ಅಶ್ಲೀಲ ಚಿತ್ರ, ನಕಲಿ ಸುದ್ದಿ, ಹಿಂಸಾಚಾರ ಪ್ರಚೋದಿಸಲು ಯುಟ್ಯೂಬ್, ಗೂಗಲ್, ವಾಟ್ಸ್‌ಆ್ಯಪ್ ದುರ್ಬಳಕೆ: ಸಚಿವ ರವಿಶಂಕರ್

Update: 2020-02-06 15:36 GMT

ಹೊಸದಿಲ್ಲಿ, ಫೆ. 6: ಅಶ್ಲೀಲ ಚಿತ್ರ, ನಕಲಿ ಸುದ್ದಿ ಹಾಗೂ ಹಿಂಸಾಚಾರ ಪ್ರಚೋದಿಸುವ ಅಂಶಗಳನ್ನು ಪ್ರಸಾರ ಮಾಡಲು ಯುಟ್ಯೂಬ್, ಗೂಗಲ್, ವಾಟ್ಸ್‌ಆ್ಯಪ್‌ನಂತಹ ‘ಸಾರ್ವಜನಿಕ ವೇದಿಕೆ’ಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರ ರವಿಶಂಕರ್ ಪ್ರಸಾದ್ ಕಳವಳ ವ್ಯಕ್ತಪಡಿಸಿದ್ದಾರೆ.

ಅಶ್ಲೀಲ ಚಿತ್ರ, ಮುಖ್ಯವಾಗಿ ಮಕ್ಕಳ ಅಶ್ಲೀಲ ಚಿತ್ರಗಳ ಪ್ರಸರಣಕ್ಕಾಗಿ ಅಂತರ್ಜಾಲವನ್ನು ದುರುಪಯೋಗಪಡಿಸಿಕೊಳ್ಳುವುದು ಆತಂಕಕಾರಿ ವಿಚಾರ. “ನಾನು ಸ್ವಾತಂತ್ರದ ಬೆಂಬಲಿಗ. ಆದರೆ, ನಮಗೆ ಕೆಲವೊಂದು ಸಾಮಾಜಿಕ ಬದ್ಧತೆಗಳಿವೆ ಎಂಬುದನ್ನು ಅರಿತುಕೊಳ್ಳಬೇಕು” ಎಂದರು.

ಮಕ್ಕಳ ಅಶ್ಲೀಲ ಚಿತ್ರ ಹಾಗೂ ದ್ವೇಷದ ಅಶ್ಲೀಲ ಚಿತ್ರಗಳು ಸಂಸತ್ ಕಳವಳಕ್ಕೆ ಕಾರಣವಾಗಿದೆ. ಇದನ್ನು ನಿಗ್ರಹಿಸಲು ಸಂಸದೀಯ ಸಮಿತಿ ಶಿಫಾರಸು ಮಂಜೂರು ಮಾಡಿದೆ. ಆದರೆ, ಸಂಪೂರ್ಣ ದೇಶ ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ರಾಜ್ಯ ಪೊಲೀಸ್ ಈ ಪಿಡುಗನ್ನು ನಿಲ್ಲಿಸಲು ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿ ಹರಡುತ್ತಿರುವ ಬಗ್ಗೆ ಮಾತನಾಡಿದ ಪ್ರಸಾದ್, ‘‘ಒಂದೇ ದಿನದಲ್ಲಿ, ಒಂದೇ ವಿಷಯಕ್ಕೆ ಸಂಬಂಧಿಸಿ ಒಂದೇ ಭೌಗೋಳಿಕ ಪ್ರದೇಶದಲ್ಲಿ ಲಕ್ಷಾಂತರ ಸಂದೇಶಗಳು ಪುನಾರಾವರ್ತಿತವಾಗುವುದು ಹೇಗೆ?’’ ನಾವು ಇದರ ಬಗ್ಗೆ ವಾಟ್ಸ್‌ಆ್ಯಪ್‌ನೊಂದಿಗೆ ಮಾತನಾಡಿದಾಗ, ಅವರು ಫಾರ್ವರ್ಡ್ ಮಿತಿಯನ್ನು ಐವರು ಬಳಕೆದಾರರಿಗೆ ಸೀಮಿತಗೊಳಿಸಿದ್ದಾರೆ ಎಂದರು.

ಅಂತರ್ಜಾಲ ಹಾಗೂ ಸಾಮಾಜಿಕ ಮಾದ್ಯಮದ ಸಕಾರಾತ್ಮಕ ಹಾಗೂ ಋಣಾತ್ಮಕ ಅಂಶಗಳ ಬಗ್ಗೆ ತನ್ನ ನಿಲುವು ವ್ಯಕ್ತಪಡಿಸಿದ ಪ್ರಸಾದ್, ಒಂದೆಡೆ ಡಿಜಿಟಲ್ ಮಾಧ್ಯಮದಲ್ಲಿ ಕೆಲವು ಉತ್ತಮ ಬೆಳವಣಿಗೆ ಆಗಿದೆ. ಆದರೆ, ಇನ್ನೊಂದೆಡೆ ಇದನ್ನು ಹಿಂಸಾಚಾರ ಹಾಗೂ ಕೋಮು ಉದ್ವಿಗ್ನತೆಯನ್ನು ಪ್ರಚಾರ ಮಾಡುವ ಸಾರ್ವಜನಿಕ ವೇದಿಕೆ ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News