ಯುಜಿಸಿ ನೆಟ್ ಪರೀಕ್ಷೆ: ಅಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿನಿಯ ಶೇ.100 ಸಾಧನೆ

Update: 2020-02-06 14:31 GMT
ಫೋಟೊ ಕೃಪೆ: twitter.com/MateenZiaAlig 

ಹೊಸದಿಲ್ಲಿ,ಫೆ.6: ಅಲಿಗಢ ಮುಸ್ಲಿಂ ವಿವಿಯ ಹಿಂದಿ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿನಿ ಕಾಜಲ್ ಭಾರದ್ವಾಜ್ ಅವರು ಯುಜಿಸಿ ನೆಟ್/ಜೆಆರ್‌ಎಫ್ ಪರೀಕ್ಷೆಯಲ್ಲಿ ಶೇ.ನೂರರಷ್ಟು ಅಂಕಗಳನ್ನು ಗಳಿಸುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾರೆ.

ಅಲಿಗಡದ ಪಾಂಚ್ ನಗ್ರಿಯ ಬಡಕುಟುಂಬದಿಂದ ಬಂದಿರುವ ಕಾಜಲ್‌ಗೆ ಕಲಿಕೆಯ ವಿವಿಧ ಪದ್ಧತಿಗಳೊಂದಿಗೆ ನಡೆಸಿದ ಪ್ರಯೋಗಗಳು ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆಯಲು ನೆರವಾಗಿವೆ. ಉತ್ತಮ ಅಂಕಗಳೊಂದಿಗೆ ನೆಟ್/ಜೆಆರ್‌ಎಫ್ ಪರೀಕ್ಷೆಯಲ್ಲಿ ತೇರ್ಗಡೆಗೊಳ್ಳುವ ಮೂಲಕ ಹೆತ್ತವರಿಗೆ ಸಂತಸ ನೀಡಲು ತಾನು ಬಯಸಿದ್ದೆ ಎಂದು ಹೇಳಿದ ಕಾಜಲ್, ಹಣದ ಕೊರತೆಯಿಂದಾಗಿ ವೃತ್ತಿಪರ ಕೋಚಿಂಗ್ ಸೆಂಟರ್‌ಗಳ ಮಾರ್ಗದರ್ಶನ ಪಡೆಯಲು ತನಗೆ ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.

 ಇತರ ಅಭ್ಯರ್ಥಿಗಳಂತೆ ತಾನೂ ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ವಿಶ್ಲೇಷಿಸಿದ್ದೆ. ಆದರೆ ಬಹು ಆಯ್ಕೆ ಪ್ರಶ್ನೆಗಳಲ್ಲಿ ತಪ್ಪು ಉತ್ತರಗಳ ಮೂಲಗಳ ಬಗ್ಗೆಯೂ ಅಧ್ಯಯನ ನಡೆಸಿದ್ದೆ ಎಂದರು.

ಪರೀಕ್ಷೆಯಲ್ಲಿ ಕಾಜಲ್ ಯಶಸ್ಸು ಕೆಲಸವನ್ನು ಕಳೆದುಕೊಂಡು ಒತ್ತಡದಲ್ಲಿದ್ದ ತಂದೆ ಮುನೇಶ ಪಾಲ ಭಾರದ್ವಾಜ್‌ಗೆ ನೆಮ್ಮದಿಯನ್ನುಂಟು ಮಾಡಿದೆ.

ಪರೀಕ್ಷೆಗೆ ತನ್ನ ಸಿದ್ಧತೆಗಳ ಕುರಿತು ಮಾತನಾಡಿದ ಕಾಜಲ್,‘ಪ್ರತಿ ಅಧ್ಯಾಯದ ಅಧ್ಯಯನಕ್ಕೂ ವೇಳಾಪಟ್ಟಿಯನ್ನು ನಿಗದಿಗೊಳಿಸಿದ್ದೆ ಮತ್ತು ಅದಕ್ಕೆ ಅಂಟಿಕೊಂಡಿದ್ದೆ. ಯು ಟ್ಯೂಬ್‌ನಲ್ಲಿಯ ಉಚಿತ ವೀಡಿಯೊಗಳೂ ನನ್ನ ಜ್ಞಾನವನ್ನು ಹೆಚ್ಚಿಸಲು ನೆರವಾಗಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಅಮುದಲ್ಲಿಯ ನನ್ನ ಶಿಕ್ಷಕರ ಮಾರ್ಗದರ್ಶನ ನನ್ನ ಯಶಸ್ಸಿನಲ್ಲಿ ಮುಖ್ಯ ಪಾತ್ರ ವಹಿಸಿದೆ ’ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News