ಸಂಪುಟ ವಿಸ್ತರಣೆ ಬೆನ್ನಲ್ಲೆ ಅಸಮಾಧಾನ ಸ್ಫೋಟ: ಸತೀಶ್ ಜಾರಕಿಹೊಳಿ

Update: 2020-02-02 14:44 GMT

ಬೆಳಗಾವಿ, ಫೆ. 2: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆ ನಂತರ ಅಸಮಾಧಾನ ಸ್ಫೋಟಗೊಳ್ಳುವುದು ನಿಶ್ಚಿತ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಭವಿಷ್ಯ ನುಡಿದಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಮಂದಿಗೂ ಸಚಿವ ಸ್ಥಾನ ನೀಡಬೇಕು. ಅವರನ್ನು ಮೊದಲು ಸಮಾಧಾನ ಮಾಡಬೇಕೆಂಬುದು ಸಿಎಂ ಆದ್ಯತೆ. ಹೀಗಾಗಿ ಮೂಲ ಬಿಜೆಪಿಗರಿಗೆ ಸ್ಥಾನ ಸಿಗುವುದು ಕಷ್ಟ. ಹೀಗಾಗಿ ಬಂಡಾಯ ಭುಗಿಲೇಳಲಿದೆ ಎಂದರು.

ಸಂಪುಟ ವಿಸ್ತರಣೆ ಮಾಡುವುದು ಹೇಳಿದಷ್ಟು ಸುಲಭವೂ, ಸರಳವು ಅಲ್ಲ. ಮೂಲ ಬಿಜೆಪಿಯವರನ್ನು ಬಿಟ್ಟು ವಲಸಿಗರಿಗೆ ಏಕೆ ಮಂತ್ರಿ ಸ್ಥಾನ ಕೊಡ್ತೀರಿ ಎಂದು ಪ್ರಶ್ನಿಸುತ್ತಿದ್ದಾರೆ ಎಂದ ಅವರು, ಟ್ರಬಲ್ ಮೇಕರ್ ರಮೇಶ್ ಜಾರಕಿಹೊಳಿಯನ್ನು ಸಿಎಂ ಹೇಗೆ ಸಹಿಸಿಕೊಳ್ಳುವರೋ ಕಾದುನೋಡಬೇಕೆಂದು ಟೀಕಿಸಿದರು.

ರಮೇಶ್ ಜಾರಕಿಹೊಳಿ ಯಾವುದೇ ಖಾತೆ ಕೇಳಿದರೂ ಅದರಲ್ಲಿ ಆತನ ಸ್ವಹಿತ ಇರುತ್ತದೆಯೇ ಹೊರತು ಅವರಿಗೆ ಅಭಿವೃದ್ಧಿ ಮುಖ್ಯವಲ್ಲ. ಮಂತ್ರಿ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ನೀಡಿದಂತೆಯೇ ಬಿಜೆಪಿಗೂ ಸಮಸ್ಯೆ ನೀಡುತ್ತಲೇ ಇರುತ್ತಾನೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News