'ಹಿಂದುಗಳೆಲ್ಲಾ ಒಂದು' ಘೋಷಣೆ ಮಾತಿಗಷ್ಟೇ ಸೀಮಿತ: ದಲಿತನ ಶವ ಸುಡಲು ಅವಕಾಶ ನಿರಾಕರಣೆ ಬಗ್ಗೆ ಬಿಎಸ್ಪಿ

Update: 2020-01-29 17:37 GMT

ಬೆಂಗಳೂರು, ಜ.29: ಹಿಂದುಗಳೆಲ್ಲಾ ಒಂದು ಎನ್ನುವ ಸಂಘಪರಿವಾರದ ಘೋಷಣೆ ಮಾತಿಗಷ್ಟೇ ಸೀಮಿತವಾಗಿದ್ದು, ಇದಕ್ಕೆ ಉಡುಪಿ ವ್ಯಾಪ್ತಿಯಲ್ಲಿ ಸಾರ್ವಜನಿಕ ರುದ್ರಭೂಮಿಯಲ್ಲಿ ದಲಿತ ಶವಸಂಸ್ಕಾರಕ್ಕೆ ನಿರಾಕರಣೆ ಪ್ರಕರಣವೇ ಸಾಕ್ಷಿ ಎಂದು ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಆರೋಪಿಸಿದೆ.

ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಬಿಎಸ್ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ, ಇಂದಿಗೂ ಸಹ ದಲಿತರನ್ನು ಅಮಾನೀಯವಾಗಿ ನಡೆಸಿಕೊಳ್ಳುತ್ತಿದ್ದು, ಹಾಡು ಹಗಲೇ ಅಸ್ಪೃಶ್ಯತೆ ಪ್ರಕರಣಗಳು ನಡೆಯುತ್ತಿವೆ. ಇದನ್ನು ಮರೆಮಾಚಿ, ಆರೆಸ್ಸೆಸ್, ಶ್ರೀರಾಮ ಸೇನೆ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರು, ಹಿಂದುಗಳೆಲ್ಲಾ ಒಂದು, ಒಂದೇ ಮಾತರಂ ಎನ್ನುವ ಘೋಷಣೆ ಕೂಗುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.

ಉಡುಪಿ ಜಿಲ್ಲೆಯ ಉಚ್ಚಿಲ ಬಡಾ ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದ್ದು, ಅಸ್ಪೃಶ್ಯತೆ ಆಚರಣೆ ಮಾಡಿರುವ ಆರೋಪಿಗಳ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕಿದೆ. ಜೊತೆಗೆ, ಇಂತಹ ಕೃತ್ಯವೆಸಗುವ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News