ಅಮಿತ್ ಶಾ ರಾಜೀನಾಮೆ, ಅನುರಾಗ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಪ್ ಆಗ್ರಹ

Update: 2020-01-30 17:49 GMT

ಹೊಸದಿಲ್ಲಿ, ಜ. 30: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಸಂದರ್ಭ ವ್ಯಕ್ತಿಯೋರ್ವ ‘ಜೈ ಶ್ರೀರಾಮ್’, ‘ಇದೊ ತೆಗೆದುಕೊಳ್ಳಿ ಆಜಾದಿ’ ಎಂದು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗೆ ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡುವಂತೆ ಹಾಗೂ ಹಣಕಾಸು ಖಾತೆಯ ಸಹಾಯಕ ಸಚಿವ ಅನುರಾಗ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಪ್ ಗುರುವಾರ ಆಗ್ರಹಿಸಿದೆ.

ಫೆಬ್ರವರಿ 8ರಂದು ನಡೆಯಲಿರುವ ದಿಲ್ಲಿ ವಿಧಾನ ಸಭೆ ಚುನಾವಣೆಯಲ್ಲಿ ಸೋಲಾಗಲಿದೆ ಎಂದು ಬಿಜೆಪಿಗೆ ತಿಳಿದಿದೆ. ಆದುದರಿಂದ ದಿಲ್ಲಿ ಚುನಾವಣೆಯನ್ನು ಮುಂದೂಡಲು ಬಿಜೆಪಿಯ ಪಿತೂರಿ ಈ ಜಾಮಿಯಾ ಗುಂಡಿನ ದಾಳಿ. ಮಹಾತ್ಮಾ ಗಾಂಧಿ ಅವರ ಹುತಾತ್ಮ ದಿನವಾದ ಗುರುವಾರ ಬಿಜೆಪಿಯ ಅಸಹ್ಯಕರ ಕೃತ್ಯ ಇದಾಗಿದೆ ಎಂದು ಆಪ್ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ. ಯಾವುದೇ ಭೀತಿ ಇಲ್ಲದ ವ್ಯಕ್ತಿ ತನ್ನ ಕೃತ್ಯವನ್ನು ಮೊಬೈಲ್ ಫೋನ್ ಮೂಲಕ ಫೇಸ್‌ಬುಕ್ ಲೈವ್ ಮಾಡಿದ್ದಾನೆ.

ಆ ವ್ಯಕ್ತಿಗೆ ಪೊಲೀಸರು ರಕ್ಷಣೆ ನೀಡಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅಮಿತ್ ಶಾ ರಾಜೀನಾಮೆ ನೀಡುವಂತೆ ಹಾಗೂ ಅನುರಾಗ್ ಠಾಕೂರ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಾವು ಆಗ್ರಹಿಸುತ್ತೇವೆ. ಅಲ್ಲದೆ, ಆ ವ್ಯಕ್ತಿ ಹೇಗೆ ಪಿಸ್ತೂಲು ಜಳಪಿಸಲು ಸಾಧ್ಯ ಎಂಬ ಬಗ್ಗೆ ಪೊಲೀಸರು ವಿವರಣೆ ನೀಡಬೇಕು ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News