ಜನ ಅಧಿಕಾರ ಕೊಡಬೇಕಲ್ಲ: ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು

Update: 2020-02-07 17:56 GMT

ಮೈಸೂರು,ಫೆ.7: ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದು ಗೊತ್ತಿದೆ. ಅದನ್ನು ನಾನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸುಪ್ರೀಂ ಕೋರ್ಟ್ ಅವರನ್ನು ಅನರ್ಹರು ಎಂದು ಹೇಳಿದೆ. ಹೀಗಾಗಿ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. 

ಮೈಸೂರಿನ ಶಾರದಾ ದೇವಿ ನಗರದಲ್ಲಿರುವ ತಮ್ಮ ನಿವಾಸದ ಬಳಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಹರು ಅನರ್ಹರು ವಾದ ವಿವಾದದ ಕುರಿತು ಜನತಾ ನ್ಯಾಯಾಲಯದಲ್ಲಿ ಗೆದ್ದಿರುವಾಗ ಸಿದ್ದರಾಮಯ್ಯನವರದ್ದು ಏನಿದೆ ಎಂದು ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆಗೆ ತಿರುಗೇಟು ನೀಡಿದರು. ಅವರು ಅರ್ಹರೋ, ಅನರ್ಹರೋ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಹೇಗೆ ನಡೆಯುತ್ತವೆ ಎಂಬುದೂ ಸಹ ಜನರಿಗೆ ಗೊತ್ತಿರುವಾಗ ಅದನ್ನು ನಾನು ಪ್ರತ್ಯೇಕವಾಗಿ ಹೇಳುವುದಿಲ್ಲ ಎಂದರು.

ಜನ ಅಧಿಕಾರ ಕೊಡಬೇಕಲ್ಲ: ಮತ್ತೊಮ್ಮೆ ನನಗೆ ಅಧಿಕಾರ ಕೊಡಿ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಅವರು ಮತ್ತೊಮ್ಮೆ ನನಗೆ ಅಧಿಕಾರ ಕೊಡಿ ಎಂದು ಕೇಳಬಹುದು, ಆದರೆ ಜನ ಅಧಿಕಾರ ಕೊಡಬೇಕಲ್ಲ. 14 ತಿಂಗಳ ಸಮ್ಮಿಶ್ರ ಸರ್ಕಾರ ಇದ್ದಾಗ ಇವರು ಏನು ಏನು ಮಾಡಿದ್ದಾರೆ ಎಂಬುದು ಗೊತ್ತಿದೆ. ಹೀಗಾಗಿ ಅದೆಲ್ಲಾ ಆಗುವುದಿಲ್ಲ ಎಂದು ಎಚ್‍ಡಿಕೆ ಹೇಳಿಕೆಗೆ ವ್ಯಂಗ್ಯವಾಡಿದರು. 

ರಾಜ್ಯ ಬಜೆಟ್ ನಿರೀಕ್ಷೆ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋದರು. 

ಹಾಸ್ಯ ಕಲಾವಿದ ಟೆನ್ನಿಸ್‍ ಕೃಷ್ಣ ಅವರು ಶಾರದಾದೇವಿ ನಗರದ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿವೆ. ಸ್ಯಾಂಡಲ್ ವುಡ್‍ನಲ್ಲಿ ಪ್ರತ್ಯೇಕ ಗುಂಪೊಂದು ಇದನ್ನು ನಿಯಂತ್ರಿಸುತ್ತಿತ್ತು. ನಾನು ಧೈರ್ಯವಾಗಿ ಮಾಧ್ಯಮದ ಮುಂದೆ ಇದನ್ನೆಲ್ಲಾ ಹೇಳಿದ್ದೇನೆ. ಈಗ ಆ ಗುಂಪು ಒಡೆದಿದ್ದು, ನಮಗೆ ಅವಕಾಶಗಳು ಸಿಗುತ್ತಿವೆ. ಅಭಿಮಾನಿಗಳು ನಮ್ಮ ನಟನೆಗಾಗಿ ಕಾಯುತ್ತಿದ್ದಾರೆ. ಆದರೆ ಇಂತಹವರು ನಮಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಟೆನ್ನಿಸ್ ಕೃಷ್ಣ ಅಸಮಾಧಾನ ಹೊರಹಾಕಿದರು.

ಸಿದ್ದರಾಮಯ್ಯ ಅವರೊಂದಿಗೆ ಉತ್ತಮ ಸಂಬಂಧವಿದೆ. ಅನೇಕ ಬಾರಿ ಮೈಸೂರಿನ ಅವರ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಊಟ ಮಾಡಿದ್ದೇನೆ. ಮೈಸೂರಿನಲ್ಲೇ ಚಿತ್ರೀಕರಣ ನಡೆಯುತ್ತಿದ್ದರಿಂದ ಅವರನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News