ಲಕ್ನೋ: ಟೋಲ್‌ ಪ್ಲಾಝಾದಲ್ಲಿ ಥಳಿಸಿ ರೈತನ ಹತ್ಯೆ

Update: 2020-02-07 04:16 GMT

ಲಕ್ನೋ: ಟೋಲ್‌ ಪ್ಲಾಝಾದಲ್ಲಿ ರೈತನೊಬ್ಬನನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಪಶ್ಚಿಮ ಟೋಲ್ ಪ್ಲಾಝಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳು ಹಾಗೂ ಕೆಲ ಬೌನ್ಸರ್‌ಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಫೆ. 3ರಂದು ಬೌನ್ಸರ್‌ಗಳು ಹಾಗೂ ಟೋಲ್ ಪ್ಲಾಝಾ ಅಧಿಕಾರಿಗಳು ಸೋಹನ್‌ವೀರ್ ಚೌಹಾಣ್ (32) ಎಂಬ ವ್ಯಕ್ತಿಯನ್ನು ಥಳಿಸಿ ಕೊಂದಿದ್ದರು ಎಂದು ಆಪಾದಿಸಲಾಗಿದೆ. ಈ ರೈತ ಕಬ್ಬು ತುಂಬಿದ್ದ ತನ್ನ ಟ್ರ್ಯಾಕ್ಟರ್ ರನ್ನು ವಾಹನದಟ್ಟಣೆಯಿಂದ ಪಾರಾಗುವ ಸಲುವಾಗಿ ಫಾಸ್ಟ್ ಟ್ಯಾಗ್ ಲೇನ್‌ನಲ್ಲಿ ಚಲಾಯಿಸಿಕೊಂಡು ಹೋದ ಕಾರಣಕ್ಕೆ ಆತನನ್ನು ಹಿಡಿದು ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ಮೃತ ರೈತ ಮೀರಠ್‌ನ ದರೂಲಾ ಪೊಲೀಸ್ ಠಾಣೆ ವ್ಯಾಪ್ತಿಯ ದುಲ್ಹೇರಾ ಗ್ರಾಮದ ನಿವಾಸಿ.

ಭಾರತೀಯ ದಂಡಸಂಹಿತೆಯ ಸೆಕ್ಷನ್ 302 (ಹತ್ಯೆಗೆ ಶಿಕ್ಷೆ) ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಎಲ್ಲರೂ ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಮೀರಠ್ ನಗರ ಎಸ್ಪಿ ಅಖಿಲೇಶ್ ನಾರಾಯಣ ಸಿಂಗ್ ಹೇಳಿದ್ದಾರೆ.

ಟೋಲ್ ಪ್ಲಾಝಾದ ಹಿರಿಯ ವ್ಯವಸ್ಥಾಪಕ ಹಾಗೂ ಟೋಲ್‌ಪ್ಲಾಝಾದ ಬೌನ್ಸರ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ಪ್ರತಿದಿನ ಟೋಲ್‌ಪ್ಲಾಝಾ ಕರ್ತವ್ಯಕ್ಕೆ ಹಾಜರಾಗುತ್ತಿದ್ದರೂ, ಪೊಲೀಸರು ಅವರನ್ನು ಬಂಧಿಸುತ್ತಿಲ್ಲ ಎಂದು ಮೃತ ರೈತನ ಕುಟುಂಬದವರು ಆಪಾದಿಸಿದ್ದಾರೆ. ಅಪಘಾತದಿಂದ ಈ ಸಾವು ಸಂಭವಿಸಿದೆ ಎಂದು ಪ್ರಕರಣವನ್ನು ತಿರುಚಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಇದು ಟೋಲ್‌ಪ್ಲಾಝಾ ಅಧಿಕಾರಿಗಳು ಹಾಗೂ ಬೌನ್ಸರ್‌ಗಳ ಯೋಜಿತ ಕೃತ್ಯ ಎಂದು ರೈತನ ತಂದೆ ರಮೇಶ್ ಹಾಗೂ ಸಿಂಗಾಪುರದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ನವೀನ್ ಚೌಹಾಣ್ ಆಪಾದಿಸಿದ್ದಾರೆ.

ಆದರೆ ಟೋಲ್ ವ್ಯವಸ್ಥಾಪಕ ಪ್ರದೀಪ್ ಚೌಧರಿ ಇದನ್ನು ನಿರಾಕರಿಸಿದ್ದು, ಅತಿವೇಗವಾಗಿ ಬಂದ ಟ್ರ್ಯಾಕ್ಟರ್ ಟೋಲ್‌ಪ್ಲಾಝಾದ ತಡೆಯಲ್ಲಿ ಸಿಕ್ಕಿಹಾಕಿಕೊಂಡ ಪರಿಣಾಮ ರೈತ ಮೃತಪಟ್ಟಿದ್ದಾಗಿ ಹೇಳಿದ್ದಾರೆ. ಈ ಸಂಬಂಧ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರಿಗೆ ನೀಡಿದ್ದು, ನ್ಯಾಯಾಂಗದಲ್ಲಿ ನಮಗೆ ನಂಬಿಕೆ ಇದೆ ಎಂದು ಹೇಳಿಕೊಂಡಿದ್ದಾರೆ. ಟ್ರ್ಯಾಕ್ಟರ್‌ನಲ್ಲೇ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಅಣ್ಣ ರವೀಂದ್ರ ಚೌಹಾಣ್ ಈ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

ನಗದು ಪಾವತಿಸುವ ಲೇನ್‌ನಲ್ಲಿ ಉದ್ದದ ವಾಹನ ಸಾಲು ಇದ್ದ ಹಿನ್ನೆಲೆಯಲ್ಲಿ ತಮ್ಮ ಫಾಸ್ಟ್‌ಟ್ಯಾಗ್ ಲೇನ್‌ನಲ್ಲಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಹೋಗಿದ್ದ. ಆಗ ಬಂದ ಬೌನ್ಸರ್‌ಗಳು ನಮ್ಮನ್ನು ಹಿಡಿದು ಥಳಿಸಿದರು ಎಂದು ಆರೋಪಿಸಿದ್ದಾರೆ. ತಾನು ತಪ್ಪಿಸಿಕೊಂಡ ಬಳಿಕವೂ ತಮ್ಮನನ್ನು ಹೊಡೆಯುತ್ತಿದ್ದರು ಎಂದು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯ ಪ್ರಕಾರ ರೈತನ ದೇಹದ ಹಲವು ಭಾಗಗಳಲ್ಲಿ ಮುರಿತ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News