ಮುಂದಿನ ದಿನಗಳಲ್ಲಿ ನನ್ನನ್ನು ಮಂತ್ರಿ ಮಾಡುತ್ತಾರೆ: ಎಂಟಿಬಿ ನಾಗರಾಜ್

Update: 2020-02-06 14:38 GMT

ಬೆಂಗಳೂರು, ಫೆ.6: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಜನತೆ ನನ್ನನ್ನು ಸಚಿವನನ್ನಾಗಿ ನೋಡಲು ಬಯಸಿದ್ದಾರೆ. ಆದರೆ, ಈಗ ನನಗೆ ಅವಕಾಶ ಕೈ ತಪ್ಪಿದ್ದಕ್ಕೆ ಅವರಿಗೆ ಯಾವುದೇ ನೋವಿಲ್ಲ ಎಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.

ಗುರುವಾರ ನಗರದ ಮಹದೇವಪುರದ ಗರುಡಾಚಾರ್ ಪಾಳ್ಯದಲ್ಲಿರುವ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಂಪುಟಕ್ಕೆ ಸೇರ್ಪಡೆಯಾಗುತ್ತಿರುವ ಎಲ್ಲ ನೂತನ ಸಚಿವರಿಗೆ ಅಭಿನಂದನೆಗಳು ಎಂದರು.

ನಮ್ಮಲ್ಲಿ ಯಾವುದೇ ರೀತಿಯ ಅಸಮಾಧಾನವಿಲ್ಲ. ಈಗ ಸಚಿವರಾಗಿರುವವರೆಲ್ಲ ನನ್ನ ಸ್ನೇಹಿತರು. ಬಹಳ ದಿನಗಳಿಂದ ಅವರು ತುಂಬಾ ನೊಂದಿದ್ದರು. ಸಾಕಷ್ಟು ಕಟ್ಟ ಪಟ್ಟಿದ್ದಾರೆ. ಈಗ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿರುವುದು ಖುಷಿ ತಂದಿದೆ ಎಂದು ನಾಗರಾಜ್ ಹೇಳಿದರು.

ನಮಗೂ ಆದಷ್ಟು ಬೇಗ ಒಳ್ಳೆಯ ಸ್ಥಾನಮಾನ ಕೊಡುತ್ತಾರೆ ಎನ್ನುವ ನಂಬಿಕೆಯಿದೆ. ಈ ಸಂಬಂಧ ಮುಖ್ಯಮಂತ್ರಿ ಭರವಸೆಯನ್ನು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ನನ್ನನ್ನು ಸಚಿವನನ್ನಾಗಿ ಮಾಡುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಲಸಿಗರಿಗೆ ಮಣೆ ಹಾಕಲಾಗುತ್ತಿದೆ ಎಂದು ಮೂಲ ಬಿಜೆಪಿಯವರು ಅಸಮಾಧಾನ ವ್ಯಕ್ತಪಡಿಸಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಅಂತಹ ಯಾವುದೇ ಸಮಸ್ಯೆಗಳಿಲ್ಲ. ಒಂದು ವೇಳೆ ಯಾವುದಾದರೂ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಮುಖ್ಯಮಂತ್ರಿ ಸರಿಪಡಿಸುತ್ತಾರೆ ಎಂದರು.

ಸಚಿವ ಸಂಪುಟ ವಿಸ್ತರಣೆಯಿಂದಾಗಿ ಬಿಜೆಪಿ ಮತ್ತಷ್ಟು ಶಕ್ತಿ ಬಂದಿದೆ. ಎಲ್ಲ ಕಾರ್ಯಕರ್ತರು, ಮುಖಂಡರು ಮತ್ತಷ್ಟು ಹುಮ್ಮಸ್ಸಿನಿಂದ ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡುತ್ತಾರೆ ಎಂದು ನಾಗರಾಜ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News