ವಿವಿಐಪಿಗಳಿಗಾಗಿ ವಿಶೇಷ ವಿಮಾನ: ಏರ್‌ ಇಂಡಿಯಾಗೆ 822 ಕೋಟಿ ರೂ. ಬಾಕಿ

Update: 2020-02-06 15:47 GMT

ಹೊಸದಿಲ್ಲಿ,ಫೆ.6: ಅರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ಅತಿಗಣ್ಯ ವ್ಯಕ್ತಿಗಳಿಗಾಗಿ (ವಿವಿಏಪಿ) ನಡೆಸಿದ ವಿಶೇಷ ವಿಮಾನಗಳ ಹಾರಾಟದಿಂದ ಬರಬೇಕಾಗಿರುವ ಸುಮಾರು 822 ಕೋಟಿ ರೂ. ಪಾವತಿಯಾಗದೆ ಬಾಕಿಯಿರುವುದು ವಾಯುಪಡೆಯ ನಿವೃತ್ತ ಕಮಾಂಡರ್ ಲೋಕೇಶ್ ಬಾತ್ರಾ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಏರ್‌ ಇಂಡಿಯಾ, 2019ರ ನವೆಂಬರ್ 30ರವರೆಗೆ ವಿವಿಐಪಿ ಬಾಡಿಗೆ ವಿಮಾನಗಳ ಹಾರಾಟದಿಂದಾಗಿ ತನಗೆ ಒಟ್ಟು 822 ಕೋಟಿ ರೂ. ಪಾವತಿಯಾಗಿಲ್ಲವೆಂದು ತಿಳಿಸಿದೆ.

ಇದರ ಜೊತೆಗೆ ತೆರವು ಕಾರ್ಯಾಚರಣೆಗಳಿಗಾಗಿ 9.67 ಕೋಟಿ ರೂ. ಹಾಗೂ ವಿದೇಶಿ ಗಣ್ಯರನ್ನು ಹೊತ್ತೊಯ್ದಿರುವುದಕ್ಕಾಗಿ 12.65 ಕೋಟಿ ರೂ. ತನಗೆ ಬಾಕಿಯುಳಿದಿದೆಯೆಂದು ಅದು ಹೇಳಿದೆ.

ಏರ್‌ ಇಂಡಿಯಾ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಯವರನ್ನು ಕೊಂಡೊಯ್ಯಲು ತನ್ನ ವಿವಿಐಪಿ ಬಾಡಿಗೆ ವಿಮಾನಗಳನ್ನು ಬಳಸಿಕೊಳ್ಳುತ್ತದೆ. ಇವುಗಳ ಶುಲ್ಕವನ್ನು ಆಯಾ ಸಚಿವಾಲಯಗಳು ಪಾವತಿಸುತ್ತವೆ.

ಒಂದು ವೇಳೆ ವಿವಿಐಪಿ ವಿಶೇಷ ವಿಮಾನಗಳ ಹಾರಾಟದಿಂದ ಬಾಕಿಯಿರುವ ಹಣದ ಹೊರೆಯ ಜೊತೆಗೆ, 2019ರ ಮಾರ್ಚ್ 31ರವರೆಗೆ ಸರಕಾರಿ ಅಧಿಕಾರಿಗಳ ಪ್ರಯಾಣದ ಟಿಕೆಟ್ ‌ಗಳಿಗಾಗಿ ಸಾಲವಾಗಿ ಪಡೆದುಕೊಂಡಿರುವ ಟಿಕೆಟ್‌ಗಳಿಗೆ 526.14 ಕೋಟಿ ರೂ. ಬಾಕಿಯಿದೆ.

ಈ 526.14 ಕೋಟಿ ರೂ. ಹಣದಲ್ಲಿ, 236.16 ಕೋಟಿ ರೂ. ಕಳೆದ ಮೂರು ವರ್ಷಗಳಿಂದ ಬಾಕಿಯಿರುವುದಾಗಿದೆ ಎಂದು ಏರ್‌ಇಂಡಿಯಾ ತನ್ನ ಉತ್ತರವೊಂದರಲ್ಲಿ ತಿಳಿಸಿದೆ.

ಶುಲ್ಕ ಪಾವತಿಯಾಗದೆ ಬಾಕಿಯಿರುವ ಹಿನ್ನೆಲೆಯಲ್ಲಿ ಕಳೆದ ಡಿಸೆಂಬರ್‌ ನಿಂದ ಏರ್‌ ಇಂಡಿಯಾವು ಸರಕಾರಿ ಸಂಸ್ಥೆಗಳಿಗೆ ಹಣಪಾವತಿಸಲ್ಪಡದೆ ಟಿಕೆಟ್ ನೀಡುವ ಪದ್ಧತಿಯನ್ನು ನಿಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News