ಮಹಾತ್ಮಾ ಗಾಂಧಿ, ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು 'ನಾಟಕ' ಎಂದ ಅನಂತ ಕುಮಾರ್ ಹೆಗಡೆ

Update: 2020-02-03 08:48 GMT

ಬೆಂಗಳೂರು: ಸದಾ ಒಂದಿಲ್ಲೊಂದು ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುತ್ತಿರುವ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಈ ಬಾರಿ ಬ್ರಿಟಿಷರ ವಿರುದ್ಧ ಅಹಿಂಸಾ ಹೋರಾಟ ನಡೆಸಿದ ಮಹಾತ್ಮಾ ಗಾಂಧೀಜಿ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರನ್ನು ಅವಹೇಳನ ಮಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರರಲ್ಲಿ 3 ಮಂದಿಯಿದ್ದಾರೆ. ಒಂದು ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ಮಾಡಿದ ಕ್ರಾಂತಿಕಾರಿಗಳು, ಎರಡನೆಯದಾಗಿ ಪ್ರಖರ ಚಿಂತನೆಗಳಿಂದ ಪ್ರೇರೇಪಣೆ ನೀಡಿದವರು. ಇವರು ಕೈಗಳಲ್ಲಿ ಶಸ್ತ್ರ ಹಿಡಿದಿಲ್ಲ, ಬದಲಾಗಿ ಇತರರಲ್ಲಿ ಕ್ರಾಂತಿಯನ್ನು ತುಂಬಿದರು. ಆದರೆ ಮೂರನೆಯವರು 'ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಗೆ ಹೊಡೆಯಿರಿ' ಎನ್ನುವ ಸೋಗಲಾಡಿತನದವರು ಎಂದರು.

ಮೂರನೆ ರೀತಿಯವರು ನಾವು ಹೇಗೆ ಹೋರಾಟ ಮಾಡಬೇಕು ಎಂದು ಬ್ರಿಟಿಷರೊಂದಿಗೆ ಕೇಳುತ್ತಿದ್ದರು. ನೀವು ಹೇಳಿದ ಹಾಗೆ ಮಾಡುತ್ತೇವೆ ಎನ್ನುತ್ತಿದ್ದರು. ನಾವು ಹೋರಾಟ ಮಾಡಿದ ಹಾಗೆ ಮಾಡುತ್ತೇವೆ, ನೀವು ಬಂಧಿಸಿದ ಹಾಗೆ ಮಾಡಿ ಎಂದು ಅವರು ಹೇಳುತ್ತಿದ್ದರು. ಇವರೆಲ್ಲಾ ಲಾಠಿ ಏಟು ತಿನ್ನದವರು. ಇಂದು ಇವರೇ ಇತಿಹಾಸದ ಪುಟಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದಾರೆ ಎಂದು ಅನಂತ ಕುಮಾರ್ ಹೇಳಿದರು.

ನಮ್ಮ ದೇಶಕ್ಕೆ ಹೇಗೆ ಸ್ವಾತಂತ್ರ್ಯ ಬಂತು ಎಂದು ಕೇಳಿದರೆ ಉಪವಾಸ ಸತ್ಯಾಗ್ರಹ ಕೂತಿದ್ದೆವು. ಅದರಿಂದ ಸ್ವಾತಂತ್ರ್ಯ ಬಂತು ಎಂದು ಹೇಳುತ್ತಾರೆ. ಬ್ರಿಟಿಷರು ಹೆದರಿ ಕಂಗಾಲಾಗಿ ಸ್ವಾತಂತ್ಯ ಕೊಟ್ಟರು ಎಂದು ಹೇಳುತ್ತಾರೆ. ಇಂತಹ ಇತಿಹಾಸವನ್ನ ನೋಡಿದರೆ ತಣ್ಣಗಿರುವ ರಕ್ತವೂ ಹೆಪ್ಪುಗಟ್ಟಿ ಹೋಗುತ್ತದೆ ಎಂದವರು ವ್ಯಂಗ್ಯವಾಡಿದರು

ಇಂತಹವರೇ ಈ ದೇಶದಲ್ಲಿ ಮಹಾಪುರುಷರಾದರು. ದೇಶಕ್ಕೋಸ್ಕರ ಶಸ್ತ್ರ ತೆಗೆದವರು ನೇಣಿಗೆ ಕೊರಳೊಡ್ಡಿದರು, ಬ್ರಿಟಿಷರ ಜೊತೆ ಅಡ್ಜಸ್ಟ್ ಮೆಂಟ್ ಮಾಡಿದವರು ಇತಿಹಾಸ ಪುಸ್ತಕದಲ್ಲಿ ಸ್ವಾತಂತ್ಯ ಹೋರಾಟಗಾರರಾದರು ಎಂದು ಅನಂತ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News