ನೂತನ ಡಿಜಿಪಿ ಹುದ್ದೆಗೆ ಎ.ಎಂ.ಪ್ರಸಾದ್- ಪ್ರವೀಣ್ ಸೂದ್ ನಡುವೆ ಪೈಪೋಟಿ

Update: 2020-01-30 14:49 GMT
ಎ.ಎಂ.ಪ್ರಸಾದ್- ಪ್ರವೀಣ್ ಸೂದ್

ಬೆಂಗಳೂರು, ಜ. 30: ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಅವರ ಅಧಿಕಾರಾವಧಿ ನಾಳೆ(ಜ.31) ಮುಕ್ತಾಯವಾಗಲಿದ್ದು, ಅವರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಕ್ಕೆ ಇಬ್ಬರು ಐಪಿಎಸ್ ಅಧಿಕಾರಿಗಳ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ಸಿಐಡಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹಾಗೂ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಎ.ಎಂ.ಪ್ರಸಾದ್ ಮಧ್ಯೆ ಸ್ಪರ್ಧೆ ಇದ್ದು, ರಾಜ್ಯ ಸರಕಾರ ನಾಳೆ(ಜ.31) ಸಂಜೆಯೊಳಗೆ ಯಾರಾದರೂ ಒಬ್ಬರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡುವ ಸಾಧ್ಯತೆಗಳಿವೆ.

ಆಂತರಿಕ ಭದ್ರತಾ ವಿಭಾಗದ ಡಿಜಿಪಿಯಾಗಿರುವ ಎ.ಎಂ.ಪ್ರಸಾದ್ 1985ನ ಐಪಿಎಸ್ ಅಧಿಕಾರಿಯಾಗಿದ್ದು ಅವರು ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ನೇಮಕವಾದರೆ ಅವರ ಅವಧಿ ಕೇವಲ 9 ತಿಂಗಳು ಮಾತ್ರ ಇರಲಿದೆ ಎಂದು ಗೊತ್ತಾಗಿದೆ.

ಅದೇ ರೀತಿ ಸಿಐಡಿ ವಿಭಾಗದ ಮುಖ್ಯಸ್ಥರಾಗಿರುವ ಪ್ರವೀಣ್ ಸೂದ್ 1986ನೆ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಇವರ ಅಧಿಕಾರಾವಧಿ 2024ರ ಎಪ್ರಿಲ್ ಗೆ ಕೊನೆಗೊಳ್ಳಲಿದ್ದು, ಇನ್ನೂ ನಾಲ್ಕು ವರ್ಷಗಳ ಕಾಲ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸೇವಾ ಹಿರಿತನದಲ್ಲಿ ಹಿರಿಯ ಅಧಿಕಾರಿಗಳಾದ ಎ.ಎಂ.ಪ್ರಸಾದ್ ಮತ್ತು ಪ್ರವೀಣ್ ಸೂದ್ ಅವರ ಹೆಸರುಗಳು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಹುದ್ದೆಗೆ ಮುಂಚೂಣಿಯಲ್ಲಿದ್ದು, ಸರಕಾರ ಯಾರ ಹೆಸರನ್ನು ಅಂತಿಮಗೊಳಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News