ಕೆಪಿಸಿಸಿ ಹುದ್ದೆ ಹಾದಿ-ಬೀದಿಯಲ್ಲಿ ತೀರ್ಮಾನ ಮಾಡುವ ವಿಚಾರ ಅಲ್ಲ: ಡಿ.ಕೆ. ಶಿವಕುಮಾರ್

Update: 2020-01-30 15:51 GMT

ಕಲಬುರಗಿ, ಜ. 30: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನವನ್ನು ಹಾದಿ-ಬೀದಿಯಲ್ಲಿ ಮಾತನಾಡಿ ತೀರ್ಮಾನ ಮಾಡುವ ಹುದ್ದೆ ಅಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಗುರುವಾರ ಜಿಲ್ಲೆಯ ಗಾಣಿಗಾಪುರದಲ್ಲಿ ದತ್ತಾತ್ರೇಯ ಸ್ವಾಮಿ ದೇಗುಲದಲ್ಲಿ ದರ್ಶನ ಪಡೆದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೆಪಿಸಿಸಿ ಹುದ್ದೆಗಳ ಬಗ್ಗೆ ಯಾರೂ ಹಗುರವಾಗಿ ಮಾಡಬಾರದು. ಅದು ಹಾದಿ-ಬೀದಿಯಲ್ಲಿ ಮಾತನಾಡಿ ತೀರ್ಮಾನ ಮಾಡುವ ವಿಚಾರ ಅಲ್ಲ ಎಂದರು.

ಯಾರ ಸ್ವತ್ತು ಅಲ್ಲ: ಇದು ನಂಬಿಕೆ ವಿಚಾರ. ನನ್ನ ನಂಬಿಕೆಗೆ ತಕ್ಕಂತೆ ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಇದು ಯಾರ ಸ್ವತ್ತು ಅಲ್ಲ. ಕೆಲವರು ಹಿಂದುತ್ವ ಹಾಗೂ ದೇವಾಲಯಗಳನ್ನು ಸ್ವಂತ ಆಸ್ತಿ ಮಾಡಿಕೊಂಡವರಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಕೆಲ ರಾಜಕೀಯ ಪಕ್ಷಗಳು ಹಾಗೂ ನಾಯಕರು ಹಿಂದುತ್ವ ತನ್ನದು ಎಂದು ಪ್ರತಿಪಾದನೆ ಮಾಡಿಕೊಂಡು ಹೋಗುತ್ತಿದ್ದಾರೆ. ಅದು ಅವರಿಗೆ ಬಿಟ್ಟ ವಿಚಾರ. ಧರ್ಮ ಹಾಗೂ ದೇವಾಲಯಗಳು ಯಾರ ವೈಯಕ್ತಿಕ ಸ್ವತ್ತು ಅಲ್ಲ. ನಾನು ಏನು ಬೇಡಿಕೊಂಡೆ ಎಂದು ಹೇಳಲು ಸಾಧ್ಯವಿಲ್ಲ. ಅದು ಭಕ್ತನಿಗೂ ಭಗವಂತನಿಗೂ ಬಿಟ್ಟ ವಿಚಾರ. ನಿಮಗೂ ಒಳ್ಳೆಯದಾಗಲಿ ಎಂದು ಕೇಳಿಕೊಂಡಿದ್ದೇನೆ ಎಂದರು.

ಋಣ ತೀರಿಸುವೆ: ನಾನು ಸಂಕಷ್ಟದ ಸಮಯದಲ್ಲಿದ್ದಾಗ ಲಕ್ಷಾಂತರ ಜನ ಹರಕೆ ಕಟ್ಟಿಕೊಂಡು, ಪ್ರಾರ್ಥನೆ ಮಾಡಿ, ಹೋರಾಟ ಮಾಡಿ, ತಮ್ಮಗೆ ನಷ್ಟ ಮಾಡಿಕೊಂಡು ನನಗೆ ಒಳ್ಳೆಯದಾಗಬೇಕೆಂದು ಬಯಸಿದ್ದಾರೆ. ಯಾವುದಾದರೂ ಸಂದರ್ಭದಲ್ಲಿ ನಾನು ಅಷ್ಟೋ ಇಷ್ಟೋ ಋಣ ತೀರಿಸಬೇಕಿದೆ. ಹೀಗಾಗಿ ನಾನು ಎಲ್ಲರ ಹರಕೆ ತೀರಿಸಲು ಆಗದಿದ್ದರೂ ನನ್ನ ಶಕ್ತಿಗೆ ತಕ್ಕಂತೆ ಪ್ರಯತ್ನಿಸುತ್ತೇನೆ. ರಾಜಕಾರಣದ ಫಲ ಬೇರೆ, ನನಗೆ ಒಳ್ಳೆಯದಾಗಲಿ ಎಂದು ಬಯಸಿದರಲ್ಲ ಅದು ಮುಖ್ಯ.

ಇನ್ನು ನನಗಾಗಿ ಮಾಡಿದ ಪ್ರತಿಭಟನೆಯಿಂದ 82 ಕೋಟಿ ರೂ.ನಷ್ಟ ಆಗಿದೆ ಎಂದು ಸರಕಾರ ಪಟ್ಟಿ ನೀಡಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಅದು ಹೇಗೆ ನಷ್ಟ ಆಯ್ತು, ಯಾರಿಗೆ ನಷ್ಟ ಆಯ್ತೋ, ಯಾವ ಅಳತೆಗೋಲಿನ ಮೇಲೆ ಲೆಕ್ಕ ಹಾಕಿದ್ದಾರೋ ಗೊತ್ತಿಲ್ಲ. ಪ್ರತಿಭಟನೆಗಳು ನನ್ನೊಬ್ಬನಿಗಾಗಿ ಆಗಿಲ್ಲ. ಬಹಳಷ್ಟು ಜನರಿಗಾಗಿ ಪ್ರತಿಭಟನೆಗಳು ನಡೆದಿವೆ ಎಂದರು.

‘ಬಿಜೆಪಿ ಸರಕಾರದಲ್ಲಿ ಯಾರನ್ನಾದರೂ ಡಿಸಿಎಂ ಮಾಡಿಕೊಳ್ಳಲಿ. ರಮೇಶ್ ಜಾರಕಿಹೊಳಿ ಮಾಡಿಕೊಳ್ಳುತ್ತಾರೋ ಅಥವಾ ಮತ್ತೊಬ್ಬರನ್ನು ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಅವರು ಸಿದ್ದರಾಮಯ್ಯ ನಮ್ಮ ನಾಯಕ ಎಂದು ಹೇಳಿಕೊಂಡಿದ್ದಾರೆ. ಆ ಪಕ್ಷದ ವಿಚಾರ ನನಗೆ ಬೇಡ’

-ಡಿ.ಕೆ.ಶಿವಕುಮಾರ್, ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News