ತುಮಕೂರು ಮನಪಾ ಮೇಯರ್ ಆಗಿ ಫರೀದಾ ಬೇಗಂ ಅವಿರೋಧ ಆಯ್ಕೆ

Update: 2020-01-30 14:42 GMT

ತುಮಕೂರು, ಜ.30: ತುಮಕೂರು ಮಹಾನಗರ ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಕಾಂಗ್ರೆಸ್‍ನ ಫರೀದಾ ಬೇಗಂ, ಜೆಡಿಎಸ್‍ನ ಶಶಿಕಲಾ ಕ್ರಮವಾಗಿ ಮೇಯರ್, ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಾಲಿಕೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಈ ಅವಧಿಯಲ್ಲೂ ಮುಂದುವರೆದಿದ್ದು, ವರಿಷ್ಠರ ತೀರ್ಮಾನದಂತೆ ಪಾಲಿಕೆ 13ನೇ ವಾರ್ಡ್ ಸದಸ್ಯೆ ಫರೀದಾ ಬೇಗಂ ಮೇಯರ್ ಆಗಿ, 33ನೇ ವಾರ್ಡ್ ಸದಸ್ಯೆ ಶಶಿಕಲಾ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ: ಚುನಾವಣೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್ ಫರೀದಾ ಬೇಗಂ, ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ನಗರವನ್ನು ಅಭಿವೃದ್ಧಿಗೊಳಿಸುತ್ತೇನೆ. ನೀರು, ಕಸ ಹಾಗೂ ಸ್ಮಾರ್ಟ್‍ಸಿಟಿ ಸಮಸ್ಯೆಗಳು ನಮ್ಮ ಮುಂದಿದ್ದು, ಶಾಸಕರು ಹಾಗೂ ಸಂಸದರ ಮಾರ್ಗದರ್ಶನ ಹಾಗೂ ಆಯುಕ್ತರ ಸಲಹೆ ಪಡೆದು ಆಡಳಿತ ನಿರ್ವಹಿಸುವುದಾಗಿ ತಿಳಿಸಿದರು.

ಯಾವುದೇ ಕಾರಣಕ್ಕೂ ರಿಮೋಟ್ ಕಂಟ್ರೋಲ್ ಮೇಯರ್ ಆಗಿ ಕೆಲಸ ನಿರ್ವಹಿಸುವುದಿಲ್ಲ. ಅದು ನನ್ನ ವ್ಯಕ್ತಿತ್ವವೂ ಅಲ್ಲ. ಮಾಹಿತಿ ಇಲ್ಲದೇ ಯಾವುದನ್ನು ಮಾಡುವುದಿಲ್ಲ. ಎಲ್ಲವನ್ನು ತಿಳಿದುಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸುತ್ತೇನೆ. ಮೇಯರ್ ಅಧಿಕಾರ ದುರುಪಯೋಗವಾಗಲು ಬಿಡುವುದಿಲ್ಲ ಎಂದು ಹೇಳಿದ ಅವರು, ಮೇಯರ್ ಆಗಲು ಸಹಕಾರ ನೀಡಿದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಪಕ್ಷದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.

ರೆಸಾರ್ಟ್ ರಾಜಕೀಯ: ಪಾಲಿಕೆ ಮೇಯರ್-ಉಪಮೇಯರ್ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಸದಸ್ಯರನ್ನು ನೆಲಮಂಗಲ ಬಳಿಯ ರೆಸಾರ್ಟ್‍ಗೆ ಕರೆದೊಯ್ಯಲಾಗಿತ್ತು. ಮೈತ್ರಿಯಲ್ಲಿ ಭಿನ್ನಾಭಿಪ್ರಾಯವಿಲ್ಲದಿದ್ದರೂ, ಸದಸ್ಯರನ್ನು ಬಿಜೆಪಿ ಸೆಳೆಯಬಹುದು ಎನ್ನುವ ಕಾರಣಕ್ಕಾಗಿ ಅವರನ್ನು ರೆಸಾರ್ಟ್‍ಗೆ ಕರೆದೊಯ್ದು, ಅಲ್ಲಿಂದ ನೇರವಾಗಿ ಪಾಲಿಕೆಗೆ ಕರೆ ತರಲಾಗಿದೆ.

ಜೆಡಿಎಸ್ ಶಾಸಕರಾದ ಎಸ್.ಆರ್.ಶ್ರೀನಿವಾಸ್, ಗೌರಿಶಂಕರ್, ಮಾಜಿ ಶಾಸಕ ರಫೀಕ್ ಅಹ್ಮದ್ ಅವರ ತಂತ್ರಗಾರಿಕೆಯಂತೆ ಚುನಾವಣೆ ನಡೆದಿದ್ದು, ಸದಸ್ಯರನ್ನು ಪ್ರವಾಸದ ಹೆಸರಲ್ಲಿ ನೆಲಮಂಗಲದ ರೆಸಾರ್ಟ್‍ಗೆ ಕರೆದೊಯ್ಯಲಾಗಿತ್ತು.

ಗೌರಿಶಂಕರ್ ಬಿಗಿಪಟ್ಟು: ಪಾಲಿಕೆಯಲ್ಲಿ ಮೈತ್ರಿ ಧರ್ಮ ಪಾಲನೆ ಹಿನ್ನೆಲೆಯಲ್ಲಿ ಜೆಡಿಎಸ್ ಬಿಟ್ಟುಕೊಟ್ಟ ಮೇಯರ್ ಸ್ಥಾನಕ್ಕೆ ಮುಸ್ಲಿಂ ಸದಸ್ಯೆಯನ್ನು ಆಯ್ಕೆ ಮಾಡುವಂತೆ ಗ್ರಾಮಾಂತರ ಶಾಸಕ ಗೌರಿಶಂಕರ್ ಬಿಗಿಪಟ್ಟು ಹಿಡಿದಿದ್ದು, ಕಾಂಗ್ರೆಸ್ ಮುಖಂಡರ ಮೇಲೆಯೂ ಒತ್ತಡವನ್ನು ಹಾಕಿದ್ದರು.

ಈ ಹಿಂದೆ ಜೆಡಿಎಸ್‍ನ ಲಲಿತಾ ರವೀಶ್ ಹಾಗೂ ನಜೀಮಾ ಬಿ ನಡುವೆ ಮೇಯರ್ ಸ್ಥಾನಕ್ಕೆ ಪೈಪೋಟಿ ಇತ್ತು. ಕಾಂಗ್ರೆಸ್ ಮುಖಂಡರು ಮುಸ್ಲಿಂ ಮಹಿಳೆಗೆ ಮೇಯರ್ ಪಟ್ಟ ನೀಡಲು ಒಪ್ಪಿದ ನಂತರ, ಸದಸ್ಯರನ್ನು ರೆಸಾರ್ಟ್‍ಗೆ ಕರೆದೊಯ್ದು, ಮುಸ್ಲಿಂ ಮಹಿಳೆಯನ್ನು ಮೇಯರ್ ಮಾಡುವಲ್ಲಿ ಗೌರಿಶಂಕರ್ ಅವರ ಪಾತ್ರ ದೊಡ್ಡದಿದೆ ಎನ್ನುವ ಮಾತುಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News