ಸಿಎಎ ವಿರುದ್ಧ ರಾಜ್ಯ ವಿಧಾನಸಭೆಗಳ ತೀರ್ಮಾನಗಳು

Update: 2020-02-07 18:30 GMT

ರಾಜ್ಯಗಳು ತೋರ್ಪಡಿಸುತ್ತಿರುವ ಭಿನ್ನಮತಗಳು ಸಂವಿಧಾನಾತ್ಮಕ ಮೌಲ್ಯಗಳನ್ನು ರಕ್ಷಿಸುವಲ್ಲಿ ಒಕ್ಕೂಟವಾದಿ ನೀತಿಯನ್ನು ಪುನರ್‌ಸ್ಥಾಪಿಸಬೇಕೆಂಬ ಮನವಿಯೇ ಆಗಿದೆ.


ಈಗಾಗಲೇ ಭಾರತದ ನಾಲ್ಕು ರಾಜ್ಯಗಳು- ಕೇರಳ, ಪಂಜಾಬ್, ರಾಜಸ್ಥಾನ ಮತ್ತು ಪ. ಬಂಗಾಳ- ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)-2019ರ ವಿರುದ್ಧ ತೀರ್ಮಾನಗಳನ್ನು ಅಂಗೀಕರಿಸಿ ಅದನ್ನು ಹಿಂದೆಗೆದುಕೊಳ್ಳಬೇಕೆಂದು ಕೇಂದ್ರವನ್ನು ಒತ್ತಾಯಿಸಿವೆ. ಅಷ್ಟು ಮಾತ್ರವಲ್ಲದೆ ನ್ಯಾಶನಲ್ ಪಾಪ್ಯುಲೇಷನ್ ರಿಜಿಸ್ಟರ್ (ಎನ್‌ಪಿಆರ್)ಗಾಗಿ ಸಂಗ್ರಹಿಸುವ ಮಾಹಿತಿಗಳು ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್‌ಆರ್‌ಸಿ) ಜೊತೆ ಸಂಬಂಧ ಹೊಂದಿದ್ದಲ್ಲಿ ಎನ್‌ಪಿಆರ್ ಮಾಹಿತಿ ಸಂಗ್ರಹಕ್ಕೂ ಸಹಕರಿಸುವುದಿಲ್ಲವೆಂದು ತಿಳಿಸಿವೆ. ಇನ್ನಷ್ಟು ರಾಜ್ಯಗಳು ಇದೇ ಬಗೆಯ ಭಿನ್ನಮತವನ್ನು ದಾಖಲಿಸುವ ಎಲ್ಲಾ ಸಾಧ್ಯತೆಗಳಿವೆ. ಈ ರಾಜ್ಯಗಳು ಕೈಗೊಂಡಿರುವ ನಿರ್ಣಯಗಳಲ್ಲಿ ಸಮಾನವಾದ ಅಂಶಗಳಿದ್ದರೂ ಬೇರೆಬೇರೆ ರಾಜ್ಯಗಳು ಬೇರೆಬೇರೆ ಅಂಶಗಳಿಗೆ ಒತ್ತು ಕೊಟ್ಟಿರುವುದು ಆಸಕ್ತಿದಾಯಕವಾಗಿದೆ: ಸಿಎಎಯು ‘ಸಮಾನತೆ, ಸ್ವಾತಂತ್ರ್ಯ ಮತ್ತು ಧರ್ಮ ನಿರಪೇಕ್ಷ ತತ್ವ’ವನ್ನು ಉಲ್ಲಂಘಿಸುತ್ತದೆ ಎಂದು ಕೇರಳ ಭಾವಿಸುತ್ತದೆ; ಈ ಕಾಯ್ದೆಯು ನುಸುಳುಕೋರರಿಗೆ ಹೆಚ್ಚಿನ ಅವಕಾಶವನ್ನು ಮಾಡಿಕೊಟ್ಟು ರಾಷ್ಟ್ರದ ಭದ್ರತೆಗೆ ಆಪತ್ತನ್ನು ಉಂಟುಮಾಡುತ್ತದೆ ಎಂದು ಪಂಜಾಬ್ ಭಾವಿಸುತ್ತದೆ;ಈ ಕಾಯ್ದೆಯಲ್ಲಿ ಅಂತರ್ಗತವಾಗಿಯೇ ತಾರತಮ್ಯವಿದೆಯೆಂದು ರಾಜಸ್ಥಾನ ವಿರೋಧಿಸುತ್ತದೆ; ಈ ಕಾಯ್ದೆಯು ದೇಶಾದ್ಯಂತ ಜನರ ಪ್ರತಿರೋಧ ಮತ್ತು ಹೋರಾಟಗಳಿಗೆ ಕಾರಣವಾಗಿ ಕಾನೂನಾತ್ಮಕ ರಾಜಕಾರಣಕ್ಕೆ ವ್ಯತಿರಿಕ್ತವಾಗಿದೆಯೆಂದು ಪ. ಬಂಗಾಳ ಕಾಯ್ದೆಯನ್ನು ವಿರೋಧಿಸುತ್ತದೆ. ಆದರೆ ಕೇಂದ್ರ ಸರಕಾರವು ಮಾತ್ರ ಸಿಎಎ ಅನ್ನು ಜಾರಿ ಮಾಡಲು ಬೇಕಾದ ನಿಯಮಾವಳಿಗಳನ್ನು ರಚಿಸುವಲ್ಲಿ ಉತ್ಸುಕವಾಗಿದೆ. ಆದರೆ ಹೆಚ್ಚುತ್ತಿರುವ ಪ್ರತಿರೋಧವನ್ನು ಮನಗಂಡು ಸಿಎಎಅನ್ನು ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ನಿಂದ ಬೇರ್ಪಡಿಸಿ ಸಿಎಎ ಅಡಿ ಪೌರತ್ವವನ್ನು ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕೆಂಬುದಕ್ಕೆ ಮಾತ್ರ ಸರಕಾರ ಸೀಮಿತಗೊಳ್ಳಬಹುದು. ಆದರೆ ಈ ಕಾಯ್ದೆಯಡಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ನಡೆಯಬಹುದಾದ ಬೇಟೆಗಳು ಮತ್ತು ಅದರ ನಂತರ ನಡೆಯಲಿರುವ ಬೇರೆ ದೇಶಕ್ಕೆ ಅಟ್ಟುವ ಅಥವಾ ನಿರ್ಬಂಧ ಕೇಂದ್ರಗಳಿಗೆ ತಳ್ಳುವ ಪರಿಣಾಮಗಳನ್ನು ಸದ್ಯಕ್ಕೆ ಬದಿಗಿಟ್ಟು ನೋಡಿದರೂ, ಸಿಎಎ ಕಾಯ್ದೆಯಡಿ ಏನಿಲ್ಲವೆಂದರೂ ಹಿಂದೂ, ಸಿಖ್, ಜೈನ್, ಬೌದ್ಧ, ಕ್ರೈಸ್ತ ಮತ್ತು ಪಾರ್ಸಿ ಸಮುದಾಯಗಳಿಗೆ ಸೇರಿದವರೆಂಬ ಸಾಕ್ಷಿಯನ್ನಂತೂ ಒದಗಿಸಲೇ ಬೇಕಾಗುತ್ತದೆ. ಈ ಕ್ರಮವು 2022ರಲ್ಲಿ ಪ. ಬಂಗಾಳದ ವಿಧಾನಸಭೆಗೆ ನಡೆಯಲಿರುವ ಚುನಾವಣೆಗಳ ಸಂದರ್ಭದಲ್ಲಿ ಮತದಾರರನ್ನು ಕೋಮು-ಧ್ರುವೀಕರಿಸುವುದಲ್ಲದೆ ಅಸ್ಸಾಮಿನಲ್ಲಿ ಈಗಾಗಲೇ ಮಾಡಲಾಗಿರುವ ಕೋಮು ವಿಭಜನೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಭಾರತದ ನೆರೆಹೊರೆಯಲ್ಲಿ ಮುಸ್ಲಿಮ್ ಅಧಿಪತ್ಯ ಉಳ್ಳ ರಾಷ್ಟ್ರಗಳಿರುವ ಸಂದರ್ಭದಲ್ಲಿ ಸಿಎಎ ಮೂಲಕ ಒಂದು ಆದರ್ಶ ಭಾರತ ರಾಷ್ಟ್ರೀಯತೆಯನ್ನು ಹೇಗೆ ಹಿಂದೂ ರಾಷ್ಟ್ರವಾಗಿರಬೇಕೆಂಬುದರ ಸುತ್ತ ಎಲ್ಲಾ ಭಾವನಾತ್ಮಕ ಪ್ರೇರಣೆಗಳೂ ಧ್ರುವೀಕರಣಗೊಳ್ಳಬಹುದು. ಈವರೆಗೆ ಯಾವುದೇ ಸಮುದಾಯಗಳಿಗೆ ಸೇರಿದ್ದರೂ ಪೌರತ್ವದಲ್ಲಿ ಸಮಾನತೆಯೇ ಇದ್ದಿತ್ತು. ಸಾಮಾಜಿಕ ಸಮಾನತೆಯನ್ನು ದೊರಕಿಸಿಕೊಡುವಲ್ಲಿ ಮಾತ್ರ ನಾಗರಿಕರ ನಡುವೆ ಸಕಾರಾತ್ಮಕ ತಾರತಮ್ಯವನ್ನು ಮಾಡಲಾಗುತ್ತಿತ್ತು. ಆದರೆ ಸಿಎಎ ಕಾಯ್ದೆಯು ಮೊಟ್ಟಮೊದಲ ಬಾರಿಗೆ ಒಂದು ನಿರ್ದಿಷ್ಟ ಸಮುದಾಯಗಳಿಗೆ ಸೇರಿದರೆ ಮಾತ್ರ ಪೌರತ್ವವನ್ನು ಪಡೆದುಕೊಳ್ಳುವ ರೀತಿ ಈ ದೇಶದ ಪೌರತ್ವದ ಅಡಿಪಾಯವನ್ನೇ ಬದಲಿಸಿಬಿಡುತ್ತದೆ. ಈ ಕಾಯ್ದೆಯು ಹೊರದೂಡುವ ಸಮುದಾಯಗಳು ಎದುರಿಸಬೇಕಾಗುವ ಅವಮಾನ, ಅವಹೇಳನಗಳನ್ನು ಹಗಲುಗುರುಡರನ್ನು ಬಿಟ್ಟರೆ ಮಿಕ್ಕೆಲ್ಲರೂ ಊಹಿಸಿಕೊಳ್ಳಬಲ್ಲರು. ಅದರ ಜೊತೆಗೆ ಈ ಕಾಯ್ದೆಯು ನಾಗರಿಕರನ್ನು ಒಂದು ನಿರ್ದಿಷ್ಟ ಗುರುತನ್ನು ಹೊತ್ತು ತಿರುಗುವಂತೆ ಮಾಡುವ ಮೂಲಕ ಸಾಮಾಜಿಕ ಬಂಧಗಳನ್ನು ತುಂಡರಿಸುತ್ತದೆ. ಹೀಗಾಗಿ ರಾಜ್ಯಗಳು ಮಾಡಿರುವ ತೀರ್ಮಾನಗಳಿಗೆ ಸಾಕಷ್ಟು ತಾತ್ವಿಕ ಪುರಾವೆಗಳಿವೆ. 1980ರ ದಶಕದಲ್ಲಿ ಭಾರತದಲ್ಲಿದ್ದ ಒಂದು ಪಕ್ಷದ ಆಧಿಪತ್ಯ ಕುಸಿಯುತ್ತಿದ್ದಂತೆ ಭಾರತದ ಒಕ್ಕೂಟ ಸಂಬಂಧಗಳಲ್ಲಿ ಒಂದು ಹೊಸ ಸಮತೋಲನ ಏರ್ಪಟ್ಟಿತ್ತು. ಅದರಲ್ಲಿ ಪ್ರಧಾನವಾಗಿ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧಗಳನ್ನು ಹೊಸದಾಗಿ ರೂಪಿಸಿಕೊಳ್ಳುವ ಒತ್ತಿನ ಜೊತೆಗೆ ಇತರ ಪೂರಕ ಅಂಶಗಳೂ ಅಡಕವಾಗಿದ್ದವು: ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಕೆಲವು ಅಧಿಕಾರಗಳನ್ನು, ಸಂಪನ್ಮೂಲಗಳನ್ನು ಮತ್ತು ಜವಾಬ್ದಾರಿಗಳನ್ನೂ ನೀಡಲಾಯಿತು; ಶೆಡ್ಯೂಲ್ ಆರರ ಅಡಿಯಲ್ಲಿದ್ದ ರಾಜ್ಯಗಳ ಜಿಲ್ಲಾ ಪರಿಷತ್ತುಗಳು ಮತ್ತು ದೇಶದ ಇತರೆಡೆಗಳಲ್ಲಿದ್ದ ಶೆಡ್ಯೂಲ್ಡ್ ಪ್ರದೇಶಗಳು ಆದಿವಾಸಿಗಳು ಅಣಿನೆರೆಯುವ ಕೇಂದ್ರಗಳಾದವು; ಸಾಧಾರಣ ಗಾತ್ರದ ರಾಜ್ಯಗಳೂ ಅಸ್ತಿತ್ವಕ್ಕೆ ಬಂದವು; ಹಾಗೂ ಉತ್ತರ ಪ್ರದೇಶದಂತಹ ಬೃಹತ್ ರಾಜ್ಯಗಳು ಸಣ್ಣ ಘಟಕಗಳಾಗಿ ಹೋಳಾಗಲು ಸಾಕಷ್ಟು ಕಾರಣಗಳು ಕೂಡಿ ಬಂದವು. ಒಟ್ಟಾರೆಯಾಗಿ ಜನರ ಭಾಗೀದಾರಿಕೆಯನ್ನು ಹೆಚ್ಚಿಸುವ, ಆಡಳಿತವನ್ನು ಉತ್ತರದಾಯಿಯನ್ನಾಗಿ ಮಾಡುವ ಮತ್ತು ನಾಗರಿಕರನ್ನು ಮತ್ತು ಆಡಳಿತವನ್ನು ಸಂವಾದಿಯಾಗಿಸುವ ಅಧಿಕಾರ ಮತ್ತು ಹೊಣೆಗಾರಿಕೆಗಳು ವಿಕೇಂದ್ರೀಕರಣಗೊಳ್ಳುವ, ಆರೋಗ್ಯಕರ ಧೋರಣೆಗಳು ರೂಪುಗೊಳ್ಳಲಾರಂಭಿಸಿತ್ತು. ಆದರೆ 2014ರ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹಕಾರಿ ಒಕ್ಕೂಟ ತತ್ವವನ್ನು ಪಾಲಿಸುವ ಬಗ್ಗೆ ಪ್ರಾರಂಭದಲ್ಲಿ ಎಷ್ಟೇ ಭರವಸೆಗಳನ್ನು ನೀಡಿದ್ದರೂ ಈ ಎಲ್ಲಾ ಧೋರಣೆಗಳು ಹಿನ್ನಡೆಯನ್ನು ಕಾಣಲಾರಂಭಿಸಿದವು. ಈ ಹಿನ್ನಡೆ ಪ್ರಾರಂಭದಲ್ಲಿ ನಿಧಾನವಾಗಿದ್ದರೂ, 2019ರಲ್ಲಿ ಎನ್‌ಡಿಎ-2 ಸರಕಾರ ಅಧಿಕಾರಕ್ಕೆ ಬಂದಮೇಲೆ ಅತ್ಯಂತ ವೇಗವಾಗಿ ಹಿಂದೆ ಸರಿಯಲು ಆರಂಭಿಸಿದೆ.

ತನ್ನ ಅಗಾಧವಾದ ಪಕ್ಷ ಯಂತ್ರಾಂಗದ ಬೆಂಬಲದೊಂದಿಗೆ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಪಡೆದುಕೊಂಡಿರುವ ಅಸಾಧಾರಣ ಗೆಲುವು, ಪಕ್ಷದ ಕೇಂದ್ರೀಯ ನಾಯಕತ್ವಕ್ಕೆ ಅಧೀನವಾಗಿ ಮತ್ತು ಅದು ಹೇಳಿದಂತೆ ಕೇಳುವ ಸಂಸ್ಕೃತಿಯನ್ನು ಹುಟ್ಟುಹಾಕಿದೆ. ಸಂವಿಧಾನದಲ್ಲಿ ಇರುವ ಔಪಚಾರಿಕ ವಿಧಿ ವಿಧಾನಗಳು ಹಾಗೆಯೇ ಇದ್ದರೂ, ಅವೆಲ್ಲವೂ ಕೇಂದ್ರದ ಆದೇಶಕ್ಕೆ ತಕ್ಕಂತೆ ಬಗ್ಗುವಂತೆ ಮತ್ತು ನಡೆದುಕೊಳ್ಳುವಂತೆ ಮಾಡಲಾಗಿದೆ. ಹೀಗಾಗಿ ಸಿಎಎ ವಿರುದ್ಧ ಈ ಕೆಲವು ರಾಜ್ಯಗಳು ಕೈಗೊಂಡಿರುವ ನಿರ್ಣಯಗಳನ್ನು ಕೇವಲ ಆ ಕಾಯ್ದೆಯಲ್ಲಿರುವ ಕೆಲವು ನಿರ್ದಿಷ್ಟ ಅಂಶಗಳ ವಿರುದ್ಧ ಮಾತ್ರವಲ್ಲದೆ ಭಾರತ ಒಕ್ಕೂಟದಲ್ಲಿ ಒಕ್ಕೂಟ ನೀತಿಯನ್ನು ಪುನರ್ ಸ್ಥಾಪನೆ ಮಾಡಬೇಕೆಂಬ ಆಶಯದ ಭಾಗವಾಗಿ ನೋಡಬೇಕಿದೆ. ಸಿಎಎಯಂತಹ ಕಾಯ್ದೆಯು ಕೆಲವು ರಾಜ್ಯಗಳ ಮೇಲೆ ಹಾನಿಕಾರಕ ಸಾಮಾಜಿಕ ಮತ್ತು ರಾಜಕೀಯ ಪರಿಣಾಮ ಗಳನ್ನುಂಟುಮಾಡುವುದಾದರೂ, ಅಂತಹ ಮಸೂದೆಯು ಜಾರಿಯಾಗದಂತೆ ಪ್ರಭಾವಿಸುವ ಶಕ್ತಿ ಆ ರಾಜ್ಯಗಳಿಗಿಲ್ಲ. ಮೇಲಾಗಿ ಈ ರಾಜ್ಯಗಳಲ್ಲಿ ಕೇಂದ್ರಕ್ಕಿಂತ ಭಿನ್ನವಾದ ಸೈದ್ಧಾಂತಿಕ ಧೋರಣೆಯುಳ್ಳ ಸರಕಾರಗಳು ಆಡಳಿತದಲ್ಲಿದ್ದಾಗ ಅವರ ಅಭಿಪ್ರಾಯವನ್ನು ಪರಿಗಣನೆಗೇ ತೆಗೆದುಕೊಳ್ಳದೆ ಅವರ ಮಹತ್ವದ ನಿಲುವುಗಳನ್ನೇ ಅಲ್ಲಗೆಳೆಯುವ, ನಾಗರಿಕರನ್ನು ವಿಭಜನೆ ಮಾಡುವ, ಅವಿಶ್ವಾಸವನ್ನು ಹರಡುವ, ಅವರು ಸಂವಿಧಾನದ ಮೂಲತತ್ವವೆಂದು ಭಾವಿಸುವ ತತ್ವಗಳನ್ನೇ ಉಲ್ಲಂಘಿಸುವ ಕಾಯ್ದೆಯನ್ನು ಹೇಗೆ ಅನುಷ್ಠಾನಗೊಳಿಸುತ್ತಾರೆಂದು ನಿರೀಕ್ಷಿಸಲು ಸಾಧ್ಯ? ಅಲ್ಲದೆ, ಪೌರತ್ವ ತಿದ್ದುಪಡಿ ಮಸೂದೆಯನ್ನು ವಿಸ್ತೃತವಾಗಿ ಚರ್ಚಿಸಲೂ ಇಲ್ಲ ಹಾಗೂ ಅದನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳಿಸಿಕೊಡಲೂ ಒಪ್ಪಲಿಲ್ಲ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಮೇಲ್ನೋಟಕ್ಕೆ ನೋಡಿದರೆ ಪೌರತ್ವವೆಂಬುದು ಕೇಂದ್ರಕ್ಕೆ ಸೇರಿದ ವಿಷಯವಾಗಿ ಕಂಡುಬಂದರೂ, ಸಿಎಎ ಕಾಯ್ದೆಯಲ್ಲಿ ಸಂವಿಧಾನದ ಮೂಲತತ್ವಗಳ ಮೇಲೆ ಪ್ರಭಾವ ಬೀರಬಲ್ಲ ಹಲವಾರು ಅಂಶಗಳಿವೆ. ಹೀಗಾಗಿ ಸಿಎಎ ವಿರುದ್ಧ ಧ್ವನಿ ಎತ್ತುವುದೊಂದೇ ಸಂವಿಧಾನವನ್ನು ರಕ್ಷಿಸಿಕೊಳ್ಳಲು ರಾಜ್ಯಗಳ ಮುಂದಿದ್ದ ಏಕೈಕ ದಾರಿ ಎಂದು ಹೇಳಬಹುದೇನೋ..

 (ವಲೇರಿಯನ್ ರೊಡ್ರಿಗಸ್ ಅವರು ಐಸಿಎಸ್‌ಎಸ್‌ಆರ್ (ಇಂಡಿಯನ್ ಕೌನ್ಸಿಲ್ ಆಫ್ ಸೊಷಿಯಲ್ ಸೈನ್ಸ್ ರಿಸರ್ಚ್)ನ ನ್ಯಾಷನಲ್ ಫೆಲೋ ಆಗಿದ್ದರು.)

ಕೃಪೆ: Economic and Political Weekly

Writer - ವಲೇರಿಯನ್ ರೊಡ್ರಿಗಸ್

contributor

Editor - ವಲೇರಿಯನ್ ರೊಡ್ರಿಗಸ್

contributor

Similar News