ಮಡಿಕೇರಿ: ಸಿಎಎ, ಎನ್‌ಆರ್‌ಸಿ ವಿರೋಧಿಸಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಅಂತ್ಯ

Update: 2020-01-30 17:31 GMT

ಮಡಿಕೇರಿ, ಜ.30: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧವಾಗಿ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ನಗರದ ಗಾಂಧಿ ಮಂಟಪದ ಮುಂಭಾಗ ಐದು ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹವನ್ನು, ಮಾನವ ಪ್ರೀತಿಯ ಸಂದೇಶದೊಂದಿಗೆ ಮಾನವ ಸರಪಳಿ ನಿರ್ಮಿಸಿ ಕೊನೆಹಾಡಲಾಯಿತು.

ಗಣರಾಜ್ಯೋತ್ಸವದ ದಿನವಾದ ಜ.26 ರಿಂದ ಆರಂಭಗೊಂಡ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡ ವೇದಿಕೆಯ ಸಂಚಾಲಕ ವಿ.ಪಿ. ಶಶಿಧರ್, ಕಾರ್ಮಿಕ ಮುಖಂಡ ಪಿ.ಆರ್. ಭರತ್, ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ಮತ್ತು ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಕೆ.ಟಿ.ಬಶೀರ್ ಅವರಿಗೆ ಪೂರ್ಣ ಸಹಕಾರವನ್ನು ನೀಡಿದ ಬಿಜೆಪಿಯೇತರ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳು ಗಾಂಧಿ ಪುಣ್ಯತಿಥಿಯ ದಿನವಾದ ಗುರುವಾರ ಹೋರಾಟವನ್ನು ಮತ್ತಷ್ಟು ತೀವ್ರ ಗೊಳಿಸುವ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಸಭೆಯಲ್ಲಿ ಆಶಯ ಭಾಷಣ ಮಾಡಿದ ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ, ಬಿಜೆಪಿ ಮತ್ತು ಆರೆಸ್ಸೆಸ್ ಮುಕ್ತ ಭಾರತ ರಚನೆಗೆ ಎಲ್ಲರೂ ಒಗ್ಗೂಡಬೇಕೆಂದು ಕರೆ ನೀಡಿದರು. ಸಂವಿಧಾನದ ಮುನ್ನುಡಿಯಲ್ಲೆ ಭಾರತ ಗಣರಾಜ್ಯ ದೇಶವೆಂದು ನಮೂದಿಸಿದ್ದು, ಯಾವುದೇ ನಿರ್ಧಾರ ಕೈಗೊಳ್ಳುವಾಗ ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯದ ಜನಾಭಿಪ್ರಾಯ ಪಡೆದುಕೊಳ್ಳಬೇಕಾಗುತ್ತದೆ. ಆದರೆ, ಇದನ್ನು ಗಾಳಿಗೆ ತೂರಿ ಸರ್ವಾಧಿಕಾರದ ಮೂಲಕ ತಾವೇ ಕಾನೂನು ಜಾರಿಗೆ ತಂದು ಇದೀಗ ಪಾಶ್ಚಿಮಾತ್ಯ ರಾಷ್ಟ್ರಗಳ ಅಗೌರವಕ್ಕೂ ತುತ್ತಾಗಿದೆ ಎಂದು ಟೀಕಿಸಿದರು.

ವಿದೇಶಗಳಲ್ಲಿ ತಾನು ಜನಪ್ರಿಯವೆಂದು ಹೇಳಿಕೊಳ್ಳುವ ಮೋದಿ ಅವರ ಘನತೆಗೆ ಧಕ್ಕೆ ತಂದಿದ್ದರೆ, ಅದಕ್ಕೆ ಬಿಜೆಪಿಯ ಅಂಗಸಂಸ್ಥೆಯ ನಾಯಕರೇ ಕಾರಣವೆಂದು ವ್ಯಂಗ್ಯವಾಡಿದರು. ರಾಮ್ ಲೀಲಾ ಮೈದಾನದಲ್ಲಿ ಎನ್‌ಆರ್‌ಸಿ ಕಾಯ್ದೆ ಕೇವಲ ಅಸ್ಸಾಂಗೆ ಮಾತ್ರ ಅನ್ವಯವಾಗುತ್ತದೆಂದು ಪ್ರಧಾನಿ ಹೇಳುತ್ತಾರೆ. ಇದೇ ಮಾತನ್ನು ತಮ್ಮ ಸಂಪುಟದೊಂದಿಗೆ ಚರ್ಚೆಸಿ ಜನರಿಗೆ ಬಹಿರಂಗಪಡಿಸಿದರೆ ಯಾವುದೇ ಸಮಸ್ಯೆಗಳು ಇರುವುದಿಲ್ಲವೆಂದರು.

ನಾವೆಲ್ಲರು ಮಾನವರಾಗಿ ಬದುಕಬೇಕು. ಜಾತಿ ಎಂಬುದು ವೈಯಕ್ತಿಕ ವಿಚಾರವಷ್ಟೆ, ಭಾರತಲ್ಲಿ ಇರುವಷ್ಟು ಜಾತಿ ಧರ್ಮ, ದೇವರು, ಸಂಸ್ಕೃತಿ ಎಲ್ಲೂ ಇಲ್ಲ. ಇದೇ ಕಾರಣಕ್ಕೆ ಎಲ್ಲರನ್ನೂ ಒಗ್ಗಟ್ಟಾಗಿ ಕರೆದೊಯ್ಯವ ಶಕ್ತಿ ಭಾರತಕ್ಕಿದೆಯೆಂದು ವಿಶ್ವವೇ ಹೇಳುತ್ತಿದೆ. ಹಿಂದು ಎನ್ನುವುದು ಜಾತಿಯಲ್ಲ. ಬದುಕುವ ಕ್ರಮವೆಂದು ನ್ಯಾಯಾಲಯ ಹೇಳಿದೆ. ಆದರೆ, ಒಗ್ಗಟ್ಟಿನ ರಾಷ್ಟ್ರದಲ್ಲಿ ವಿಭಜನೆಯನ್ನು ಮಾಡಲಾಗುತ್ತಿದೆ. ಹಿಂದೂ ರಾಷ್ಟ್ರವೆನ್ನುವ ಹುಚ್ಚಾಟವನ್ನು ತಕ್ಷಣ ನಿಲ್ಲಿಸಿ ಎಂದು ಎಂ.ಸಿ. ನಾಣಯ್ಯ ಒತ್ತಾಯಿಸಿದರು.

ಅಮೇರಿಕನ್ ಕಾಂಗ್ರೆಸ್ ಹಾಗೂ ಯುರೋಪಿಯನ್ ಯೂನಿಯನ್‍ಗಳಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಮತ್ತು ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆಯೆಂದು ಚರ್ಚೆ ನಡೆಯುತ್ತಿದೆ. 2016ರಲ್ಲಿ ಕಾಶ್ಮೀರದಲ್ಲಿ ಅಧಿಕಾರ ಹಂಚಿಕೊಂಡವರನ್ನೆ ಈಗ ಜೈಲಿನಲ್ಲಿಟ್ಟಿದ್ದಾರೆ. ಈ ರೀತಿಯ ಅವಕಾಶವಾದಿ ರಾಜಕಾರಣ ಹೆಚ್ಚು ದಿನ ಉಳಿಯುವುದಿಲ್ಲ. ಹಿಂದೂ ರಾಷ್ಟ್ರವೆನ್ನುವ ಭ್ರಮೆಯನ್ನು ಬಿಟ್ಟು 2024 ರಲ್ಲಿ 75 ವರ್ಷ ಮೇಲ್ಪಟ್ಟ ಬಿಜೆಪಿ ಮಂದಿಗೆ ಯಾವುದೇ ಅಧಿಕಾರ ಇಲ್ಲವೆನ್ನುವ ನಿಯಮ ವಿಧಿಸಿರುವ ನರೇಂದ್ರ ಮೋದಿಯವರು ಅಧಿಕಾರದಿಂದ ಕೆಳಕ್ಕಿಳಿಯಲಿದೆ ಎಂದರು.

ದೇಶದಲ್ಲಿ ಯಾವುದೇ ಹೋರಾಟಗಳು ನಡೆದರು ಅವರನ್ನು ದೇಶದ್ರೋಹ ಎಂದು ಪ್ರಕರಣ ದಾಖಲಿಸಲಾಗುತ್ತಿದೆ. ಇದೀಗ ನಮ್ಮ ಮೇಲೂ ಪ್ರಕರಣ ದಾಖಲಿಸಬಹುದೆಂದು ನಾಣಯ್ಯ ಲೇವಡಿ ಮಾಡಿದರು. ಮನೆ ಮನೆ ಜಾಗೃತಿ ಅಭಿಯಾನವೆಂದು ನನ್ನ ಮನೆಗೆ ಬಂದ ಬಿಜೆಪಿ ಮಂದಿಗೆ ನಾನೇ ಸಿಎಎ ಬಗ್ಗೆ ಪಾಠ ಮಾಡಿದ್ದೇನೆ ಎಂದು ಹೇಳಿ ಗಮನ ಸೆಳೆದರು.

ಎಸ್‍ಡಿಪಿಐ ಪಕ್ಷದ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಮಾತನಾಡಿ, ಕೇಂದ್ರ ಸರ್ಕಾರದ ಕೆಳಕ್ಕೆ ಬಿದ್ದಿದ್ದರೂ ಮೀಸೆ ಮಣ್ಣಾಗಿಲ್ಲ ಎಂದು ಬೀಗುತ್ತಿದೆ. ಜನ ಒಗ್ಗೂಡಿ ನಡೆಸುತ್ತಿರುವ ಹೋರಾಟದ ಎದುರು ಅದು ಸೋಲೊಪ್ಪಿಕೊಂಡರೆ ದೇಶದಲ್ಲಿ ಬಿಜೆಪಿ ಆಡಳಿತ ಕೊನೆಗಾಣುತ್ತದೆಂದು ಅಭಿಪ್ರಾಯಪಟ್ಟರು.

ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ದಾಖಲಾತಿಗಳೆ ನಕಲಿ ಎಂದು ಲೇವಡಿ ಮಾಡಿದ ಅವರು, ಮುಸ್ಲಿಮರು ತಮ್ಮ ಪತ್ನಿಯರನ್ನು ಮೂರು ಬಾರಿ ತಲಾಕ್ ನೀಡಿ ವಿಚ್ಛೇದನ ನೀಡುತ್ತಾರೆ. ಆದರೆ, ಮೋದಿ ಅವರು ತಮ್ಮ ಪತ್ನಿಗೆ ಏನೂ ಹೇಳದೆ ಬೀದಿಗೆ ಬಿಟ್ಟಿದ್ದಾರೆ ಎಂದು ಇಲ್ಯಾಸ್ ಮುಹಮ್ಮದ್ ತುಂಬೆ ಆರೋಪಿಸಿದರು.

ವಿಶ್ವದ 85 ರಾಷ್ಟ್ರಗಳ 670 ಸಂಸದರು ಸಿಎಎ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ. ಇನ್ನು ಮುಂದೆಯೂ ಸಂವಿಧಾನ ವಿರುದ್ಧವಾದ ಐದು ಕಾಯ್ದೆಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಹವಣಿಸುತ್ತಿದ್ದು, ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಿ ಈ ಪ್ರಯನತ್ನಗಳನ್ನು ವಿಫಲಗೊಳಿಸಬೇಕೆಂದರು. ಒಡೆದು ಆಳುವವರು ಹೆಚ್ಚು ದಿನ ಉಳಿಯಲಾರರು, ಬ್ರಿಟೀಷರು ಕೂಡ ನೂರಾರು ವರ್ಷ ದೇಶವನ್ನು ಆಳಿದರು, ಒಡೆದು ಆಳಲು ಆರಂಭಿಸಿದ ನಂತರ ದೇಶ ಬಿಟ್ಟು ಹೋಗಬೇಕಾಯಿತೆಂದು ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದರು.

ಚಿಂತಕ ಹಾಗೂ ಸಾಹಿತಿಗಳಾದ ಹಿರಿಯ ವಕೀಲ ಕೆ.ಪಿ. ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಿ, ಪಕ್ಕದ ಮೂರು ರಾಷ್ಟ್ರಗಳ ದಾರ್ಮಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಪೌರತ್ವ ನೀಡುವುದೇ ಸಿಎಎ ಕಾಯ್ದೆಯೆಂದು ಕೇಂದ್ರ ಹೇಳಿಕೊಳ್ಳುತ್ತಿದೆ. ಆದರೆ, ನಾನು ಓದಿದ ಪ್ರಕಾರ ಬಿಜೆಪಿಗರು ಹೇಳುತ್ತಿರುವ ಅಂಶವೆ ಕಾಯ್ದೆಯಲ್ಲಿ ಇಲ್ಲವೆಂದು ಸ್ಪಷ್ಟಪಡಿಸಿದರು. ಕಾಶ್ಮೀರದಲ್ಲಿ 370ನೇ ವಿಧಿಯನು ತೆಗೆದುಹಾಕಿದಾಗ ಮತ್ತು ಅಯೋಧ್ಯೆ ವಿವಾದ ಬಗೆಹರಿದಾಗ ಮುಸ್ಲಿಮರು ಗಲಭೆ ಎಬ್ಬಿಸುತ್ತಾರೆಂದು ಕೇಂದ್ರ ಭಾವಿಸಿತ್ತು. ಆದರೆ, ಅದು ನಡೆಯಲಿಲ್ಲ ಎನ್ನುವ ಕಾರಣಕ್ಕೆ ಸಿಎಎ ಮೂಲಕ ಮುಸ್ಲಿಮರನ್ನು ಗುರಿ ಮಾಡುತ್ತಿದ್ದಾರೆಂದು ಆರೋಪಿಸಿದರು. ಒಡೆದು ಆಳುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಅದರ ವಿರುದ್ಧ ಹೋರಾಟ ನಡೆಸುವುದಕ್ಕೆ ಮನೆಮನೆಗೆ ತೆರಳಿ ಜಾಗೃತಿ ಮೂಡಿಸಲು ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕಿದೆ ಎಂದರು.

ಈ ಹೋರಾಟ ಆರಂಭವಷ್ಟೆ ಮುಂದೆ ಎಲ್ಲರೂ ಒಗ್ಗೂಡಿ ಕೇಂದ್ರದ ವಿರುದ್ಧ ಹೋರಾಟ ತೀವ್ರ ಗೊಳ್ಳಲಿದೆಯೆಂದು ತಿಳಿಸಿದ ಬಾಲಸುಬ್ರಹ್ಮಣ್ಯ ಅವರು ಬಹುತೇಕರನ್ನು ಅನಕ್ಷರತೆಯ ಕತ್ತಲಲ್ಲಿಟ್ಟರೆ ಯಾರು ಬೇಕಾದರು ಮೆರೆಯಬಹುದು ಎನ್ನುವ ಸ್ಥಿತಿ ಇಲ್ಲಿದೆ. ಪಕ್ಕದ ದೇಶಗಳ ಆಂತರಿಕ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದು ಸರಿಯಲ್ಲ. ಪಕ್ಕದ ಮನೆಯಲ್ಲಿ ಜಗಳವಾದರೆ, ಗಂಡ ಹೆಂಡತಿಯನ್ನು ಸಮಾಧಾನಿಸಬೇಕೇ ಹೊರತು, ನೀನು ನಮ್ಮ ಮನೆಗೆ ಬಾ ಎಂದು ಹೆಂಡತಿಯನ್ನು ಕರೆಯಬಾರದು ಎಂದು ಮಾರ್ಮಿಕವಾಗಿ ನುಡಿದು, ಸಿಎಎ ಒಂದು ಅಪಾಯಕಾರಿ ಕಾನೂನು ಎಂದು ಪ್ರತಿಪಾದಿಸಿದರು. 

ವೇದಿಕೆಯ ಸಂಚಾಲಕ ವಿ.ಪಿ. ಶಶಿಧರ್ ಮಾತನಾಡಿ ನಮಗೆ ಕರ್ಪ್ಯೂ ಮುಕ್ತ ಭಾರತ ಬೇಕು. ಕೋಮುವಾದದಿಂದ ಭಾರತದ ಶಕ್ತಿ ದುರ್ಬಲವಾಗುತ್ತದೆಂದು ಅಭಿಪ್ರಾಯಪಟ್ಟ ಅವರು, ನಾವು ಯಾರನ್ನೂ ವಿರೋಧಿಸುತ್ತಿಲ್ಲ. ಆದರೆ, ಬಿಜೆಪಿಯ ವಿಚಾರವನ್ನಷ್ಟೆ ವಿರೋಧಿಸುತ್ತಿರುವುದಾಗಿ ತಿಳಿಸಿದರು. ದೇಶದಲ್ಲಿ ಬಡತನ ಸೇರಿದಂತೆ ಅನೇಕ ಸಮಸ್ಯೆಗಳಿಗೆ. ಈ ಸಮಸ್ಯೆಗಳನ್ನು ರಾಜಕೀಯ ಸೂಚಿಯನ್ನಾಗಿ, ಮಾಡಿ ಅಧಿಕಾರಕ್ಕೆ ಬಾರದೆ, ಭಾವನಾತ್ಮಕ ವಿಚಾರಗಳ ಮೂಲಕ  ವಿಭಜನೆ ಮಾಡುವ  ಕಾರ್ಯ ಏತಕ್ಕೆಂದು ಪ್ರಶ್ನಿಸಿದರು.

ಸಂಘಟನೆಯನ್ನು ಗ್ರಾಮ ಮಟ್ಟದಿಂದಲೆ ಬಲಿಷ್ಟಗೊಳಿಸಿ ಹೋರಾಟವನ್ನು ರೂಪಿಸಲಾಗುವುದೆಂದು ತಿಳಿಸಿದ ವಿ.ಪಿ. ಶಶಿಧರ್, ಅಖಂಡ ಭಾರತ ಎನ್ನುವುದು ಮಾನಸಿಕ ಅಸ್ವಸ್ಥರ ಪರಿಕಲ್ಪನೆ ಎಂದು ಟೀಕಿಸಿದರು.

ನೆರವಂಡ ಉಮೇಶ್ ಮಾತನಾಡಿ, ವಿಕೃತ ಮನಸಿನ ದುಷ್ಟ ಶಕ್ತಿಗಳ ವಿರುದ್ಧ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು. ಚುನಾವಣಾ ಪ್ರಚಾರದ ವೇಳೆ ನಾನು ಕಾರ್ಮಿಕ, ನೀವೆಲ್ಲರು ಮಾಲಕರು ಎಂದು ಘೋಷಿಸಿ ಅಧಿಕಾರಕ್ಕೆ ಬಂದ ಮೋದಿ ಅವರು, ಇದೀಗ ಮಾಲಕರ ಪೌರತ್ವವನ್ನೆ ಪ್ರಶ್ನಿಸುತ್ತಿದ್ದಾರೆ. ಕಾರ್ಮಿಕನಿಗೆ ಆ ಅಧಿಕಾರವನ್ನು ಕೊಟ್ಟವರು ಯಾರೆಂದು ಪ್ರಶ್ನಿಸಿದರು. 

ಕಾರ್ಮಿಕ ಮುಖಂಡ ಪಿ.ಆರ್. ಭರತ್ ಮಾತನಾಡಿ, ಕೇಂದ್ರ ಸರ್ಕಾರದ ಸಂವಿಧಾನ ವಿರೋದಿ ಕಾಯ್ದೆಗಳಿಂದ ಮುಸ್ಲಿಮರಲ್ಲಿ ಮಾತ್ರವಲ್ಲ ಆದಿವಾಸಿಗಳು, ದಲಿತರು, ಹಿಂದುಳಿದ ವರ್ಗದವರು, ಎಲ್ಲಾ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಲಿದೆಯೆಂದು ಅಭಿಪ್ರಾಯಪಟ್ಟರು. ಸಂಘ ಪರಿವಾರವೇ ಹೆಚ್ಚಿರುವ ಕೊಡಗು ಜಿಲ್ಲೆಯಲ್ಲಿ ಕೋಮು ವಾದಿಗಳನ್ನು ಹಿಮ್ಮೆಟ್ಟಿಸುವ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕೆಂದರು. 

ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಕೆ.ಟಿ. ಬಶೀರ್ ಮಾತನಾಡಿ, ಸಿಎಎ ಎಂಬ ವಿಕೃತ ರೂಪದ ಕಾಯ್ದೆಯ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು ಮತ್ತು ಅಮರಣಾಂತ ಉಪವಾಸಕ್ಕೆ ಸಿದ್ಧರಾಗಬೇಕೆಂದು ಕರೆ ನೀಡಿದರು. ಶಾಸಕರು ಹಾಗೂ ಸಂಸದರು ಮನೆ ಮನೆಗೆ ತೆರಳಿ ಸಿಎಎಯಿಂದ ಯಾವುದೇ ತೊಂದರೆ ಇಲ್ಲವೆಂದು ಮನವೊಲಿಸುವ ಹೀನಾಯ ಪರಿಸ್ಥಿತಿಗೆ ಬಂದು ತಲುಪಿದ್ದಾರೆಂದು ಟೀಕಿಸಿದರು.

ವೇದಿಕೆಯ ಹಿರಿಯ ಸಲಹೆಗಾರ ಡಾ.ಇ.ರ. ದುರ್ಗಾಪ್ರಸಾದ್, ಪ್ರಗತಿಪರ ಚಿಂತಕ ರಾಯ್ ಡೇವಿಡ್, ಜಿಪಂ ಮಾಜಿ ಅಧ್ಯಕ್ಷೆ ಹೆಚ್.ಬಿ. ಜಯಮ್ಮ ಇನ್ನಿತರರು ಮಾತನಾಡಿದರು.

ಈ ಸಂದರ್ಭ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಕಾಂಗ್ರೆಸ್ ಪ್ರಮುಖರಾದ ಮಿಟ್ಟು ಚಂಗಪ್ಪ, ಕೆ.ಪಿ. ಚಂದ್ರಕಲಾ , ತೆನ್ನಿರ ಮೈನ ಸೇರಿದಂತೆ ಹಲ ಗಣ್ಯರು ಪಾಲ್ಗೊಂಡಿದ್ದರು. ಪ್ರಗತಿಪರ ಜನಾಂದೋಲನ ವೇದಿಕೆಯ ಹೋರಾಟದಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಪಿಐ, ಸಿಪಿಐಎಂಎಲ್, ಎಸ್‍ಡಿಪಿಐ, ದಲಿತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಎಸ್‍ಕೆಎಸ್‍ಎಸ್‍ಎಫ್, ಎಸ್‍ಎಸ್‍ಎಫ್, ಕೊಡಗು ಜಿಲ್ಲಾ ಜಮಾಯತ್‍ಗಳ ಒಕ್ಕೂಟ, ಮುಸ್ಲಿಂ ಒಕ್ಕೂಟ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಪಾಲ್ಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News