ಮೈತ್ರಿ ಸರಕಾರದ ಕಾಮಗಾರಿಗಳಿಗೆ ತಡೆ ವಿಚಾರ: ವಿವರವಾದ ಆಕ್ಷೇಪಣೆ ಸಲ್ಲಿಸಲು ಸರಕಾರಕ್ಕೆ ಹೈಕೋರ್ಟ್ ಸೂಚನೆ

Update: 2020-02-07 17:02 GMT

ಬೆಂಗಳೂರು, ಫೆ.7: ಕಳೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಘೋಷಿಸಿದ್ದ 8,015 ಕೋಟಿ ಮೊತ್ತದ ಯೋಜನೆಗಳ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ತಡೆ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ವಿವರವಾದ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ.

ನಗರಾಭಿವೃದ್ಧಿ ಕಾಮಗಾರಿಗಳ ಟೆಂಡರ್‌ಗಳಿಗೆ ತಡೆ ನೀಡಿರುವ ಸರಕಾರದ ಕ್ರಮ ಪ್ರಶ್ನಿಸಿ ಕೆರೆ ಅಭಿವೃದ್ಧಿ ಟ್ರಸ್ಟ್‌ಗಳು ದಾಖಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪೊನ್ನಣ್ಣ ಅವರು, ಬಿಬಿಎಂಪಿ ಮನವಿ ಹಾಗೂ ಸಚಿವ ಸಂಪುಟದ ನಿರ್ಧಾರದ ಬಳಿಕವೇ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಕರೆಯಲಾಗಿತ್ತು. ಆದರೆ, ಸಿಎಂ ಇದೀಗ ಕಾಮಗಾರಿಗಳಿಗೆ ಕಾನೂನು ಬಾಹಿರವಾಗಿ ತಡೆ ನೀಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಸರಕಾರದ ಪರ ವಾದಿಸಿದ ಹಿರಿಯ ವಕೀಲರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಘೋಷಿಸಿದ್ದ ಯಾವುದೇ ಯೋಜನೆಗಳ ಕಾಮಗಾರಿಗಳಿಗೆ ತಡೆ ನೀಡಿಲ್ಲ ಬದಲಾಗಿ ಹೊಸ ಟೆಂಡರ್‌ಗಳನ್ನು ಕರೆಯಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಹಾಗಾದರೆ ಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬಹುದಲ್ಲವೇ ಎಂದು ಪ್ರಶ್ನಿಸಿ, ಸರಕಾರಕ್ಕೆ ವಿವರವಾದ ಆಕ್ಷೇಪಣೆ ಸಲ್ಲಿಸಲು ಸೂಚಿಸಿತು. 

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ ಅಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ 88 ಕೆರೆಗಳ ಅಭಿವೃದ್ಧಿ, ಪಾದಚಾರಿ ಮಾರ್ಗ ನವೀಕರಣ, ರಾಜಕಾಲುವೆ ನಿರ್ಮಾಣ ಸೇರಿದಂತೆ ಹಲವು ಮೂಲ ಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಸಿಎಂ ಆಗಿ ಯಡಿಯೂರಪ್ಪಅಧಿಕಾರ ವಹಿಸಿಕೊಂಡ ಬಳಿಕ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲು ಉದ್ದೇಶಿಸಿದ್ದ ಕಾಮಗಾರಿಗಳ ಟೆಂಡರ್‌ಗಳಿಗೆ ಜಾಬ್‌ಕೋಡ್ ನೀಡಲು ನಗರಾಭಿವೃದ್ಧಿ ಇಲಾಖೆ ನಿರಾಕರಿಸಿದೆ.

ಯಡಿಯೂರಪ್ಪ ನೀಡಿದ ಟಿಪ್ಪಣಿ ಆಧರಿಸಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕಾಮಗಾರಿಗಳಿಗೆ ತಡೆ ನೀಡಿದ್ದಾರೆ. ಸಿಎಂ ಆಗಿ ಬಿಎಸ್‌ವೈ ಅಧಿಕಾರ ವಹಿಸಿಕೊಂಡ ವೇಳೆ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು. ಆದರೆ ಇದೀಗ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ನೀಡಿರುವ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News