ಕೊಡಗಿನತ್ತ ಗಮನ ಹರಿಸದ ಕೇಂದ್ರ: ಬಜೆಟ್‍ನಲ್ಲಿ ಕಾಫಿ ಕ್ಷೇತ್ರಕ್ಕೆ ಪೂರಕ ಅಂಶಗಳು ಕ್ಷೀಣ

Update: 2020-02-01 18:32 GMT

ಮಡಿಕೇರಿ, ಫೆ.1: ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‍ನಲ್ಲಿ ದಕ್ಷಿಣದ ಕಾಶ್ಮೀರ ಎಂದೇ ಹೆಸರಾಗಿರುವ ವಾಣಿಜ್ಯ ಬೆಳೆ ಕಾಫಿಯ ನೆಲೆಬೀಡು ಕೊಡಗು ಜಿಲ್ಲೆಗೆ ಯಾವುದೇ ಆಶಾದಾಯಕ ಕೊಡುಗೆಗಳು ಕಂಡು ಬಂದಿಲ್ಲ.

ಹವಾಗುಣ ವೈಪರೀತ್ಯ ಮತ್ತು ವನ್ಯಜೀವಿಗಳ ನಿರಂತರ ದಾಳಿಯಿಂದ ಜಿಲ್ಲೆಯ ಬೆಳೆಗಾರರು ಹಾಗೂ ರೈತರು ನಷ್ಟಕ್ಕೊಳಗಾಗುತ್ತಲೇ ಇದ್ದು, ಇದರ ಪರಿಣಾಮ ವರ್ತಕರು ಹಾಗೂ ಕಾರ್ಮಿಕ ವರ್ಗದ ಮೇಲೂ ಬೀಳುತ್ತಿದೆ. ಕಳೆದ ಎರಡು ವರ್ಷಗಳ ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಜಿಲ್ಲೆಗೆ ಅಥವಾ ದೇಶದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬಬಲ್ಲ ಕಾಫಿ ಕ್ಷೇತ್ರಕ್ಕೆ ಪೂರಕವಾದ ಅಂಶಗಳು ಬಜೆಟ್ ನಲ್ಲಿ ಇಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. 

ತೋಟ ಕಾರ್ಮಿಕರ ಜೀವನ ಭದ್ರತೆ, ಅರಣ್ಯ ವಾಸಿಗಳ ಸುರಕ್ಷತೆ, ವನ್ಯಜೀವಿಗಳ ದಾಳಿ ತಡೆ ಸೇರಿದಂತೆ ಸೂಕ್ಷ್ಮ ವಿಚಾರಗಳ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಿಲ್ಲ ಎನ್ನುವ ಆರೋಪವಿದೆ. ಪ್ರವಾಹ ಮತ್ತು ಗುಡ್ಡ ಕುಸಿತಗಳಂತಹ ಅನಾಹುತಗಳಿಂದ ಸಾಕಷ್ಟು ಕಷ್ಟ-ನಷ್ಟ ಅನುಭವಿಸಿರುವ ಕೊಡಗಿನಂತಹ ಪ್ರದೇಶಗಳಿಗೆ ಪ್ರೋತ್ಸಾಹದಾಯಕ ಅಥವಾ ಪರಿಹಾರಕ್ಕೆ ಪೂರಕವಾದ ಅಂಶಗಳನ್ನು ಬಜೆಟ್ ನಲ್ಲಿ ಸೇರಿಸಬಹುದಾಗಿತ್ತು ಎನ್ನುವ ಅಭಿಪ್ರಾಯವಿದೆ.

ಅಭಿಪ್ರಾಯಗಳು

ಇದೊಂದು ಸರ್ವಜನತೆಯ ಸಮಾನತೆಯ ಬಜೆಟ್, ವೈಮಾನಿಕ ಸಂಚಾರ ಶ್ರೀಮಂತರಿಗೆ ಮಾತ್ರ ಸೀಮಿತವಲ್ಲ, ಜನಸಾಮಾನ್ಯರು ಕೂಡ ಸಂಚರಿಸಲು ಪೂರಕವಾದ ಯೋಜನೆ ರೂಪಿಸಲಾಗಿದೆ. ಗ್ರಾ.ಪಂ, ಸರ್ಕಾರಿ ಶಿಕ್ಷಣ ಸಂಸ್ಥೆಗಳು ಹಾಗೂ ಅಂಗನವಾಡಿಗಳನ್ನು ಡಿಜಿಟಿಲೀಕರಣಗೊಳಿಸುವ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವ ಕಾರ್ಯಕ್ಕೆ ಕೈಹಾಕಲಾಗಿದೆ. ಆರೋಗ್ಯ, ಆದಾಯ, ಕೃಷಿ, ರಕ್ಷಣಾ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಜನೌಷಧಿ ಕೇಂದ್ರಗಳನ್ನು ಹೆಚ್ಚು ಮಾಡುವ ಮೂಲಕ ಅನುಕೂಲ ಕಲ್ಪಿಸಲಾಗಿದೆ. ತೆರಿಗೆ ವಿನಾಯಿತಿಗಳನ್ನು ನೀಡಲಾಗಿದೆ, ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಣಗೊಳಿಸಲು ಯೋಜನೆ ರೂಪಿಸಲಾಗಿದೆ. ಒಟ್ಟಿನಲ್ಲಿ ಇದೊಂದು ಆಶಾದಾಯಕ ಬಜೆಟ್.

-ಗೀತಾಗಿರೀಶ್, ಮಡಿಕೇರಿ, ಲೆಕ್ಕ ಪರಿಶೋಧಕರು

ವಾಣಿಜ್ಯ ಬೆಳೆಯಾಗಿರುವ ಕಾಫಿ ಕ್ಷೇತ್ರಕ್ಕೆ ಪ್ರತ್ಯೇಕವಾಗಿ ಪ್ರೋತ್ಸಾಹದಾಯಕ ಅಂಶಗಳನ್ನು ಬಜೆಟ್ ನಲ್ಲಿ ಅಳವಡಿಸಿದಂತೆ ಕಂಡು ಬರುತ್ತಿಲ್ಲ. ಆದರೆ ರಫ್ತು ಉತ್ತೇಜನ ನೀಡಲಾಗಿದೆ ಮತ್ತು ಸುಮಾರು ಐದು ಕೋಟಿ ರೂ.ಗಳವರೆಗಿನ ವ್ಯವಹಾರವನ್ನು ಸುಲಭಗೊಳಿಸಲಾಗಿದೆ. ಇತರ ಮೂಲಗಳಿಂದ ಕಾಫಿ ಕ್ಷೇತ್ರಕ್ಕೆ ಲಾಭವಾಗಬಹುದೆನ್ನುವ ವಿಶ್ವಾಸವಿದೆ.

-ವಿಶ್ವನಾಥ್ ಕೆ. ಬೆಳೆಗಾರರು, ಮಡಿಕೇರಿ

ಬಡವರಿಗೆ ಚಿನ್ನ-ಬೆಳ್ಳಿ ಕೊಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂಧನ ಬೆಲೆ ಏರಿಕೆಯಿಂದ ಸಾಗಣೆಯ ವೆಚ್ಚ ದುಬಾರಿಯಾಗಲಿದ್ದು, ಪ್ರತಿಯೊಂದು ವಸ್ತುಗಳ ಬೆಲೆಯೂ ಹೆಚ್ಚಳವಾಗುತ್ತದೆ, ಇದರಿಂದ ಜನಸಾಮಾನ್ಯರ ಜೀವನವೇ ಕಷ್ಟಕರವಾಗಲಿದೆ. ಸಂಕಷ್ಟದಲ್ಲಿರುವ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಅನ್ನದಾತನ ಬಗ್ಗೆ ಬಜೆಟ್‍ನಲ್ಲಿ ಕರುಣೆ ತೋರಿಲ್ಲ, ಪ್ರಾಕೃತಿಕ ವಿಕೋಪದಿಂದ ಕಷ್ಟ, ನಷ್ಟಗಳನ್ನು ಅನುಭವಿಸಿದವರಿಗೆ ಪರಿಹಾರದ ರೂಪದ ಯಾವುದೇ ಕೊಡುಗೆಗಳಿಲ್ಲ.

-ಟಿ.ಈ.ಸುರೇಶ್, ಜಿಲ್ಲಾ ಕಾಂಗ್ರೆಸ್ ವಕ್ತಾರರು, ಕೊಡಗು ಜಿಲ್ಲೆ.

ಭಾರತೀಯ ಜೀವವಿಮಾ ನಿಗಮವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡಲು ಸಾಧ್ಯವಿಲ್ಲ, ಹಾಗೊಂದು ವೇಳೆ ಮಾಡಲು ಮುಂದಾದರೆ ದೇಶದಲ್ಲಿರುವ 13 ಲಕ್ಷ ಎಲ್ ಐ ಸಿ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸಲಿದ್ದಾರೆ. ಕೇವಲ 10 ನೇ ತರಗತಿ ಉತ್ತೀರ್ಣನಾದವನಿಗೆ ಈ ಸಂಸ್ಥೆ ಉದ್ಯೋಗವನ್ನು ಸೃಷ್ಟಿಸಿಕೊಟ್ಟಿದೆ. ಸರ್ಕಾರಿ ಸಂಸ್ಥೆಗಳು ಖಾಸಗೀಕರಣಗೊಂಡರೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಉದ್ಯೋಗ ಖೋತಾ ಆಗುವುದಕ್ಕಿಂತ ಹೆಚ್ಚಾಗಿ ಒಬಿಸಿ ವರ್ಗಕ್ಕೆ ಉದ್ಯೋಗ ಹಾನಿಯಾಗಲಿದೆ.

-ಪ್ರೇಮ್ ಕುಮಾರ್, ಎಲ್‍ಐಸಿ ಪ್ರತಿನಿಧಿ, ಮಡಿಕೇರಿ

ಗ್ರಾಮ ಪಂಚಾಯತ್‍ಗಳನ್ನು ಡಿಜಿಟಲೀಕರಣ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದನ್ನು ನಾವು ಸ್ವಾಗತಿಸುತ್ತೇವೆ, ಆದರೆ ಗ್ರಾಮ ಪಂಚಾಯತ್ ನೌಕರರ ಹಿತಾಸಕ್ತಿಯನ್ನು ಕೇಂದ್ರ ಸರ್ಕಾರ ಕಡೆಗಣಿಸಿದೆ. ಗ್ರಾ.ಪಂ ಗಳ ಅನುದಾನವನ್ನೇ ಖೋತಾ ಮಾಡಿರುವುದರಿಂದ ಇರುವ ನೌಕರರಿಗೇ ವೇತನ ನೀಡಲು ಹಣವಿಲ್ಲದಾಗಿದೆ. ಮೊದಲು ದುಡಿಯುವ ಕೈಗಳಿಗೆ ವೇತನ ನೀಡುವ ಕಾರ್ಯವನ್ನು ಮಾಡಲಿ, ಗ್ರಾ.ಪಂ ಗಳಿಗೆ ಈ ಬಾರಿಯಾದರೂ ಅನುದಾನ ಹೆಚ್ಚಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿರುವುದರಿಂದ ಗ್ರಾ.ಪಂ ಗಳಲ್ಲಿ ದುಡಿಯುತ್ತಿರುವ ಅರೆಕಾಲಿಕ, ದಿನಗೂಲಿ, ಗುತ್ತಿಗೆ ಆಧಾರದ ನೌಕರರು ಸಂಬಳವಿಲ್ಲದೆ ಪರಿತಪಿಸಬೇಕಾದ ಪರಿಸ್ಥಿತಿ ಎದುರಾಗಬಹುದು.

-ಪಿ.ಆರ್.ಭರತ್, ಜಿಲ್ಲಾ ಅಧ್ಯಕ್ಷರು, ಗ್ರಾಮ ಪಂಚಾಯತ್ ನೌಕರರ ಸಂಘ, ಕೊಡಗು ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News