ಆಪತ್ಕಾಲಕ್ಕೆ ಆಹಾರ ಸಂಗ್ರಹ

Update: 2020-01-31 18:31 GMT

ಅಸಮರ್ಥ ಸರಬರಾಜು ವ್ಯವಸ್ಥೆಯ ಬಳಕೆಯೇ ಇಷ್ಟೊಂದು ಅನುಕೂಲಕಾರಿಯಾಗಿರುವಾಗ ಕೃಷಿಯು ಎದುರಿಸುತ್ತಿರುವ ಸರಬರಾಜು ವಲಯದ ಆತಂಕಗಳನ್ನು ನಿವಾರಿಸಲು ಸರಕಾರ ಏಕೆ ಮುಂದಾದೀತು? ಅಲ್ಲದೆ ಕೃಷಿ ಬೆಳೆ ಪದ್ಧತಿಯನ್ನು ಹೆಚ್ಚು ಬೆಲೆ ಸರಕಿನ ಕೃಷಿಯ ಕಡೆ ಕೊಂಡೊಯ್ಯುವ ಮತ್ತು ರೈತಾಪಿಯ ಆದಾಯವನ್ನು ದ್ವಿಗುಣಗೊಳಿಸುವ ಆಡಂಬರದ ಮಾತುಗಳು ಮತದಾರರನ್ನು ಸೆಳೆಯಲು ಯಶಸ್ವಿಯಾಗಿರುವಾಗ ನೀರಿನಾಶ್ರಯ ಇರುವ ಮತ್ತು ದ್ವಿದಳ ಧಾನ್ಯ ಕೃಷಿ ತೀವ್ರವಾಗಿರುವ ರಾಜ್ಯಗಳಲ್ಲಿ ಭಿನ್ನ ಬೆಳೆಗಳನ್ನು ಬೆಳೆಯಬೇಕೆಂಬ 2015ರ ಶಾಂತಕುಮಾರ್ ಸಮಿತಿಯ ಶಿಫಾರಸುಗಳು ಮತ್ತದರ ಅನುಷ್ಠಾನಗಳು ಹೇಗೆ ಆಕರ್ಷಕವಾಗಿ ಕಂಡೀತು?


2019ರ ಡಿಸೆಂಬರ್‌ನಲ್ಲಿ ಆಹಾರ ಬಳಕೆ ಸರಕುಗಳ ಬೆಲೆಯುಬ್ಬರವು ಶೇ.14.12ಕ್ಕೇರಿತು. ಇದು ಕಳೆದ ಆರು ವರ್ಷಗಳಲ್ಲೇ ಸಂಭವಿಸಿರುವ ಅತ್ಯಧಿಕ ಹಣದುಬ್ಬರವಾಗಿದೆ. ಹಾಗೂ ಇದರಿಂದಾಗಿ ದೇಶದ ಚಿಲ್ಲರೆ ಹಣದುಬ್ಬರವೂ ಹೆಚ್ಚಾಗಿದೆ. ಅದೇನೇ ಇದ್ದರೂ ಕೀಲಕ ಹಣದುಬ್ಬರದ ದರವು ರಿಸರ್ವ್ ಬ್ಯಾಂಕ್ ವಿಧಿಸಿರುವ ಸರಾಸರಿ ಶೇ.4(+/-2)ರಗಡಿಯನ್ನು ಇನ್ನೂ ದಾಟಿಲ್ಲವಾದ್ದರಿಂದ ಬರುವ ತಿಂಗಳಲ್ಲಿ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು ಮತ್ತೊಮ್ಮೆ ಸಾಲ ನೀಡಿಕೆ ದರದಲ್ಲಿ ಕಡಿತವನ್ನು ಘೋಷಿಸುತ್ತದೆಯೇ ಎಂಬ ಬಗ್ಗೆ ಅಪಾರವಾದ ಊಹಾಪೋಹಗಳೆದ್ದಿವೆ. ಇದು ರಿಸರ್ವ ಬ್ಯಾಂಕಿನ ನೀತಿ ನಿರೂಪಕರಿಗೆ ಅತ್ಯಂತ ತಲೆನೋವಿನ ಸಂಗತಿಯೂ ಆಗಿದೆ. ಏಕೆಂದರೆ ಸರಾಸರಿಯ ಮಿತಿಗಿಂತ ಹಣದುಬ್ಬರವನ್ನು ಹೆಚ್ಚಿಸುವ ನೀತಿಯು ಅಭಿವೃದ್ಧಿಯನ್ನು ಕುಸಿಯುವಂತೆ ಮಾಡುವುದಲ್ಲದೆ ಅದನ್ನು ಸರಕಾರದ ಶಿಥಿಲ ವಿತ್ತೀಯ ಪರಿಸ್ಥಿತಿಯನ್ನು ಆಧರಿಸಿಯೇ ಮಾಡಬೇಕಿದೆ. ಅಷ್ಟು ಮಾತ್ರವಲ್ಲದೆ, ವಿತ್ತೀಯ ಕೊರತೆಯಂಥ ವಿಷಯಗಳನ್ನೂ ಒಳಗೊಂಡಂತೆ ಸರಕಾರದ ಹಲವಾರು ಪ್ರಮುಖ ಆರ್ಥಿಕ ಅಂದಾಜುಗಳು ತಾಳಮೇಳವಿಲ್ಲದಂತೆ ಅಂದಾಜಿಸಲ್ಪಡುತ್ತಿವೆ.

ಭಾರತದ ಮಹಾಲೇಖಪಾಲರು ಕಳೆದೆರಡು ವರ್ಷಗಳ ಕೇಂದ್ರ ಸರಕಾರದ ವಿತ್ತೀಯ ಕೊರತೆಯ ಅಂದಾಜುಗಳಲ್ಲಿರುವ ವ್ಯತ್ಯಾಸಗಳ ಬಗ್ಗೆ ತೀವ್ರವಾದ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಅವರ ಪ್ರಕಾರ ಕಳೆದೆರಡು ವರ್ಷಗಳ ವಿತ್ತೀಯ ಕೊರತೆಯನ್ನು ಶೇ.1.5 ಮತ್ತು ಶೇ.2 ಎಂದು ತಪ್ಪಾಗಿ ತೋರಿಸಲಾಗಿದೆ. ಏಕೆಂದರೆ ಅದರಲ್ಲಿ ಬಜೆಟ್‌ನ ಹೊರಗಡೆ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗಳಂತಹ ಸಾರ್ವಜನಿಕ ಖಾತೆಗಳಿಂದ ಮಾಡಿದ ಸಾಲಗಳನ್ನು ತೋರಿಸಿಯೇ ಇಲ್ಲ. ಮಾಧ್ಯಮಗಳ ವರದಿಗಳ ಪ್ರಕಾರ ಹಾಲಿ ಸರಕಾರವು ಈ ಬಗೆಯಲ್ಲಿ ಮಾಡಿರುವ ಬಜೆಟೇತರ ವೆಚ್ಚ 2019-20ರಲ್ಲಿ ರೂ. 1.5 ಲಕ್ಷ ಕೋಟಿಯಷ್ಟಾಗಿತ್ತು ಮತ್ತು ಆತಂಕಕಾರಿ ಸಂಗತಿಯೆಂದರೆ ಹೆಚ್ಚುವರಿಯಾಗಿ ಮಾಡಿರುವ ಬಜೆಟೇತರ ವೆಚ್ಚಗಳಲ್ಲಿ ಮುಕ್ಕಾಲು ಭಾಗ ಭಾರತ ಆಹಾರ ನಿಗಮಕ್ಕೆ ನೀಡಬೇಕಿರುವ ಸಬ್ಸಿಡಿ ಬಾಕಿಯದ್ದಾಗಿದೆ. ಕಳೆದ ಆರು ವರ್ಷಗಳಲ್ಲಿ ಭಾರತದ ಆಹಾರ ಸಬ್ಸಿಡಿಯ ಮೊತ್ತ ಹೆಚ್ಚೂ ಕಡಿಮೆ ದ್ವಿಗುಣಗೊಂಡಿದ್ದರೂ ಕೇಂದ್ರ ಸರಕಾರದ ಬಜೆಟ್‌ನ ದಸ್ತಾವೇಜುಗಳಲ್ಲಿ ಅದಕ್ಕಾಗಿ ತೋರಿಸಿರುವ ಮೊತ್ತ ಅತ್ಯಲ್ಪ. ಉದಾಹರಣೆಗೆ 2019-20ರಲ್ಲಿ ಕೇಂದ್ರ ಸರಕಾರವು ಆಹಾರದ ಸಬ್ಸಿಡಿಗಾಗಿ 1.84 ಲಕ್ಷ ಕೋಟಿ ರೂ.ಗಳನ್ನು ಎತ್ತಿಟ್ಟಿತ್ತು. ಆದರೆ ಈಗಾಗಲೇ ಕೇಂದ್ರ ಸರಕಾರವು ಆಹಾರ ನಿಗಮಕ್ಕೆ 1.86 ಲಕ್ಷ ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಈ ಏರುತ್ತಲೇ ಇರುವ ಬಾಕಿಗಾಗಿ ಹಾಲಿ ಸರಕಾರವು ಸತತವಾಗಿ ಆಹಾರ ನಿಗಮದ ಆಯ-ವ್ಯಯದ ಲೆಕ್ಕವನ್ನು ಏರುಪೇರು ಮಾಡಿ ತೋರಿಸುತ್ತಾ ಬಂದಿದೆ.

ಲೆಕ್ಕಗಳಲ್ಲಿ ಹೊಂದಾಣಿಕೆ ಮಾಡುತ್ತಾ ಆಹಾರ ಸಬ್ಸಿಡಿ ಮೊತ್ತವನ್ನು ಸಣ್ಣ ಉಳಿತಾಯ ನಿಧಿಯಿಂದ ಪಡೆದುಕೊಂಡ ಸಾಲವಾಗಿ ತೋರಿಸುತ್ತಾ ಆಹಾರ ನಿಗಮವನ್ನು ಸಾಲದ ಸುಳಿಗೆ ಸಿಕ್ಕಿಸಿದೆ. ಪರಿಣಾಮವಾಗಿ ಕಳೆದ ಮೂರು ವರ್ಷಗಳಿಂದ ಆಹಾರ ನಿಗಮವು ಬಜೆಟ್‌ನಿಂದಾಚೆಗೆ ಸಣ್ಣ ಉಳಿತಾಯ ನಿಧಿಯಿಂದ ಪಡೆದುಕೊಳ್ಳುತ್ತಿರುವ ಸಾಲ ಏರುತ್ತಲೇ ಹೋಗುತ್ತಿದೆ. ಇದು ಆಹಾರ ನಿಗಮವು 2018-19ರ ಸಾಲಿನಲ್ಲಿ ಹೊರಬೇಕಾಗಿ ಬಂದ ಹೆಚ್ಚುವರಿ ಸಾಲದ ಶೇ.70 ಭಾಗವಾಗುತ್ತದೆ. ಸಬ್ಸಿಡಿ ಖಾತೆಯಲ್ಲಿ ಹೇರಾಫೇರಿ ನಡೆಸುವುದು ಸರಕಾರಗಳಿಗೆ ಹೊಸದೇನಲ್ಲ ಎಂದು ಕೆಲವರು ವಾದಿಸಬಹುದಾದರೂ ಹಿಂದೆಂದೂ ಈ ಪ್ರಮಾಣದಲ್ಲೂ ನಡೆದಿರಲಿಲ್ಲ ಎಂಬುದನ್ನಾಗಲೀ, ವಿತ್ತೀಯ ಕೊರತೆಯಂತಹ ಆರ್ಥಿಕತೆಯ ಮಹತ್ವದ ಸೂಚಕಗಳಲ್ಲಿ ಕೃತಕ ಇಳಿಕೆಯನ್ನು ತೋರಿಸುವ ಸಲುವಾಗಿ ಇಂಥವು ಎಂದೂ ನಡೆದಿರಲಿಲ್ಲ ಎಂಬುದನ್ನು ಮಾತ್ರ ಯಾರೂ ಅಲ್ಲಗೆಳೆಯಲು ಸಾಧ್ಯವಿಲ್ಲ. ಇಂತಹ ವಿರೂಪಗೊಂಡ ಅಂಕಿಅಂಶಗಳನ್ನು ಆಧರಿಸಿ ಯಾವುದೇ ಬಗೆಯ ಹಣದುಬ್ಬರ ಗುರಿಗಳನ್ನು ಹಾಕಿಕೊಳ್ಳುವ ನೀತಿ ನಿರೂಪಣೆಗಳು ಪ್ರಶ್ನಾರ್ಹವಾಗುವುದಲ್ಲದೆ ಹಣದುಬ್ಬರದ ಅದರಲ್ಲೂ ಆಹಾರ ಸರಕಿನ ಹಣದುಬ್ಬರ ನಿರ್ವಹಣೆಯ ವಿಷಯದಲ್ಲಿ ಸರಕಾರದ ರಾಜಕೀಯ ಉದ್ದೇಶವೇನೆಂಬುದೇ ಪ್ರಶ್ನಾರ್ಹವಾಗಿದೆ.

ಎಂದಿನಂತೆ ಋತುಮಾನಕ್ಕೆ ವ್ಯತಿರಿಕ್ತವಾಗಿ ಸುರಿದ ಭಾರೀ ಮಳೆಯಿಂದಾಗಿ ಬೆಳೆನಾಶ ಆಗಿರುವುದೇ ಈ ವ್ಯತ್ಯಯಗಳಿಗೆ ಕಾರಣವೆಂದೂ ಹೊಸ ಬೆಳೆಯು ಮಾರುಕಟ್ಟೆಯನ್ನು ಪ್ರವೇಶಿಸಿದ ಕೂಡಲೇ ಹಣದುಬ್ಬರವು ನಿಯಂತ್ರಣಕ್ಕೆ ಬರುತ್ತದೆಂದು ವಾದಿಸುತ್ತಾ ಕೃಷಿ ಸರಕು ಸರಬರಾಜು ವಲಯದ ಸಮಸ್ಯೆಗಳನ್ನು ಪಕ್ಕಕ್ಕೆ ಸರಿಸಲಾಗುತ್ತಿದೆ. ಈ ವಾದವು ಕಳೆದ ವರ್ಷದ ರಾಬಿ ಋತುವಿನಲ್ಲಿ ಅತ್ಯಂತ ಕಡಿಮೆ ಬೆಳೆ ಬಂದಿದ್ದರಿಂದ ಕಳೆದ ನವೆಂಬರ್-ಡಿಸೆಂಬರ್‌ಗಳಲ್ಲಿ ಶೇ.200ರಷ್ಟು ಬೆಲೆ ಏರಿಕೆಯಾದ ಈರುಳ್ಳಿಯ ವಿಷಯಕ್ಕೆ ಅನ್ವಯವಾಗಬಹುದು. ಆದರೆ ಅದು ಗೋಧಿ ಮತ್ತು ದ್ವಿದಳ ಧಾನ್ಯಗಳ ಬೆಲೆಯುಬ್ಬರವನ್ನು ವಿವರಿಸುವುದಿಲ್ಲ.

ಇಂದು ಆಹಾರ ನಿಗಮದ ಗೋದಾಮುಗಳಲ್ಲಿ ಆಪತ್ಕಾಲಿನ ಸಂಗ್ರಹಕ್ಕೆ ವಿಧಿಸಲಾದ ಮಿತಿಗಿಂತಲೂ ಹೆಚ್ಚಿನ ಧಾನ್ಯಗಳನ್ನು ಸರಕಾರ ಸಂಗ್ರಹಿಸಿಟ್ಟಿದೆ. ಉದಾಹರಣೆಗೆ ಗೋಧಿಯ ಆಪತ್ಕಾಲಿನ ಸಂಗ್ರಹ 27.5 ದಶಲಕ್ಷ ಟನ್ನುಗಳೆಂದು ನಿಗದಿಯಾಗಿದ್ದರೂ 2019ರ ಜುಲೈ ವೇಳೆಗೆ 45.8 ದಶಲಕ್ಷ ಟನ್ನುಗಳಷ್ಟು ಗೋಧಿ ಸಂಗ್ರಹವಾಗಿದೆ. ಹಾಗೆಯೇ ಅಗತ್ಯವಿದ್ದ ಅಕ್ಕಿ ಸಂಗ್ರಹ 13.5 ದಶಲಕ್ಷ ಟನ್ನುಗಳಷ್ಟೇ ಆಗಿದ್ದರೂ ಅದರ ಎರಡು ಪಟ್ಟು ಸಂಗ್ರಹವಾಗಿದೆ. ಹೀಗಾಗಿ ಇಂದು ಭಾರತವು ಅಗತ್ಯಕ್ಕಿಂತ ಅಧಿಕ ಧಾನ್ಯ ಸಂಗ್ರಹವಾಗಿರುವ ದೇಶವಾಗಿದೆ. ಹಾಗಿದ್ದರೂ ಆಹಾರ ಧಾನ್ಯಗಳಲ್ಲಿ ಬೆಲೆಯುಬ್ಬರ ಏಕಾಗುತ್ತಿದೆ? ಇದು ಸರಕಾರದ ಅತಾರ್ಕಿಕ ಧಾನ್ಯ ಸಂಗ್ರಹ ನೀತಿಯಿಂದ ಪರಿಣಮಿಸಿದೆಯೇ? ಈ ಸಂದರ್ಭದಲ್ಲ್ಲಿ ಹಲವು ಮೂಲಭೂತ ಪ್ರಶ್ನೆಗಳು ಮೇಲೇಳುತ್ತವೆ. ಮೊದಲನೆಯದಾಗಿ ಆಹಾರ ನಿಗಮವು ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸುವುದಕ್ಕೆ ಮತ್ತು ಸಂಗ್ರಹಿಸಿಡುವುದಕ್ಕೆ ತಗಲುವ ಆರ್ಥಿಕ ವೆಚ್ಚವು ಅದನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಯಲ್ಲಿ ಹಂಚುವ ದರದ 12 ಪಟ್ಟಿಗಿಂತ ಹೆಚ್ಚಿದೆ.

ಉದಾಹರಣೆಗೆ ಗೋಧಿಯ ಸಂಗ್ರಹ ವೆಚ್ಚ ಪ್ರತಿ ಕೆ.ಜಿ.ಗೆ 35 ರೂ. ಗಳಾದರೂ ಅದನ್ನು ಪಡಿತರ ವ್ಯವಸ್ಥೆಯಲ್ಲಿ ಕೇವಲ ಕೆ.ಜಿ.ಗೆ 3 ರೂ.ಗಳಂತೆ ಹಂಚಲಾಗುತ್ತಿದೆ. ಹಾಗೆಯೇ ಅಕ್ಕಿಯ ಸಂಗ್ರಹ ವೆಚ್ಚ ಕೆ.ಜಿ.ಗೆ 25 ರೂ.ಗಳಾದರೂ ಅದರ ಪಡಿತರ ವಿತರಣಾ ಬೆಲೆ ಮಾತ್ರ ಕೆಜಿಗೆ ಕೇವಲ 2 ರೂ.ಗಳಾಗಿವೆ. ಹೀಗಾಗಿ ಹೆಚ್ಚೆಚ್ಚು ಸಂಗ್ರಹವನ್ನು ಪೇರಿಸಿಟ್ಟುಕೊಳ್ಳುವುದೆಂದರೆ ಹೆಚ್ಚೆಚ್ಚು ಸಬ್ಸಿಡಿಯನ್ನು ತೆರಬೇಕಾಗುತ್ತದೆಂದೇ ಅರ್ಥವಾಗಿದೆ. ಎರಡನೆಯದಾಗಿ, ಆಹಾರ ಸಂಗ್ರಹಗಳ ತಾತ್ಕಾಲಿಕ ಬಿಡುಗಡೆಯಿಂದ ಎದುರಾಗಿರುವ ಪರಿಸ್ಥಿತಿಗೆ ಯಾವ ಪರಿಹಾರವೂ ಸಿಗುವುದಿಲ್ಲ. ಅದರಿಂದ ಸಬ್ಸಿಡಿ ಮೊತ್ತ ಗಗನಕ್ಕೇರುತ್ತದೆ. ಆದರೆ ಅದು ಆಳುವ ಸರಕಾರಕ್ಕೆ ಒಂದಷ್ಟು ರಾಜಕೀಯ ಲಾಭವನ್ನಂತೂ ತಂದುಕೊಡುತ್ತದೆ. ಮೂರನೆಯದಾಗಿ, ಈ ಹಿನ್ನೆಲೆಯಲ್ಲಿ ಬಜೆಟೇತರ ಸಾಲಗಳು ಹಲವಾರು ರಾಜಕೀಯ ಉದ್ದೇಶಗಳನ್ನೂ ಈಡೇರಿಸಬಹುದಾಗಿದೆ. ಇದು ಭಾರತದ ಆಯವ್ಯಯದಲ್ಲಿ ಸಬ್ಸಿಡಿ ಮೊತ್ತವು ಶೇ.1ಕ್ಕಿಂತ ಕಡಿಮೆ ಇದೆ ಎಂದು ಬಿಂಬಿಸುವ ಸಾಮರ್ಥ್ಯವನ್ನು ತಂದುಕೊಡುತ್ತದೆ. ಆ ಮೂಲಕ ಎರಡು ಗಂಭೀರ ಸಂಗತಿಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲಾಗುತ್ತಿದೆ.

ಮೊದಲನೆಯದು ಆಹಾರ ನಿಗಮದ ಹಣಕಾಸು ಪರಿಸ್ಥಿತಿ ಹದಗೆಡುತ್ತಿರುವುದು ಹಾಗೂ ಎರಡನೆಯದು ವಿತ್ತೀಯ ಕೊರತೆಯ ಕೆಳ ಅಂದಾಜು. ಒಂದು ಅಸಮರ್ಥ ಸರಬರಾಜು ವ್ಯವಸ್ಥೆಯ ಬಳಕೆಯೇ ಇಷ್ಟೊಂದು ಅನುಕೂಲಕಾರಿಯಾಗಿರುವಾಗ ಕೃಷಿಯು ಎದುರಿಸುತ್ತಿರುವ ಸರಬರಾಜು ವಲಯದ ಆತಂಕಗಳನ್ನು ನಿವಾರಿಸಲು ಸರಕಾರ ಏಕೆ ಮುಂದಾದೀತು? ಅಲ್ಲದೆ ಕೃಷಿ ಬೆಳೆ ಪದ್ಧತಿಯನ್ನು ಹೆಚ್ಚು ಬೆಲೆ ಸರಕಿನ ಕೃಷಿಯ ಕಡೆ ಕೊಂಡೊಯ್ಯುವ ಮತ್ತು ರೈತಾಪಿಯ ಆದಾಯವನ್ನು ದ್ವಿಗುಣಗೊಳಿಸುವ ಆಡಂಬರದ ಮಾತುಗಳು ಮತದಾರರನ್ನು ಸೆಳೆಯಲು ಯಶಸ್ವಿಯಾಗಿರುವಾಗ ನೀರಿನಾಶ್ರಯ ಇರುವ ಮತ್ತು ದ್ವಿದಳ ಧಾನ್ಯ ಕೃಷಿ ತೀವ್ರವಾಗಿರುವ ರಾಜ್ಯಗಳಲ್ಲಿ ಭಿನ್ನ ಬೆಳೆಗಳನ್ನು ಬೆಳೆಯಬೇಕೆಂಬ 2015ರ ಶಾಂತಕುಮಾರ್ ಸಮಿತಿಯ ಶಿಫಾರಸುಗಳು ಮತ್ತದರ ಅನುಷ್ಠಾನಗಳು ಹೇಗೆ ಆಕರ್ಷಕವಾಗಿ ಕಂಡೀತು?

ಮೇಲಾಗಿ ಗಂಭೀರ ಪ್ರಮಾಣದ ಆಹಾರ ಧಾನ್ಯ ಬೆಲೆಯುಬ್ಬರವನ್ನು ಅನುಮೋದಿತವಾದ ಹಣದುಬ್ಬರದ ಮುಸುಕಿನಲ್ಲಿ ಮುಚ್ಚಿಡುವ ಅವಕಾಶವನ್ನು ಯಾವ ಗ್ರಾಹಕ ಸ್ನೇಹೀ ಸರಕಾರ ತಾನೇ ಕಳೆದುಕೊಂಡೀತು? ಆದರೆ ಈ ಸರಕಾರದ ಗ್ರಾಹಕ ಸ್ನೇಹಿತನವನ್ನು ಪ್ರತಿಪಾದನೆ ಮಾಡುತ್ತಿರುವವರು ಅರ್ಥಮಾಡಿಕೊಳ್ಳಬೇಕಾದ ವಿಷಯವೇನೆಂದರೆ ಈ ಅನುಮೋದಿಸಲಾದ ಹಣದುಬ್ಬರ ಮಿತಿಯ ಗ್ರಹಿಕೆಯು ಸಾಮಾನ್ಯ ಗ್ರಾಹಕರ ಉಳಿತಾಯವನ್ನು ಆಧರಿಸಿ ಅಂದಾಜಿಸಲಾಗುತ್ತದೆ. ಆದರೆ ಆ ಉಳಿತಾಯವನ್ನು ಕೂಡಾ ಸರಕಾರ ತನ್ನ ಲಾಭಕ್ಕಾಗಿ ತಪ್ಪಾಗಿ ಬಳಕೆ ಮಾಡಿಕೊಳ್ಳುತ್ತಿದೆ.

Writer - ಕೃಪೆ: Economic and Political Weekly

contributor

Editor - ಕೃಪೆ: Economic and Political Weekly

contributor

Similar News