ಪತ್ನಿಯ ಅನೈತಿಕ ಸಂಬಂಧದಿಂದಾಗಿ ಹಿಂದೂ ಮಹಾಸಭಾ ನಾಯಕನ ಹತ್ಯೆ: ಪೊಲೀಸರು

Update: 2020-02-06 16:39 GMT

ಲಕ್ನೋ,ಫೆ.6: ರವಿವಾರ ನಡೆದ ಅಖಿಲ ಭಾರತೀಯ  ಹಿಂದೂ  ಮಹಾಸಭಾದ ಅಧ್ಯಕ್ಷ ರಣಜಿತ್ ಬಚ್ಚನ್ ಅವರ ಹತ್ಯೆಗೆ ದ್ವಿತೀಯ ಪತ್ನಿಯ ವಿವಾಹಬಾಹಿರ ಸಂಬಂಧವೇ ಕಾರಣ ಎಂದು ಲಕ್ನೋ ಪೊಲೀಸ್ ಆಯುಕ್ತ ಸುಜಿತ ಪಾಂಡೆ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಚ್ಚನ್‌ರ ದ್ವಿತೀಯ ಪತ್ನಿ ಸ್ಮತಿ ಶ್ರೀವಾಸ್ತವ,ಆಕೆಯ ಪ್ರಿಯಕರ ದೀಪೇಂದ್ರ ಮತ್ತು ಚಾಲಕ ಸಂಜಿತ್ ಗೌತಮ ಅವರನ್ನು ಗುರುವಾರ ಬಂಧಿಸಲಾಗಿದೆ. ಬಚ್ಚನ್‌ಗೆ ಗುಂಡಿಕ್ಕಿದ್ದ ಜಿತೇಂದ್ರ ಎಂಬಾತನನ್ನು ಇನ್ನಷ್ಟೇ ಬಂಧಿಸಬೇಕಿದೆ ಎಂದು ತಿಳಿಸಿದ ಪಾಂಡೆ, ಸ್ಮೃತಿ ಬಚ್ಚನ್‌ರಿಂದ ವಿಚ್ಛೇದನವನ್ನು ಬಯಸಿದ್ದಳು ಮತ್ತು ಈ ಪ್ರಕರಣ 2016ರಿಂದಲೂ ಕುಟುಂಬ ನ್ಯಾಯಾಲಯದಲ್ಲಿ ಬಾಕಿಯಿದೆ. ದೀಪೇಂದ್ರನನ್ನು ಮದುವೆಯಾಗಲು ಆಕೆ ಉತ್ಸುಕಳಾಗಿದ್ದರೂ ಬಚ್ಚನ್ ಆಕೆಯನ್ನು ಬಿಡಲು ಸಿದ್ಧರಿರಲಿಲ್ಲ. ಜ.17ರಂದು ಸ್ಮೃತಿ ಯನ್ನು ಭೇಟಿಯಾಗಿದ್ದ ಬಚ್ಚನ್ ಆಕೆಗೆ ತಪರಾಕಿಯನ್ನೂ ನೀಡಿದ್ದರು ಮತ್ತು ಇದು ಕೊಲೆಗೆ ಪ್ರಚೋದನೆ ನೀಡಿತ್ತು ಎಂದರು.

ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಚ್ಚನ್ (40) ಅವರನ್ನು ತಲೆಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಹಂತಕನ ದಾಳಿಯಿಂದ ಅವರ ಸೋದರ ಆದಿತ್ಯ ಶ್ರೀವಾಸ್ತವ ಗಾಯಗೊಂಡಿದ್ದರು. ಆತ ಅವರಿಬ್ಬರ ಮೊಬೈಲ್‌ಫೋನ್‌ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ.

ಹತ ಬಚ್ಚನ್ ವಿರುದ್ಧ ನಾಲ್ಕು ಕ್ರಿಮಿನಲ್ ಪ್ರಕರಣಗಳಿವೆ ಎಂದು ಪಾಂಡೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News