ಬಿಜೆಪಿ ಸರಕಾರದೊಳಗಿನ ನುಸುಳುಕೋರರಿಗೆ ‘ಪೌರತ್ವ’ದ ಸಮಸ್ಯೆ

Update: 2020-02-01 05:18 GMT

ಉಪ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಭರ್ಜರಿ ಜಯವನ್ನು ತನ್ನದಾಗಿಸಿಕೊಂಡ ಬಳಿಕ ಸರಕಾರ ಸುಭದ್ರವಾಗಿ, ಅಭಿವೃದ್ಧಿಯ ಕಡೆಗೆ ಗಮನ ಹರಿಸುವುದಕ್ಕೆ ಯಡಿಯೂರಪ್ಪರಿಗೆ ಸಾಧ್ಯವಾಗುತ್ತದೆ ಎಂದು ಭಾವಿಸಲಾಗಿತ್ತು. ಗೆದ್ದ ಎಲ್ಲರಿಗೂ ಸಚಿವ ಸ್ಥಾನಗಳನ್ನು ನೀಡಿ ಇನ್ನಾದರೂ ರಾಜ್ಯದ ಜನರ ಸಮಸ್ಯೆಗಳ ಕಡೆಗೆ ಸರಕಾರ ಗಮನ ಹರಿಸಬಹುದು ಎಂದು ಜನರು ಆಶಿಸಿದ್ದರು. ಆದರೆ ಜನರ ನಿರೀಕ್ಷೆಗಳೆಲ್ಲ ಹುಸಿಯಾಗುವಂತೆ, ಸರಕಾರದೊಳಗಿರುವ ಅಭದ್ರತೆ ಮುಂದುವರಿದಿದೆ. ಯಾರಿಗೆ ಸಚಿವ ಸ್ಥಾನವನ್ನು ನೀಡಬೇಕು ಎನ್ನುವುದರ ಕುರಿತಂತೆ ಒಂದು ನಿರ್ಧಾರಕ್ಕೆ ಬರಲು ಯಡಿಯೂರಪ್ಪರಿಗೆ ಸಾಧ್ಯವಾಗಿಲ್ಲ ಅಥವಾ ವರಿಷ್ಠರು ಯಡಿಯೂರಪ್ಪರಿಗೆ ಅವಕಾಶವನ್ನು ನೀಡುತ್ತಿಲ್ಲ. ಬಿಜೆಪಿಯೊಳಗೆ ಎನ್‌ಆರ್‌ಸಿ ಗದ್ದಲ ಎದ್ದಿದೆ. ಅಂದರೆ ವಲಸಿಗರಿಗೆ ಬಿಜೆಪಿಯ ಪೌರತ್ವ ನೀಡುವ ಕುರಿತಂತೆ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಬಿಜೆಪಿ ನಾಯಕರಿಗೆ ಸಾಧ್ಯವಾಗಿಲ್ಲ. ಜೊತೆಗೆ ಚುನಾವಣೆಯಲ್ಲಿ ಸೋತ ಎಚ್. ವಿಶ್ವನಾಥ್‌ರಂತಹ ಹಿರಿಯರೂ ಬಿಜೆಪಿಯ ಪಾಲಿಗೆ ಕಂಕುಳ ಮುಳ್ಳಾಗಿದ್ದಾರೆ. ವಿಶ್ವನಾಥ್ ಚುನಾವಣೆಯಲ್ಲಿ ಗೆಲ್ಲದೇ ಇದ್ದರೂ, ಜೆಡಿಎಸ್ ನೇತೃತ್ವದ ಸರಕಾರ ಬೀಳಿಸುವಲ್ಲಿ ಅವರ ಪಾತ್ರ ಬಹುದೊಡ್ಡದಿತ್ತು. ಜೆಡಿಎಸ್‌ನ ಅತೃಪ್ತ ಶಾಸಕರ ನೇತೃತ್ವವನ್ನು ವಿಶ್ವನಾಥ್ ಅವರೇ ವಹಿಸಿದ್ದರು.

ಚುನಾವಣೆಯಲ್ಲಿ ಸೋತರೂ, ಬಿಜೆಪಿ ಸರಕಾರ ರಚಿಸುವಲ್ಲಿ ತನ್ನ ಪಾತ್ರವನ್ನು ಅಲ್ಲಗಳೆಯಲಾಗುವುದಿಲ್ಲ ಎನ್ನುವುದು ಇದೀಗ ವಿಶ್ವನಾಥರ ತರ್ಕವಾಗಿದೆ. ಅನೈತಿಕ ದಾರಿಯಲ್ಲೇ ಸರಕಾರ ರಚನೆಯಾಗಿರುವಾಗ ವಿಶ್ವನಾಥ್ ಅವರ ಆಗ್ರಹದಲ್ಲಿ ನೈತಿಕತೆಯನ್ನು ಹುಡುಕುವುದು ತಪ್ಪಾಗುತ್ತದೆ. ಸರಕಾರವನ್ನು ಬೀಳಿಸಿದ್ದೇ, ಅಧಿಕಾರವನ್ನು ತನ್ನದಾಗಿಸಿಕೊಳ್ಳಲು ಎಂದಿರುವಾಗ ವಿಶ್ವನಾಥ್ ಅಧಿಕಾರಕ್ಕಾಗಿ ಆಗ್ರಹಿಸುವುದರಲ್ಲಿ ತಪ್ಪಾದರೂ ಏನಿದೆ? ಆದರೆ ವಿಶ್ವನಾಥ್ ನ್ಯಾಯಾಲಯದಿಂದ ಅನರ್ಹ ಶಾಸಕ ಎಂದು ಗುರುತಿಸಲ್ಪಟ್ಟಿದ್ದಾರೆ ಮತ್ತು ಚುನಾವಣೆಯಲ್ಲೂ ತಮ್ಮ ಅರ್ಹತೆಯನ್ನು ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ವಿಶ್ವನಾಥ್ ಅವರಿಗೆ ಸಚಿವ ಸ್ಥಾನಕೊಟ್ಟರೆ ಅದನ್ನು ನ್ಯಾಯಾಲಯ ಮಾನ್ಯ ಮಾಡುತ್ತದೆಯೇ ಎಂಬ ಪ್ರಶ್ನೆಯೂ ಇದೆ. ಆದರೂ ಸದ್ಯದ ಮಟ್ಟಿಗೆ, ಸಚಿವ ಸ್ಥಾನಕ್ಕಾಗಿ ವಿಶ್ವನಾಥ್ ಪಟ್ಟು ಹಿಡಿದು ಕೂತಿದ್ದಾರೆ ಮತ್ತು ಅದಕ್ಕಾಗಿ ಎಂತಹ ಮಟ್ಟಕ್ಕೂ ಹೋಗಬಲ್ಲೆ ಎಂಬಂತಹ ಬೆದರಿಕೆಯನ್ನು ಸರಕಾರಕ್ಕೆ ನೀಡಿದ್ದಾರೆ. ಸಚಿವ ಸ್ಥಾನ ಸಿಗದೇ ಇದ್ದರೆ ವಿಶ್ವನಾಥ್ ‘ಅನರ್ಹ ಶಾಸಕ’ ಎಂಬ ಶಾಶ್ವತ ಹಣೆಪಟ್ಟಿಯೊಂದಿಗೆ ರಾಜಕೀಯವನ್ನು ಮುಗಿಸಬೇಕಾಗುತ್ತದೆಯಾದುದರಿಂದ ಅವರಿಗಿದು ಮಾಡು ಇಲ್ಲವೇ ಮಡಿ ಎಂಬ ಹೋರಾಟವಾಗಿದೆ.

ರಾಜ್ಯ ರಾಜಕೀಯದ ಅತಿ ದೊಡ್ಡ ತಮಾಷೆಯೆಂದರೆ, ಉಪಮುಖ್ಯಮಂತ್ರಿ ಸ್ಥಾನಕ್ಕಾಗಿಯೂ ಸ್ಪರ್ಧೆ ನಡೆಯುತ್ತಿರುವುದು. ಈ ಸ್ಥಾನವೇ ಅಸಾಂವಿಧಾನಿಕವಾದುದು. ಇದಕ್ಕೆ ಯಾವುದೇ ಮಾನ್ಯತೆಯಿಲ್ಲ. ಮುಖ್ಯಮಂತ್ರಿಯ ಗೈರು ಹಾಜರಿಯಲ್ಲಿ ಉಪಮುಖ್ಯಮಂತ್ರಿ ಕೆಲಸ ಮಾಡಬಹುದೇನೋ. ಉಳಿದಂತೆ ಉಪಮುಖ್ಯಮಂತ್ರಿಗೆ ನೀಡುವ ಎಲ್ಲ ಸೌಲಭ್ಯಗಳೂ ಸರಕಾರಕ್ಕೆ ಒಂದು ಹೊರೆಯೇ ಆಗಿದೆ. ಇದೊಂದು ಅನುಪಯುಕ್ತ ಹುದ್ದೆ. ಇದರಿಂದ ಯಾರಿಗಾದರೂ ಲಾಭವಿದ್ದರೆ, ಭಿನ್ನಮತದಿಂದ ನರಳುವ ಆ ಪಕ್ಷಕ್ಕಷ್ಟೇ. ಅಂದರೆ ಬಿಜೆಪಿಯೊಳಗಿನ ಭಿನ್ನಮತವನ್ನು ತಣಿಸುವುದಕ್ಕಾಗಿ ಈ ರಾಜ್ಯ ಈಗಾಗಲೇ ಮೂವರು ಉಪಮುಖ್ಯಮಂತ್ರಿಗಳನ್ನು ತಾಳಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ. ಆದರೆ ಇದು ಇಷ್ಟಕ್ಕೇ ನಿಲ್ಲುವಂತೆ ಕಾಣುತ್ತಿಲ್ಲ. ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಇನ್ನಷ್ಟು ಜೋರಾಗಿದೆ. ಮುಖ್ಯಮಂತ್ರಿಯ ಮೇಲೆ ಒತ್ತಡ ಯಾವರೀತಿಯಲ್ಲಿದೆ ಎಂದರೆ, ಇನ್ನೊಬ್ಬ ಉಪಮುಖ್ಯಮಂತ್ರಿ ಆಯ್ಕೆಯಾದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಹಾಗಾದಲ್ಲಿ ಅದೊಂದು ರಾಜಕೀಯ ದಾಖಲೆಯೇ ಸರಿ. ಒಂದೋ ಮುಖ್ಯಮಂತ್ರಿ ತೀರಾ ದುರ್ಬಲನಿದ್ದು, ಆತನಿಗೆ ಸಹಾಯಕ್ಕೆಂದು ಒಂದು ಅಥವಾ ಎರಡು ಉಪಮುಖ್ಯಮಂತ್ರಿಗಳನ್ನು ಸಲಹೆಗಾರರ ರೂಪದಲ್ಲಿ ನೇಮಕ ಮಾಡಬಹುದು.ಆದರೆ ಯಡಿಯೂರಪ್ಪ ಆಡಳಿತ ನಡೆಸುವ ವಿಷಯದಲ್ಲಿ ಅನುಭವಿಗಳು. ಹೀಗಿರುವಾಗ, ಈ ನಾಲ್ವರು ಉಪಮುಖ್ಯಮಂತ್ರಿಗಳ ಕೆಲಸವೇನು ಎಂಬ ಪ್ರಶ್ನೆ ಏಳುತ್ತದೆ. ಈಗಾಗಲೇ ಕೆಲವು ಶಾಸಕರ ಅಧಿಕಾರದ ಆಸೆಗಾಗಿ ಎರಡೆರಡು ಚುನಾವಣೆಗಳ ಹೊರೆಗಳನ್ನು ಮತದಾರರು ಹೊತ್ತುಕೊಂಡರು.

ಇದೀಗ ನಾಲ್ವರು ಉಪಮುಖ್ಯ ಮಂತ್ರಿಗಳನ್ನು ಜನರ ಮೇಲೆ ಹೊರಿಸಲು ಸರಕಾರ ಹೊರಟಿದೆ. ಇದು ಈಗಾಗಲೇ ಇರುವ ಮುಖ್ಯಮಂತ್ರಿಗೆ ಕಿರುಕುಳಕೊಡುವ ಭಾಗವಾಗಿದೆಯೇ ಹೊರತು, ಆಡಳಿತ ಸುಗಮಗೊಳಿಸುವುದಕ್ಕಾಗಿ ಅಲ್ಲವೇ ಅಲ್ಲ. ಬಿಜೆಪಿಯಲ್ಲಿದ್ದರೂ ‘ನನ್ನ ನಾಯಕ ಸಿದ್ದರಾಮಯ್ಯ ಅವರೇ ಆಗಿದ್ದಾರೆ’ ಎಂದು ಈಗಲೂ ಘೋಷಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ 17 ಮಂದಿ ಶಾಸಕರಿಗೂ ಸಚಿವ ಸ್ಥಾನ ಸಿಗಬೇಕು ಎಂದು ಹೇಳಿದ್ದಾರೆ. ಗೆದ್ದವರಿಗಲ್ಲದೆ ಸೋತವರಿಗೂ ಅಧಿಕಾರ ಹಂಚಬೇಕು, ಸರಕಾರ ರಚನೆಯಲ್ಲಿ ಅವರ ಪಾತ್ರವೂ ದೊಡ್ಡದಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ‘ನಾವು ಐವತ್ತು ಮಂದಿ ಇದ್ದೇವೆ’ ಎಂಬ ಬೆದರಿಕೆಯನ್ನೂ ಅವರು ಯಡಿಯೂರಪ್ಪರಿಗೆ ನೀಡಿದ್ದಾರೆ. ಅಂದರೆ, ನಮ್ಮ ಬೇಡಿಕೆ ಈಡೇರದೇ ಇದ್ದರೆ ಸರಕಾರವನ್ನು ಉರುಳಿಸುವುದಕ್ಕೆ ನಾವು ಶಕ್ತರು ಎಂಬ ಸ್ಪಷ್ಟ ಎಚ್ಚರಿಕೆ ಅದರಲ್ಲಿದೆ. ಈ ಬೆದರಿಕೆಗೆ ಮಣಿದು ಯಡಿಯೂರಪ್ಪ ಎಲ್ಲರಿಗೂ ಸಚಿವ ಸ್ಥಾನ ನೀಡುವಂತಹ ಸನ್ನಿವೇಶ ಬಿಜೆಪಿಯೊಳಗಿಲ್ಲ. ಯಾಕೆಂದರೆ ಹೊರಗಿನಿಂದ ಬಂದ ನುಸುಳುಕೋರರನ್ನು ಸಂತೃಪ್ತಿ ಪಡಿಸಲು ಹೊರಟರೆ, ಪಕ್ಷದೊಳಗಿರುವ ಮೂಲನಿವಾಸಿಗಳು ಬಂಡೇಳುವ ಸಾಧ್ಯತೆಗಳಿರುತ್ತವೆ. ಒಂದು ಕಡೆ ಹೊಲಿಯಲು ಹೊರಟರೆ, ಇನ್ನೊಂದು ಕಡೆ ಬಿಚ್ಚಿಕೊಳ್ಳುವಂತಹ ಸ್ಥಿತಿ ಬಿಜೆಪಿಯೊಳಗಿದೆ. ಆದುದರಿಂದಲೇ ಸಂಪುಟ ವಿಸ್ತರಣೆಯಿಂದ ಯಡಿಯೂರಪ್ಪ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಬದಲಿಗೆ ಅಲ್ಲಿಂದ ನಿಜವಾದ ಸಮಸ್ಯೆ ಶುರುವಾಗಲಿದೆ. ಯಡಿಯೂರಪ್ಪರ ಈ ಸ್ಥಿತಿಯನ್ನು ನೋಡಿ ಬಿಜೆಪಿಯೊಳಗಿರುವ ಸಂತೋಷ್ ತಂಡ ವಿಕೃತ ಸಂತೋಷವನ್ನೂ ಅನುಭವಿಸುತ್ತಿದೆ.

 ಒಟ್ಟಿನಲ್ಲಿ ಯಡಿಯೂರಪ್ಪ ಸರಕಾರದ ಅವಧಿಯನ್ನು ಮುಗಿಸಿದರೆ ಅದೇ ದೊಡ್ಡ ಸಾಧನೆ. ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟು ಸೃಷ್ಟಿಯಾಗಿರುವ ಸರಕಾರ ಇದು ಆಗಿರದೇ ಇದ್ದುದರಿಂದ, ಸರಕಾರ ನಾಡಿನ ಅಭಿವೃದ್ಧಿಗೆ ಏನು ಮಾಡಿದೆ ಎಂದು ಪ್ರಶ್ನಿಸುವ ನೈತಿಕತೆಯನ್ನು ಜನರೂ ಕಳೆದುಕೊಂಡಿರುವುದು ಯಡಿಯೂರಪ್ಪರಿಗೆ ವರದಾನವಾಗಿದೆ. ಒಟ್ಟಿನಲ್ಲಿ, ಸರಕಾರ ಬೀಳದಂತೆ ನೋಡಿಕೊಳ್ಳುವುದೇ ಸದ್ಯದ ಪಾಲಿಗೆ ಯಡಿಯೂರಪ್ಪರ ಮುಂದಿರುವ ದೊಡ್ಡ ಸವಾಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News