ದುಷ್ಟಶಕ್ತಿಗಳ ಹೆಸರಿನಲ್ಲಿ ಬೆದರಿಸಿ ಬಾಲಕಿಯರ ಅತ್ಯಾಚಾರ ಎಸಗುತ್ತಿದ್ದ ಲಕ್ಷಾನಂದ ಸರಸ್ವತಿ : ಆರೋಪ

Update: 2020-01-31 18:38 GMT

ಚಂಡೀಗಢ, ಜ.31: ಹರ್ಯಾಣದ ರಾಯ್‌ಪುರ ರಾಣಿ ವಿಭಾಗದಲ್ಲಿರುವ ಆಶ್ರಮದಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವ ಆರೋಪಿ 47 ವರ್ಷದ ಸ್ವಯಂಘೋಷಿತ ದೇವಮಾನವ ಸ್ವಾಮಿ ಲಕ್ಷಾನಂದ ಸರಸ್ವತಿ , ದುಷ್ಟಶಕ್ತಿಗಳ ಹೆಸರಿನಲ್ಲಿ ಅವರನ್ನು ಬೆದರಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಲಕ್ಷಾನಂದನ ಬಹುತೇಕ ಅನುಯಾಯಿಗಳು ಪಂಜಾಬ್ ರಾಜ್ಯದವರು. ತನಗೆ ಮಂತ್ರದ ವಿದ್ಯೆ ಕೈವಶವಾಗಿದ್ದು ದುಷ್ಟಶಕ್ತಿಗಳೊಂದಿಗೆ ಮಾತನಾಡಬಲ್ಲೆ. ಯಾರನ್ನು ಬೇಕಾದರೂ ವಶೀಕರಣ ಮಾಡುವ ಶಕ್ತಿಯಿದೆ ಎಂದು ತನ್ನ ಆಶ್ರಮಕ್ಕೆ ಭೇಟಿ ನೀಡುವ ಅನುಯಾಯಿಗಳಿಗೆ ಹೇಳುತ್ತಿದ್ದ. ಆತನ ಆಶ್ರಮದಲ್ಲಿ ತಡರಾತ್ರಿ ಹೋಮ, ಹವನ ನಡೆಸಲಾಗುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ಈತ 14 ಮತ್ತು 15 ವರ್ಷದ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಸಲಾಗಿದೆ. ಈ ಬಾಲಕಿಯರ ಪೋಷಕರು ಲಕ್ಷಾನಂದನ ಅನುಯಾಯಿಗಳಾಗಿದ್ದು ಹಿಮಾಚಲಪ್ರದೇಶದ ಸೋಲನ್ ಜಿಲ್ಲೆಯ ನಿವಾಸಿಗಳು. ಜನವರಿ 25ರಂದು ಆಶ್ರಮದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಲು ಆಗಮಿಸಿದ್ದ ಸಂದರ್ಭ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಇದರಲ್ಲಿ 15 ವರ್ಷದ ಬಾಲಕಿ, ತಾನು ಇತ್ತೀಚೆಗೆ ಆಶ್ರಮಕ್ಕೆ ಭೇಟಿ ನೀಡಿದ್ದಾಗಲೂ ಲಕ್ಷಾನಂದ ಅತ್ಯಾಚಾರ ಎಸಗಿರುವುದಾಗಿ ದೂರಿದ್ದಾಳೆ ಎಂದು ಮಹಿಳಾ ಪೊಲೀಸ್ ಠಾಣೆಯ ಎಸಿಪಿ ನೂಪುರ್ ಬಿಷ್ಣೋಯ್ ತಿಳಿಸಿದ್ದಾರೆ.

ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ್ದ ಕೋಣೆಗೆ ಗುರುವಾರ ವಿಧಿವಿಜ್ಞಾನ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಟ್ಟೆ ಹಾಗೂ ಕೂದಲಿನ ಮಾದರಿಯನ್ನು ಸಂಗ್ರಹಿಸಿದ್ದಾರೆ. ಅಲ್ಲದೆ ಆಶ್ರಮದ ವೀಡಿಯೊ ಚಿತ್ರೀಕರಣವನ್ನೂ ನಡೆಸಲಾಗಿದೆ. ಲಕ್ಷಾನಂದನ ಮೊಬೈಲ್‌ನಲ್ಲಿದ್ದ ಕರೆ ವಿವರಗಳನ್ನು ಪರಿಶೀಲಿಸಿದ್ದು ಆತ ವಿದೇಶದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವುದು ಮತ್ತು ವಿದೇಶಕ್ಕೆ ಭೇಟಿ ನೀಡಿರುವ ಮಾಹಿತಿ ದೊರಕಿದೆ. ಅಲ್ಲದೆ ಹಿಮಾಚಲಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಸಾಕಷ್ಟು ಅನುಯಾಯಿಗಳನ್ನು ಹೊಂದಿರುವ ಈತ ಅವರಿಂದ ಭಾರೀ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿದ್ದ. ರಾಜಕಾರಣಿಗಳ ಸಹಿತ ಹಲವು ಪ್ರಭಾವೀ ವ್ಯಕ್ತಿಗಳು ಆಶ್ರಮಕ್ಕೆ ಭೇಟಿ ನೀಡುತ್ತಿದ್ದರು. ಈತ 4 ಫೇಸ್‌ಬುಕ್ ಖಾತೆಗಳನ್ನು ಹೊಂದಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರಪ್ರದೇಶ ಮೂಲದ ಈತ 2009ರಲ್ಲಿ ರಾಯ್‌ಪುರ್ ರಾಣಿಗೆ ಆಗಮಿಸಿ ಸ್ಥಳೀಯರ ವಿಶ್ವಾಸ ಗಳಿಸಿ ಬಳಿಕ ಛೋಟಾ ತ್ರಿಲೋಕ್‌ಪುರ ಗ್ರಾಮದಲ್ಲಿ ಸನಾತನ ಸನ್ಯಾಸ ಆಶ್ರಮವನ್ನು ಸ್ಥಾಪಿಸಿದ್ದ. ಹಲವಾರು ಕೋಣೆಗಳು, ಯಜ್ಞ ನಡೆಸುವ ಕೋಣೆ ಹಾಗೂ ದೇವಸ್ಥಾನವನ್ನು ಹೊಂದಿದೆ. ಹೊರಗಿಂದ ನೋಡಿದರೆ ಆಶ್ರಮದ ಒಳಗಿನ ಯಾವುದೇ ದೃಶ್ಯ ಕಾಣದಂತೆ ಈ ಆಶ್ರಮವನ್ನು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News