ಸಿಎಎ ವಿರೋಧಿ ನಾಟಕ: ಪೊಲೀಸರಿಂದ ಬೀದರ್‌ನ ಶಾಲೆಯ ಮಕ್ಕಳ ಐದನೇ ಬಾರಿ ವಿಚಾರಣೆ

Update: 2020-02-04 18:58 GMT
ಫೋಟೋ ಕೃಪೆ: twitter.com/prajwalmanipal

ಬೀದರ್, ಫೆ.4: ಸಿಎಎ ವಿರೋಧಿಸಿ ನಾಟಕ ಪ್ರದರ್ಶಿಸಿದ ಆರೋಪದಲ್ಲಿ ಬೀದರ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮಂಗಳವಾರ ಶಾಹೀನ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗೆ ಮತ್ತೊಮ್ಮೆ ಭೇಟಿ ನೀಡಿ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಆಗಾಗ ವಿಚಾರಣೆಗಾಗಿ ಶಾಲೆಗೆ ಪೊಲೀಸರು ಭೇಟಿ ನೀಡುತ್ತಿರುರುವ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದರೂ ಸಿವಿಲ್ ವಸ್ತ್ರ ಧರಿಸಿದ ಪೊಲೀಸರು ಮಂಗಳವಾರ ಮತ್ತೊಮ್ಮೆ ಮಕ್ಕಳ ವಿಚಾರಣೆ ನಡೆಸಿದರು. ಸಿಎಎ ವಿರುದ್ಧ ನಾಟಕ ಪ್ರದರ್ಶಿಸಿದ ಆರೋಪದಲ್ಲಿ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕಿ, ಪೋಷಕರ ವಿರುದ್ಧ ಈಗಾಗಲೇ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ನಾಟಕ ಪ್ರದರ್ಶಿಸಿದ ವಿದ್ಯಾರ್ಥಿಗಳನ್ನು ಮತ್ತೆ ಮತ್ತೆ ವಿಚಾರಣೆ ನಡೆಸಿದ ಬಗ್ಗೆ TheNewsMinute ವರದಿಗಾರ ಪೊಲೀಸರಲ್ಲಿ ಪ್ರಶ್ನಿಸಿದ್ದು, ಈ ವೇಳೆ ಬೀದರ್ ಡಿವೈಎಸ್ಪಿ ಬಸವೇಶ್ವರ ಹಿರಾ ಅವರು 'ನಾವು ಕಾನೂನಿನ ಪ್ರಕಾರ ತನಿಖೆ ನಡೆಸುತ್ತಿದ್ದೇವೆ. ಅದರ ಬಗ್ಗೆ ನಾವು ಈಗ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ನಾವು ನಾಟಕದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ' ಎಂದು ಹೇಳಿದ್ದಾರೆ.

'ಶಾಹೀನ್ ಶಾಲೆಯಲ್ಲಿರುವ ಸಣ್ಣ ಕೋಣೆಯಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆ ನಡೆಸಿದರು. ಪೊಲೀಸರು ವಿದ್ಯಾರ್ಥಿಗಳನ್ನು ಎಲ್ಲಿ ಅಭ್ಯಾಸ ಮಾಡಿದ್ದೀರಿ, ಯಾರು ಸಂಭಾಷಣೆಗಳನ್ನು ಕಲಿಸಿದರು, ಧ್ವಜವನ್ನು ಏಕೆ ಬಳಸಲಾಗಿದೆ' ಎಂದು ಮಕ್ಕಳನ್ನು ಪ್ರಶ್ನಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ದೇಶದ್ರೋಹದ ಆರೋಪವು ಹೇಗೆ ಅನ್ವಯವಾಗುತ್ತದೆ ಎಂದು ಪ್ರಶ್ನಿಸಿದಾಗ ಡಿವೈಎಸ್ಪಿ ಅವರು ಅದರ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಎಬಿವಿಪಿ ಕಾರ್ಯಕರ್ತರೊಬ್ಬರ ದೂರನ್ನು ಕೈಗೆತ್ತಿಕೊಂಡ ಪೊಲೀಸರು ದೂರಿನಲ್ಲಿ ದೇಶದ್ರೋಹದ ಆರೋಪ ಮಾಡಿದ್ದಕ್ಕೆ ಎಫ್‌ಐಆರ್‌ನಲ್ಲಿ ದೇಶದ್ರೋಹದ ಆರೋಪಗಳನ್ನು ದಾಖಲಿಸಿದ್ದಾರೆ. ಆದರೆ ಪದೇ ಪದೇ ಪ್ರಶ್ನಿಸಿದರೂ ಅದು 'ದೇಶದ್ರೋಹ ಪ್ರಕರಣ' ಹೇಗಾಗುತ್ತದೆ ಎಂದು ಪೊಲೀಸರು ವಿವರಿಸಿಲ್ಲ ಎಂದು TheNewsMinute ವರದಿಗಾರ ಪ್ರಜ್ವಲ್ ಮಣಿಪಾಲ್ ಟ್ವೀಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News