ಭಾರತ ಬಂದ್‍ ಕರೆಗೆ ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ

Update: 2020-01-29 18:41 GMT

ವಿಜಯಪುರ: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೊಂದಣಿ ರದ್ದುಪಡಿಸುವಂತೆ ಒತ್ತಾಯಿಸಿ ಬಹುಜನ ಕ್ರಾಂತಿ ಮೋರ್ಚಾ ಕರೆ ನೀಡಿದ್ದ ಭಾರತ ಬಂದ್‍ಗೆ ವಿಜಯಪುರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ವಿಜಯಪುರದ ಕೆ.ಸಿ. ಮಾರುಕಟ್ಟೆ, ಕಿರಾಣಾ ಮಾರುಕಟ್ಟೆ, ತರಕಾರಿ ಮಾರುಕಟ್ಟೆ ಸೇರಿದಂತೆ ಹಲವಾರು ಅಂಗಡಿ ಮುಗ್ಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ದಿನನಿತ್ಯ ಜನಸಂದಣಿಯಿಂದ ಕೂಡಿರುತ್ತಿದ್ದ ಗಾಂಧಿಚೌಕ್, ಆಜಾದ್ ರಸ್ತೆ, ಕೆಸಿ ಮಾರುಕಟ್ಟೆ ರಸ್ತೆ ಸೇರಿದಂತೆ ಅನೇಕ ಜನನಿಬಿಡ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಸಾರಿಗೆ ಬಸ್‍ಗಳ ಸಂಚಾರ ಎಂದಿನಂತಿತ್ತು. ಸಿನೆಮಾ ಮಂದಿರ, ಪೆಟ್ರೋಲ್ ಪಂಪ್, ಕೆಲವೊಂದು ಹೋಟೆಲ್‍ಗಳು ಎಂದಿನಂತೆ ಕಾರ್ಯನಿರ್ವಹಿಸಿದವು, ಕೆಲವೊಂದು ಆಟೋ ಸಂಘಟನೆಗಳು ಬಂದ್‍ಗೆ ಬೆಂಬಲಿಸಿದ್ದರಿಂದ ಮಧ್ಯಾಹ್ನದವರೆಗೂ ಆಟೋ ಸಂಚಾರ ವಿರಳವಾಗಿತ್ತು. ಬೆಳಗ್ಗೆಯಿಂದಲೇ ಬಹುಜನ ಮುಕ್ತಿ ಮೋರ್ಚಾ ಸಂಘಟನೆಯ ಪದಾಧಿಕಾರಿಗಳು ಗಾಂಧಿಚೌಕ್, ಕೆಸಿ ಮಾರುಕಟ್ಟೆ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಚರಿಸಿ ಅಂಗಡಿಗಳನ್ನು ಬಂದ್ ಮಾಡುವಂತೆ ಮನವಿ ಮಾಡಿಕೊಂಡರು.

ಬಹುಜನ ಕ್ರಾಂತಿ ಮೋರ್ಚಾದ ಪ್ರಮುಖರಾದ ಬಂದೇನವಾಜ್ ಮಹಾಬರಿ, ಮೌಲಾನಾ ಶಕೀಲ್ ಅಹ್ಮದ್ ಖಾಸ್ಮಿ, ಹಿರಿಯ ಮುಖಂಡ ಅಬ್ದುಲ್‍ ಹಮೀದ್ ಮುಶ್ರೀಫ್, ಮಹೇಶ ಕ್ಯಾತನ್ ಸೇರಿದಂತೆ ಹಲವಾರು ಮುಖಂಡರು ಕೆಸಿ ಮಾರುಕಟ್ಟೆ, ಗಾಂಧೀ ವೃತ್ತ ಭಾಗದಲ್ಲಿ ಸಂಚರಿಸಿ ಅಂಗಡಿಯನ್ನು ಬಂದ್ ಮಾಡುವಂತೆ ಮನವಿ ಮಾಡಿಕೊಂಡರು. ಸಂವಿಧಾನ ವಿರೋಧಿಯಾಗಿ ಪೌರತ್ವ ಕಾಯ್ದೆ ಜಾರಿಗೊಳಿಸಲಾಗುತ್ತಿದೆ, ಇದನ್ನು ವಿರೋಧಿಸಿ ಬಂದ್‍ಗೆ ಕರೆ ನೀಡಲಾಗಿದೆ, ಹೀಗಾಗಿ ನಮ್ಮನ್ನು ಬೆಂಬಲಸಿ ಎಂದು ಮನವಿ ಮಾಡಿಕೊಂಡರು. 

ನಂತರ ಡಾ.ಬಿ.ಆರ್. ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಡೆಸಲು ನೂರಾರು ಸಂಘಟಕರು ಜಮಾಯಿಸಿದ್ದರು. ಆದರೆ ಪೊಲೀಸರು ಪ್ರತಿಭಟನೆಗೆ ಅನುಮತಿ ದೊರಕದ ಹಿನ್ನೆಲೆಯಲ್ಲಿ ಹಾಗೂ ಪೊಲೀಸರ ಮನವಿಯ ಮೇರೆಗೆ ಪ್ರತಿಭಟನೆ ನಡೆಸಲಿಲ್ಲ. ಸಂಘಟನಾಕಾರರ ಮನವಿಗೆ ಅನೇಕರು ಸ್ಪಂದಿಸಿ ಅಂಗಡಿಗಳನ್ನು ಬಂದ್ ಮಾಡಿದರು. ಇನ್ನೂ ಕೆಲವೆಡೆ ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News