿಯಾಗಿಲ್ಲ. ಬಂದ್‍ಗೆ ಕರೆ ನೀಡಿದ್ದರೂ ನಗರದಲ್ಲಿ ವಾಹನಗಳ ಸಂಚಾರ ಎಂದಿನಂತಿತ್ತು. ಸಾರಿಗೆ ಬಸ್‍ಗಳ ಓಡಾಟ ನಿರಾತಂಕವಾಗಿತ್ತು. ಆಸ್ಪತ್ರೆಗಳಲ್ಲಿ ಜನಸಂದಣಿ ಎಂದಿನಂತಿತ್ತು. 

ಚಿಕ್ಕಮಗಳೂರು ನಗರ ಅಲ್ಲದೇ ಜಿಲ್ಲೆಯ ಶೃಂಗೇರಿ, ಬಾಳೆಹೊನ್ನೂರು, ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ತರೀಕೆರೆ, ಕಡೂರು ಪಟ್ಟಣಗಳಲ್ಲೂ ಮುಸ್ಲಿ ಸಂಘಟನೆಗಳು ಬಂದ್‍ಗೆ ಬೆಂಬಲ ಸೂಚಿಸಿದ್ದು, ಈ ಪಟ್ಟಣಗಳ ವ್ಯಾಪ್ತಿಯಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್ ಬೆಂಬಲಿಸಿದ್ದವು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News