ಸಂಪುಟಕ್ಕೆ ಹತ್ತು ಮಂದಿ ‘ಅರ್ಹರ’ ಸೇರ್ಪಡೆ: ಪ್ರಮಾಣ ವಚನ ಸ್ವೀಕಾರ

Update: 2020-02-06 12:59 GMT

ಬೆಂಗಳೂರು, ಫೆ. 6: ಉಪಚುನಾವಣೆಯಲ್ಲಿ ಆಯ್ಕೆಯಾಗಿದ್ದ ರಮೇಶ್ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್, ಆನಂದ್‌ ಸಿಂಗ್, ಡಾ.ಕೆ.ಸುಧಾಕರ್, ಬೈರತಿ ಬಸವರಾಜು, ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ನಾರಾಯಣಗೌಡ ಹಾಗೂ ಶ್ರೀಮಂತ ಪಾಟೀಲ್ ಸೇರಿದಂತೆ 10 ಮಂದಿ ಬಿಎಸ್‌ವೈ ನೇತೃತ್ವದ ಸರಕಾರಕ್ಕೆ ಸೇರ್ಪಡೆಯಾಗುವುದರೊಂದಿಗೆ ಸಂಪುಟ ಎರಡನೆ ಬಾರಿಗೆ ವಿಸ್ತರಣೆಯಾಗಿದೆ. 

ಗುರುವಾರ ರಾಜಭವನದ ಗಾಜಿನ ಮನೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಹತ್ತು ಮಂದಿ ನೂತನ ಸಂಪುಟ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧನೆ ಮಾಡಿದರು. ಯಶವಂತಪುರ ಕ್ಷೇತ್ರದ ಎಸ್.ಟಿ.ಸೋಮಶೇಖರ್, ಗೋಕಾಕ್ ಕ್ಷೇತ್ರದ ರಮೇಶ್ ಎಲ್.ಜಾರಕಿಹೊಳಿ, ವಿಜಯನಗರದ ಆನಂದ್ ಸಿಂಗ್, ಚಿಕ್ಕಬಳ್ಳಾಪುರದ ಡಾ.ಕೆ.ಸುಧಾಕರ್, ಕೆ.ಆರ್.ಪುರ ಕ್ಷೇತ್ರದ ಬಿ.ಎ.ಬಸವರಾಜು, ಯಲ್ಲಾಪುರದ ಶಿವರಾಂ ಹೆಬ್ಬಾರ್, ಹಿರೇಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್, ಮಹಾಲಕ್ಷ್ಮೀಪುರದ ಕೆ.ಗೋಪಾಲಯ್ಯ, ಕೆ.ಆರ್.ಪೇಟೆ ಕ್ಷೇತ್ರದ ಎಂ.ಸಿ. ನಾರಾಯಣಗೌಡ, ಕಾಗವಾಡ ಕ್ಷೇತ್ರದ ಶ್ರೀಮಂತ ಪಾಟೀಲ್ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದೊಡನೆಯೇ, ಹತ್ತು ಮಂದಿ ಸಚಿವರಿಗೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರು ಪುಷ್ಪಗುಚ್ಚ ನೀಡಿ ಅಭಿನಂದನೆ ಸಲ್ಲಿಸಿದರು. ಎಲ್ಲ ಸಚಿವರೂ ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ಬಸವಣ್ಣನ ಹೆಸರನಲ್ಲಿ ಪ್ರಮಾಣ

ಯಲ್ಲಾಪುರ ಕ್ಷೇತ್ರದ ಶಿವರಾಂ ಹೆಬ್ಬಾರ್ ಅವರು ತಮ್ಮ ತಂದೆ-ತಾಯಿ ಹಾಗೂ ತಮ್ಮ ಕ್ಷೇತ್ರ ಜನತೆಯ ಹೆಸರಲ್ಲಿಯೂ ಪ್ರಮಾಣ ವಚನ ಸ್ವೀಕರಿಸಿದರೆ, ಹಿರೇಕೆರೂರು ಕ್ಷೇತ್ರದ ಬಿ.ಸಿ.ಪಾಟೀಲ್ ತಂದೆ-ತಾಯಿ, ಕ್ಷೇತ್ರ ಜನತೆಯ ಜೊತೆಗೆ ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ ಎಂದಿನಂತೆ ಸರಳ ಉಡುಪಿನಲ್ಲಿ ಆಗಮಿಸಿದ್ದರು. ಕೆ.ಗೋಪಾಲಯ್ಯ ಮತ್ತು ಎಸ್.ಟಿ.ಸೋಮಶೇಖರ್ ಅವರು ಸಾಂಪ್ರದಾಯಿಕ ರೇಶ್ಮೆ ಪಂಚೆ-ಅಂಗಿ ಧರಿಸಿದ್ದರು. ಬೈರತಿ ಬಸವರಾಜು, ನಾರಾಯಣಗೌಡ ಮತ್ತು ಡಾ.ಕೆ.ಸುಧಾಕರ್ ಕೇಸರಿ ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದು ಗಮನ ಸೆಳೆಯಿತು.

ಪ್ರಥಮ ಬಾರಿಗೆ: ಎಸ್.ಟಿ.ಸೋಮಶೇಖರ್, ಡಾ.ಕೆ.ಸುಧಾಕರ್, ಬಿ.ಎ. ಬಸವರಾಜು, ಶಿವರಾಮ ಹೆಬ್ಬಾರ್, ಬಿ.ಸಿ.ಪಾಟೀಲ್, ಕೆ.ಗೋಪಾಲಯ್ಯ, ಎಂ.ಸಿ. ನಾರಾಯಣಗೌಡ ಹಾಗೂ ಶ್ರೀಮಂತ ಪಾಟೀಲ್ ಪ್ರಪ್ರಥಮ ಬಾರಿಗೆ ರಾಜ್ಯ ಸಚಿವ ಸಂಪುಟ ಪ್ರವೇಶಿಸಿದ್ದಾರೆ.

ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ಈ ಮುನ್ನ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸಂಪುಟ ವಿಸ್ತರಣೆ ಸಮಾರಂಭಕ್ಕೆ ನೂತನ ಸಚಿವರ ಕುಟುಂಬದ ಸದಸ್ಯರು, ಅಭಿಮಾನಿಗಳು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಾಕ್ಷಿಯಾಗಿದ್ದರು.

ಆಶೀರ್ವಾದ: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಗೋಕಾಕ್ ಕ್ಷೇತ್ರದ ರಮೇಶ್ ಜಾರಕಿಹೊಳಿ ಒಬ್ಬರನ್ನು ಹೊರತುಪಡಿಸಿದ ಉಳಿದ ಎಲ್ಲ ಸಚಿವರು ಸಿಎಂ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.

ಮೊಳಗಿದ ಜಯಘೋಷ: ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರ ಕುಟುಂಬಗಳ ಸದಸ್ಯರು, ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಜಯಘೋಷ ಮೊಳಗಿಸಿ, ಹರ್ಷೋದ್ಘಾರ ವ್ಯಕ್ತಪಡಿಸಿದ ಸಂಭ್ರಮಿಸಿದರು.

ಪ್ರಮಾಣಕ್ಕೆ ಗೈರು: ನೂತನ ಸಚಿವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಹಿರಿಯ ಶಾಸಕ ಉಮೇಶ್ ಕತ್ತಿ, ಸಿ.ಪಿ.ಯೋಗೇಶ್ವರ್, ಮಹೇಶ್ ಕುಮಟಳ್ಳಿ, ಸಚಿವರಾದ ಈಶ್ವರಪ್ಪ, ಶ್ರೀರಾಮುಲು ಸೇರಿದಂತೆ ಹಲವು ಮಂದಿಯ ಗೈರು ಹಾಜರಿ ಎದ್ದು ಕಾಣುತ್ತಿತ್ತು.

ಕಾರ್ಯಕ್ರಮದಲ್ಲಿ ಸಚಿವರಾದ ವಿ.ಸೋಮಣ್ಣ, ಸುರೇಶ್‌ ಕುಮಾರ್, ಆರ್. ಅಶೋಕ್, ನಾಗೇಶ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್ ಕಟೀಲು ಸೇರಿದಂತೆ ಇನ್ನಿತರರು ಹಾಜರಿದ್ದರು. ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಕಾರ್ಯಕ್ರಮ ನಿರೂಪಣೆ ಮಾಡಿದರು.

ಎಸ್.ಟಿ.ಸೋಮಶೇಖರ್, ನಾರಾಯಣಗೌಡ, ಕೆ.ಗೋಪಾಲಯ್ಯ, ಡಾ.ಕೆ. ಸುಧಾಕರ್(ಒಕ್ಕಲಿಗ), ಬಿ.ಸಿ.ಪಾಟೀಲ್(ಲಿಂಗಾಯತ), ರಮೇಶ್ ಜಾರಕಿಹೊಳಿ (ಪರಿಶಿಷ್ಟ ಪಂಗಡ-ಎಸ್ಟಿ), ಶಿವರಾಂ ಹೆಬ್ಬಾರ್(ಬ್ರಾಹ್ಮಣ), ಬಿ.ಎ.ಬಸವರಾಜು (ಕುರುಬ), ಆನಂದ್‌ಸಿಂಗ್(ರಜಪೂತ) ಹಾಗೂ ಶ್ರೀಮಂತ ಪಾಟೀಲ್(ಮರಾಠ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News