ರಾಜ್ಯದಲ್ಲಿ ರಕ್ಷಣಾ ಉತ್ಪಾದನಾ ಕ್ಲಸ್ಟರ್ ತೆರೆಯಲು ಚಿಂತನೆ: ಸಚಿವ ಜಗದೀಶ್ ಶೆಟ್ಟರ್

Update: 2020-02-05 18:30 GMT

ಬೆಂಗಳೂರು, ಫೆ.5: ರಕ್ಷಣಾ ಮತ್ತು ಏರೋನಾಟಿಕಲ್ ಉಪಕರಣಗಳ ಸ್ಥಳೀಯ ಉತ್ಪಾದನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯದಲ್ಲಿ ರಕ್ಷಣಾ ಉತ್ಪಾದನಾ ಕ್ಲಸ್ಟರ್ ಅನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಬುಧವಾರ ಉತ್ತರಪ್ರದೇಶದ ಲಕ್ನೋದಲ್ಲಿ ಆರಂಭವಾಗಿರುವ ‘ಡಿಫೆಕ್ಸ್ ಪೋ 2020’ನಲ್ಲಿ ನಿರ್ಮಿಸಲಾಗಿರುವ ಇನ್ವೆಸ್ಟ್ ಕರ್ನಾಟಕ ಪೆವಿಲಿಯನ್ ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ನಮ್ಮ ರಾಜ್ಯದ ಪೆವಿಲಿಯನ್ ಉದ್ಘಾಟನೆ ನೆರವೇರಿಸಿದ್ದು ಸಂಸತ ತಂದಿದೆ. ಕರ್ನಾಟಕದಲ್ಲಿನ ಅವಕಾಶಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆ ಇದಾಗಿದೆ ಎಂದು ಹೇಳಿದರು.

ಆನಂತರ ಸಿಐಐ ಆಯೋಜಿಸಿದ್ದ ಡಿಫೆಕ್ಸೋ-2020 ಸಿಇಓ ಸಮಾವೇಶದಲ್ಲಿ ಮಾತನಾಡಿದ ಜಗದೀಶ್ ಶೆಟ್ಟರ್, ದೇಶದ ಪ್ರಮುಖ ಕೈಗಾರಿಕಾ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕದಲ್ಲಿ ದೇಶೀಯ ರಕ್ಷಣಾ ಕೈಗಾರಿಕಾ ನೆಲೆಯನ್ನು ನಿರ್ಮಿಸಲಾಗುತ್ತಿದೆ. ವಿಶೇಷವಾಗಿ ರಾಜ್ಯದಲ್ಲಿ ರಕ್ಷಣಾ ಸಾಧನಗಳ ತಯಾರಿಕೆಯನ್ನು ಹೆಚ್ಚಿಸುವತ್ತ ಗಮನ ಹರಿಸಿದ್ದೇವೆ ಎಂದರು.

ಕರ್ನಾಟಕವು ಏರೋಸ್ಪೇಸ್ ಮತ್ತು ರಕ್ಷಣಾ ಸಲಕರಣೆ ತಯಾರಿಕೆಯ ನೆಲೆಯಾಗಿದೆ. ದೇಶದ ಏರೋಸ್ಪೇಸ್‌ಗೆ ಸಂಬಂಧಿತ ಬಂಡವಾಳ ಹೂಡಿಕೆಯಲ್ಲಿ ಶೇ.65ರಷ್ಟು ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಗಿದೆ. ಶೇ.70ರಷ್ಟು ಬಿಡಿಭಾಗ ಸರಬರಾಜುದಾರರಿದ್ದಾರೆ. ಅಲ್ಲದೆ, ಶೇ.67ರಷ್ಟು ಏರ್‌ಕ್ರಾಫ್ಟ್ ಹಾಗೂ ಹೆಲಿಕಾಪ್ಟರ್ ಉತ್ಪಾದಕರಿದ್ದಾರೆ ಎಂದು ಅವರು ಹೇಳಿದರು.

ಈ ಮೂಲಕ ಕರ್ನಾಟಕ ಭಾರತದ ಅತಿದೊಡ್ಡ ಏರೋಸ್ಪೇಸ್ ಹಬ್ ಆಗಿದ್ದು, ಎಚ್‌ಎಎಲ್ ನಂತಹ ಕಂಪೆನಿಗಳು ನಮ್ಮಲ್ಲಿ ನೆಲೆಯೂರಿವೆ. ಜೊತೆಗೆ ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಬಿಡಿಭಾಗಗಳು ನಮ್ಮ ರಾಜ್ಯದಿಂದ ತಯಾರಾಗುತ್ತಿವೆ ಎಂದು ಜಗದೀಶ್ ಶೆಟ್ಟರ್ ವಿವರಣೆ ನೀಡಿದರು.

ಏರ್‌ಬಸ್, ಬೋಯಿಂಗ್, ಹನಿವೆಲ್, ಯುಟಿಸಿ (ಕಾಲಿನ್ಸ್), ಜಿಇ ಮತ್ತು ರೋಲ್ಸ್‌ರಾಯ್ಸ್ ಸೇರಿದಂತೆ ಹಲವಾರು ಜಾಗತಿಕ ಏರೋಸ್ಪೇಸ್ ಕಂಪನಿಗಳು ಕರ್ನಾಟಕದಲ್ಲಿ ನೆಲೆಯೂರಿವೆ. ಈ ಮೂಲಕ ಕರ್ನಾಟಕ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ ಎಂದು ಅವರು ಹೇಳಿದರು.

ರಕ್ಷಣಾ ಕ್ಷಿಪಣಿ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ವಿಶ್ವ ದರ್ಜೆಯ ಎಂಆರ್‌ಒ ಮೂಲಸೌಕರ್ಯದೊಂದಿಗೆ ಬೆಂಗಳೂರನ್ನು ಜಾಗತಿಕ ಎಂಆರ್‌ಒ ಹಬ್ ಆಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ. ಜೊತೆಗೆ, ಈಸ್ ಆಫ್ ಡೂಯಿಂಗ್ ಬಿಸಿನೆಸ್ ಅನ್ನು ಸರಳೀಕರಿಸಲು ನಮ್ಮ ಸರಕಾರ ಬದ್ಧವಾಗಿದೆ. ಈ ಬಾರಿ ವರ್ಲ್ಡ್ ರ್ಯಾಂಕಿಂಗ್‌ಗೆ ಪರಿಗಣಿಸುವ ನಾಲ್ಕು ನಗರಗಳಲ್ಲಿ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಉದ್ಯೋಗ ಅವಕಾಶ ಹಾಗೂ ಕೈಗಾರಿಕೋದ್ಯಮವನ್ನು ಸಮಾನವಾಗಿ ವಿಸ್ತರಿಸಲು ಕರ್ನಾಟಕದ ಶ್ರೇಣಿ-2 ಮತ್ತು ಶ್ರೇಣಿ-3 ನಗರಗಳಿಗೆ ಹೂಡಿಕೆದಾರರನ್ನು ಆಕರ್ಷಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಇನ್ವೆಸ್ಟ್ ಕರ್ನಾಟಕ ಸಮಾವೇಶ ಆಯೋಜಿಸಿದ್ದೇವೆ. ಈ ಮೂಲಕ ಉತ್ತರ ಕರ್ನಾಟಕ ಮತ್ತು ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿರುವ ಅವಕಾಶಗಳನ್ನು ಮುಖ್ಯವಾಹಿನಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ಫೆಬ್ರವರಿ 14 ರಂದು ಹುಬ್ಬಳ್ಳಿ ಸಮಾವೇಶ ಹಾಗೂ ನವೆಂಬರ್ 3 ರಿಂದ 5ರ ವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಕೈಗಾರಿಕೋದ್ಯಮಿಗಳನ್ನು ಜಗದೀಶ್ ಶೆಟ್ಟರ್ ಆಹ್ವಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News