ಸೋತ ಸವದಿಯನ್ನು ಡಿಸಿಎಂ ಮಾಡಿದ್ದಾರೆ, ವಿಶ್ವನಾಥ್‌ ರನ್ನು ಯಾಕೆ ಮಾಡಬಾರದು?: ಮಹೇಶ್ ಕುಮಟಳ್ಳಿ

Update: 2020-02-02 14:20 GMT

ಬೆಂಗಳೂರು, ಫೆ.2: ನಾನು ಸಚಿವ ಸ್ಥಾನ ತ್ಯಾಗ ಮಾಡಲು ಸಿದ್ಧ. ಆದರೆ, ಸೋತಿರುವ ಮಾಜಿ ಸಚಿವ ಎಚ್.ವಿಶ್ವನಾಥ್‌ಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಶಾಸಕ ಮಹೇಶ್ ಕುಮಟಳ್ಳಿ ಆಗ್ರಹಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚುನಾವಣೆ ವೇಳೆ 35 ಸಾವಿರ ಜನರ ಮುಂದೆ ನನ್ನನ್ನು, ಶ್ರೀಮಂತ ಪಾಟೀಲ್‌ರನ್ನು ಮಂತ್ರಿ ಮಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ಸಿಎಂ ಮಾತು ತಪ್ಪುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ನಾನು ಮಂತ್ರಿ ಆಗಬೇಕು ಎಂಬ ಆಸೆ ಇಲ್ಲ. ಆದರೆ, ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಜನರ ದೃಷ್ಟಿಯಲ್ಲಿ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಒಂದು ವೇಳೆ ನಾನು ತ್ಯಾಗ ಮಾಡಬೇಕು ಅಂದ್ರೆ ಮಾಡಲು ಸಿದ್ಧ. ನಾನು ಬಿಜೆಪಿ ಕಚೇರಿಯಲ್ಲಿ ಕಸ ಬೇಕಾದರು ಗುಡಿಸೋಕೆ ಸಿದ್ಧ. ಪಕ್ಷ ಸಂಘಟನೆ ಮಾಡೋಕು ಸಿದ್ಧ. ಆದರೆ ವಿಶ್ವನಾಥ್‌ಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಮನವಿ ಮಾಡಿದರು.

ಚುನಾವಣೆ ವೇಳೆ ಗೆದ್ದವರಿಗೆ ಸಚಿವ ಸ್ಥಾನ ಕೊಡುತ್ತೇವೆ ಅಂದಿದ್ದರು. ಬಿಜೆಪಿ ನಾಯಕರು ನಿಮ್ಮನ್ನ ಕೈ ಬಿಡಲ್ಲ ಅಂದಿದ್ದರು. ಈಗ ನೋಡಿದ್ರೆ ಹೆಸರು ಕೈ ಬಿಡ್ತಾರೆ ಎಂದು ಚರ್ಚೆಯಾಗ್ತಿರೋದು ಮನಸ್ಸಿಗೆ ನೋವಾಗಿದೆ. ಯಡಿಯೂರಪ್ಪ ಕೊಟ್ಟ ಮಾತು ಮೀರೋದಿಲ್ಲ. ಇನ್ನೂ ಸಿಎಂ ಬಳಿ ನಾವು ಮಾತಾಡಿಲ್ಲ. ನಾನು ಸಿಎಂ ಬಳಿ ಮಾತಾಡುತ್ತೇನೆ ಎಂದು ತಿಳಿಸಿದರು.

ನಮ್ಮ ತ್ಯಾಗದಿಂದ ಈ ಸರಕಾರ ಬಂದಿದೆ. ಎಲ್ಲವನ್ನೂ ಸಹಿಸಿಕೊಂಡು, ನೋವು ಪಡೆದುಕೊಂಡು ನಾವು ಶಾಸಕರಾದೆವು. ಈಗ ಇಂತಹ ಚರ್ಚೆ ಗೊಂದಲ ಮೂಡಿಸಿದೆ. ಸೋತ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದರು. ವಿಶ್ವನಾಥ್‌ರನ್ನ ಯಾಕೆ ಮಾಡಬಾರದು ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News