ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆ: ಎನ್‌ಐಎಯಿಂದ ಐಐಟಿ ಗುವಾಹಟಿ ಪ್ರಾಧ್ಯಾಪಕರ ವಿಚಾರಣೆ

Update: 2020-02-02 17:15 GMT
ಫೈಲ್ ಚಿತ್ರ

ಹೊಸದಿಲ್ಲಿ, ಫೆ. 2: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಐಐಟಿ ಗುವಾಹಟಿಯ ಪ್ರಾಧ್ಯಾಪಕ ಅರುಪ್‌ಜ್ಯೋತಿ ಸೈಕಿಯಾ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಾಲ್ಕು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆಗೆ ಒಳಪಡಿಸಿದೆ.

 ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಅವರಿಗೆ ಸಮನ್ಸ್ ನೀಡಲಾಗಿತ್ತು. ಐಐಟಿ ಗುವಾಹಟಿಯಲ್ಲಿ ಇತಿಹಾಸ ಬೋಧಿಸುವ ಸೈಕಿಯಾ ಅವರನ್ನು ಗುವಾಹಟಿಯ ಹೊರವಯದಲ್ಲಿರುವ ಎನ್‌ಐಎಯ ಕಚೇರಿಯಲ್ಲಿ ವಿಚಾರಣೆಗೆ ಒಳಬಪಡಿಸಲಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಅಸ್ಸಾಂನಲ್ಲಿ ನಡೆದ ಪ್ರತಿಭಟನೆ ಬಗ್ಗೆ ಎನ್‌ಐಎ ಗಂಭೀರ ನಿಲುವು ತೆಗೆದುಕೊಂಡಿದೆ. ಪ್ರತಿಭಟನೆ ನಡುವೆ ರೈತ ನಾಯಕ ಅಖಿಲ್ ಗೊಗೊಯಿ ಹಾಗೂ ಅವರ ಸಂಘಟನೆ ಕೃಷಿಕ ಮುಕ್ತಿ ಸಂಗ್ರಾಮ ಸಮಿತಿಯ ಮೂವರು ನಾಯಕರನ್ನು ಬಂಧಿಸಿದೆ.

 ಪ್ರತಿಭಟನೆ ವೇಳೆ ಕೆಎಂಎಸ್‌ಎಸ್ ಕಾರ್ಯಕರ್ತರಿಗೆ ಮಾಡಿದ ಟೆಲಿಫೋನ್ ಕರೆಗಳ ಕುರಿತು ಸೈಕಿಯಾ ಅವರನ್ನು ಪ್ರಶ್ನಿಸಲಾಗಿದೆ. ಸೈಕಿಯಾ ಅವರು ಹೆಸರಾಂತ ವಿದ್ವಾಂಸ ಹಾಗೂ ‘ದಿ ಯುನಿಕ್ವೈಟ್ ರಿವರ್: ಎ ಬಯಾಗ್ರಫಿ ಆಫ್ ದಿ ಬ್ರಹ್ಮಪುತ್ರಾ’ ಪುಸ್ತಕದ ಲೇಖಕ. ಈ ವಲಯದ ಸಾಂಸ್ಕೃತಿಕ ಇತಿಹಾಸದ ಬಗ್ಗೆ ಅವರು ನಾಲ್ಕು ಪುಸ್ತಕಗಳನ್ನು ಬರೆದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಸೈಕಿಯಾ ಪ್ರಮುಖ ಪಾತ್ರವಹಿಸಿರುವ ಬಗ್ಗೆ ತಮ್ಮಲ್ಲಿ ಪುರಾವೆಗಳು ಇವೆ ಎಂದು ರಾಜ್ಯ ಹಣಕಾಸು ಸಚಿವೆ ಹೀಮಂತ ಬಿಸ್ವಾ ಶರ್ಮಾ ಡಿಸೆಂಬರ್‌ನಲ್ಲಿ ಪ್ರತಿಪಾದಿಸಿದ್ದರು.

ರಾಜಧಾನಿ ದಿಸ್ಪುರದಲ್ಲಿರುವ ಅಸ್ಸಾಂ ಸೆಕ್ರೇಟರಿಯೇಟ್‌ಗೆ ಬೆಂಕಿ ಹಚ್ಚುವಲ್ಲಿ ನಡೆದ ಪಿತೂರಿಯಲ್ಲಿ ಇವರು ಪಾಲ್ಗೊಂಡಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News