ಇರಾನ್‌ನ ಕ್ಷಿಪಣಿ ದಾಳಿಯಲ್ಲಿ 64 ಅಮೆರಿಕ ಯೋಧರಿಗೆ ಗಾಯ: ಪೆಂಟಗಾನ್

Update: 2020-01-31 17:35 GMT

ವಾಶಿಂಗ್ಟನ್, ಜ.31: ಇರಾಕ್‌ನಲ್ಲಿ ಜನವರಿ 8ರಂದು ಇರಾನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡ ಅಮೆರಿಕ ಯೋಧರ ಸಂಖ್ಯೆ 64ಕ್ಕೆ ಏರಿಕೆಯಾಗಿದೆಯೆಂದು ಅಮೆರಿಕದ ರಕ್ಷಣಾ ಇಲಾಖೆಯ ಕೇಂದ್ರ ಕಚೇರಿಯಾದ ಪೆಂಟಗಾನ್ ಶುಕ್ರವಾರ ಬಿಡುಗಡೆಗೊಳಿಸಿದ ನೂತನ ಅಂಕಿಅಂಶಗಳು ಬಹಿರಂಗಪಡಿಸಿವೆ.

ಇರಾಕ್‌ನ ಪಶ್ಚಿಮದಲ್ಲಿರುವ ಐನ್-ಅಲ್-ಅಸಾದ್‌ನಲ್ಲಿರುವ ಅಮೆರಿಕ ಸೈನಿಕರ ನೆಲೆಯ ಮೇಲೆ ಜನವರಿ 8ರಂದು ಇರಾನ್‌ನ ಕ್ಷಿಪಣಿಗಳ ದಾಳಿ ನಡೆಸಿದ ಸಂದರ್ಭದಲ್ಲಿ ಯಾವುದೇ ಅಮೆರಿಕ ಯೋಧ ಗಾಯಗೊಂಡಿಲ್ಲವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ಹೇಳಿಕೊಂಡಿದ್ದರು. ಆದರೆ ಟ್ರಂಪ್ ಅವರು ಕ್ಷಿಪಣಿ ದಾಳಿಯಲ್ಲಿ ಅಮೆರಿಕ ಯೋಧರು ಗಾಯಗೊಂಡಿರುವ ಸಂಗತಿಯನ್ನು ಮರೆಮಾಚುತ್ತಿದ್ದಾರೆಂದು ಪ್ರತಿಪಕ್ಷ ಡೆಮಾಕ್ರಾಟಿಕ್ ಪಕ್ಷದ ನಾಯಕರು ಆರೋಪಿಸಿದ್ದರು.

ಕ್ಷಿಪಣಿ ದಾಳಿಯಲ್ಲಿ ಕೆಲವು ಅಮೆರಿಕ ಯೋಧರಿಗೆ ಮೆದುಳಿನಲ್ಲಿ ಲಘುಪ್ರಮಾಣದ ಗಾಯಗಳಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ಪತ್ತೆಯಾಗಿರುವುದಾಗಿ ಪೆೆಂಟಗಾನ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಥಾಮಸ್ ಕ್ಯಾಂಪ್‌ಬೆಲ್ ತಿಳಿಸಿದ್ದಾರೆ.

ಬುಧವಾರ ಪೆಂಟಗಾನ್ ಹೇಳಿಕೆಯೊಂದನ್ನು ನೀಡಿ, ಇರಾಕ್‌ನ ಐನ್ ಅಲ್-ಅಸಾದ್ ಸೇನಾ ನೆಲೆಯಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಒಟ್ಟು 50 ಅಮೆರಿಕ ಯೋಧರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ ಆದಾಗ್ಯೂ ಶುಕ್ರವಾರ ಈ ಬಗ್ಗೆ ತನ್ನ ಹೇಳಿಕೆಯನ್ನು ಪರಿಷ್ಕರಿಸಿರುವ ಪೆಂಟಗಾನ್ ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆಯನ್ನು 64ಕ್ಕೇರಿಸಿದೆ.

ಮೇಲಾಧಿಕಾರಿಗಳಿಗೆ ಮುನ್ನೆಚ್ಚರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಕ್ಷಿಪಣಿ ದಾಳಿ ನಡೆದ ಸಂದರ್ಭ ಐನ್ ಅಲ್-ಅಸಾದ್ ನೆಲೆಯಲ್ಲಿದ್ದ 1500 ಮಂದಿ ಅಮೆರಿಕ ಯೋಧರ ಪೈಕಿ ಹೆಚ್ಚಿನವರು ಬಂಕರ್‌ನಲ್ಲಿದ್ದರೆಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News