ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಶಾಸಕರಾದ ರೇಣುಕಾಚಾರ್ಯ, ಮಹೇಶ್ ಕುಮಟಳ್ಳಿ ಪ್ರತಿಕ್ರಿಯೆ ಏನು ?

Update: 2020-02-06 13:16 GMT

ಬೆಂಗಳೂರು, ಫೆ. 6: ‘ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಪಕ್ಷದ ನಾಯಕರ ಬಳಿ ಭವಿಷ್ಯದಲ್ಲಿ ಎಂದಿಗೂ ಸಚಿವ ಸ್ಥಾನವನ್ನು ಕೇಳುವುದಿಲ್ಲ. ರಾಜಕೀಯದಲ್ಲಿ ಕೆಲವೊಮ್ಮೆ ನಾವು ಸನ್ಯಾಸತ್ವವನ್ನೂ ಸ್ವೀಕರಿಸಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದಾರೆ.

ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನು ಸಚಿವ ಸ್ಥಾನಕ್ಕಾಗಿ ಭವಿಷ್ಯದಲ್ಲೂ ಲಾಬಿ ನಡೆಸುವುದಿಲ್ಲ, ಯಾರ ಬಳಿಯೂ ಬೇಡಿಕೆ ಇಡುವುದಿಲ್ಲ. ನಾನು ಸಚಿವನಾಗಬೇಕೆಂದು ನನ್ನ ಕ್ಷೇತ್ರದ ಜನ ಆಯ್ಕೆ ಮಾಡಿಲ್ಲ. ಹೀಗಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಕೆಲಸ ಮಾಡುತ್ತೇನೆ ಎಂದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ನಾನು ಸ್ನೇಹಿತರು. ಆದರೆ, ಅವರಿಗೆ ಸಚಿವ ಸ್ಥಾನ ತಪ್ಪಿರುವ ವಿಚಾರದಲ್ಲಿ ನನ್ನ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರನ್ನು ಎಳೆದು ತರುವುದು ಸರಿಯಲ್ಲ ಎಂದು ರೇಣುಕಾಚಾರ್ಯ ಇದೇ ವೇಳೆ ಸ್ಪಷ್ಟಪಡಿಸಿದರು.

ಶಾಸಕ ಮಹೇಶ್ ಕುಮಟಳ್ಳಿ

ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣಿಸದಿರುವ ಪಕ್ಷದ ನಿರ್ಧಾರದಿಂದ ಬೇಸರವಾಗಿದೆ. ಆದರೆ, ನಾನು ಪಕ್ಷದ ತೀರ್ಮಾನಕ್ಕೆ ಬದ್ಧ. ಆದರೆ, ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಶಾಸಕ ಮಹೇಶ್ ಕುಮಟಳ್ಳಿ ಕೋರಿದ್ದಾರೆ.

ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಮುಖ್ಯವಲ್ಲ, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸುವ ಕೆಲಸ ಕೊಟ್ಟರೂ ಅದನ್ನು ಮಾಡುತ್ತೇನೆ ಎಂದು ಪುನರುಚ್ಚರಿಸಿದರು.

ಸಚಿವ ಸ್ಥಾನ ಕೈತಪ್ಪಿದಕ್ಕೆ ಬೇಸರವಿಲ್ಲ. ಆದರೆ, ಮನಸ್ಸಿಗೆ ನೋವಾಗಿದೆ. ನಾನು ಹಲವು ವರ್ಷಗಳಿಂದ ರಾಜಕೀಯದಲ್ಲಿದ್ದು, ಗೌರವಯುತ ಸ್ಥಾನ ಸಿಕ್ಕಿತು ಎಂದರೆ ಸಂತೋಷವಾಗುತ್ತದೆ. ನಾನು ಮನುಷ್ಯನಲ್ಲವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿಗೆ ಮುಜುಗರ ಆಗದಂತೆ ನಡೆದುಕೊಳ್ಳುವೆ ಎಂದರು.

‘ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವವರಿಗೆ ಅಭಿನಂದನೆ. ಜೊತೆಗಿದ್ದವರು ಸಚಿವರಾಗುತ್ತಿರುವುದು ಸಂತೋಷ ತಂದಿದ್ದು, ನೂತನ ಸಚಿವರಿಂದ ಅಭಿವೃದ್ಧಿಯಾಗಲಿ. ಸಮಯ ಬಂದಾಗ ನನಗೂ ಸ್ಥಾನ ಸಿಗುತ್ತದೆ. ರಾಜಕಾರಣದಲ್ಲಿ ಇದೆಲ್ಲ ಸಹಜ. ಮುಂದಿನ ದಿನಗಳಲ್ಲಿ ಸಚಿವನಾಗುವ ನಿರೀಕ್ಷೆ ಇದೆ’

-ಎಚ್.ವಿಶ್ವನಾಥ್ , ಮಾಜಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News